‘ಯುಜಿಸಿಇಟಿ-2020’ ಕೊನೆಯ ಸುತ್ತಿನ ಸೀಟು ಹಂಚಿಕೆ
ಬೆಂಗಳೂರು, ಜ.7: ಹೊಸದಿಲ್ಲಿಯ ಎಐಸಿಟಿಇಯವರು 2020ನೆ ಸಾಲಿನ ವೃತ್ತಿಪರ ಕೋರ್ಸುಗಳ ಪ್ರವೇಶಾತಿಗೆ ದಿನಾಂಕವನ್ನು ಜ.15ರವರೆಗೆ ವಿಸ್ತರಿಸಿರುವುದರಿಂದ, ಸರಕಾರವು ಎರಡನೆ ಮುಂದುವರಿದ ಸುತ್ತಿನ ನಂತರ ಪ್ರವೇಶ ಪಡೆಯದೆ ಇರುವ ಸೀಟುಗಳಿಗೆ ಅಂತಿಮವಾಗಿ, ಕೊನೆಯ ಸುತ್ತಿನ ಸೀಟು ಹಂಚಿಕೆಯನ್ನು ನಡೆಸಲು ಉದ್ದೇಶಿಸಿದೆ.
ಕೊನೆಯ ಸೀಟು ಹಂಚಿಕೆಯ ವೇಳಾಪಟ್ಟಿಯನ್ನು ಸದ್ಯದಲ್ಲಿಯೆ ಪ್ರಾಧಿಕಾರದ ವೆಬ್‍ಸೈಟಿನಲ್ಲಿ ಪ್ರಕಟಿಸಲಾಗುವುದು ಹಾಗೂ ಕೊನೆಯ ಸುತ್ತಿನಲ್ಲಿ ಭಾಗವಹಿಸಲು ಅರ್ಹರಿರುವ ಅಭ್ಯರ್ಥಿಗಳ ಬಗ್ಗೆಯೂ ಪ್ರಕಟಿಸಲಾಗುವುದು ಎಂದು ರಾಜ್ಯ ಪರೀಕ್ಷಾ ಪ್ರಾಧಿಕಾದ ಕಾರ್ಯನಿರ್ವಾಹಕ ನಿರ್ದೇಶಕರ ಪ್ರಕಟಣೆ ತಿಳಿಸಿದೆ.
ಸೀಟುಗಳ ರದ್ದತಿ: ಈ ಹಿನ್ನೆಲೆಯಲ್ಲಿ ಎರಡನೆ ಮುಂದುವರಿದ ಸುತ್ತಿನಲ್ಲಿ ಹಂಚಿಕೆಯಾದ ಅಭ್ಯರ್ಥಿಗಳಿಗೆ ಮಾತ್ರ ಸೀಟನ್ನು ರದ್ದುಪಡಿಸಿಕೊಳ್ಳಲು ಅವಕಾಶ ಕಲ್ಪಿಸಿದ್ದು, ಸೀಟನ್ನು ರದ್ದುಪಡಿಸಿಕೊಳ್ಳಲು ಅಪೇಕ್ಷಿಸುವ ಅಭ್ಯರ್ಥಿಗಳು ಜ.8ರ ಸಂಜೆ 5.30ರೊಳಗಾಗಿ 5000 ರೂ.ಗಳನ್ನು ದಂಡದ ರೂಪದಲ್ಲಿ ಡಿಮ್ಯಾಂಡ್ ಡ್ರಾಫ್ಟ್ ಮೂಲಕ ಸಲ್ಲಿಸಿ, ಸೀಟನ್ನು ರದ್ದುಪಡಿಸಿಕೊಳ್ಳಬಹುದು.
ಒಂದು ವೇಳೆ ಎರಡನೆ ಮುಂದುವರಿದ ಸುತ್ತಿನ ಸೀಟನ್ನು ಕೊನೆಯ ಸುತ್ತಿನ ಸೀಟು ಹಂಚಿಕೆಯ ನಂತರ ರದ್ದುಪಡಿಸಿಕೊಂಡಲ್ಲಿ, ಅಂತಹ ಅಭ್ಯರ್ಥಿಗಳು ಸರಕಾರದ ನಿಯಮ ‘karnataka selection of candidates for admission to Government seats in professional Educational institutions(Amendment) Rules, 2020’ ನಿಯಮ 12ರಂತೆ ಮೊದಲ ವರ್ಷದ ಶುಲ್ಕ ಮತ್ತು ಐದು ಪಟ್ಟು ಶುಲ್ಕವನ್ನು ದಂಡದ ರೂಪದಲ್ಲಿ(ಅಭ್ಯರ್ಥಿಗಳಿಗೆ ಅನ್ವಯಿಸುತ್ತದೆ) ಪಾವತಿಸಿ ಸೀಟನ್ನು ರದ್ದುಪಡಿಸಿಕೊಳ್ಳಬಹುದಾಗಿದೆ.
ಪ್ರಾಧಿಕಾರದ ವೆಬ್‍ಸೈಟಿನಲ್ಲಿ ವಿವರವಾದ ಮಾಹಿತಿಯನ್ನು ಈಗಾಗಲೆ ಪ್ರಕಟಿಸಲಾಗಿದ್ದು, ಸೀಟು ರದ್ದು ಮಾಡಿಕೊಳ್ಳುವ ವಿಧಾನದ ಬಗ್ಗೆ ಅಭ್ಯರ್ಥಿಗಳು ಪ್ರಾಧಿಕಾರದ ವೆಬ್‍ಸೈಟ್ http://kea.kar.nic.in ಗೆ ಭೇಟಿ ನೀಡಬಹುದಾಗಿದೆ.