ಬಂಡಿಪುರ ಅರಣ್ಯದಲ್ಲಿ-ಜಿಂಕೆ-ಬೇಟೆ: ಆರು ಮಂದಿ ಆರೋಪಿಗಳ ಬಂಧನ

Update: 2021-01-08 08:21 GMT

ಮಡಿಕೇರಿ, ಜ.8: ಬಂಡಿಪುರ ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ ಅಕ್ರಮವಾಗಿ ಬೇಟೆಯಾಡಿ ಮೂರು ಜಿಂಕೆ ಹಾಗೂ ಮೊಲವೊಂದನ್ನು ಕೊಂದ ಪ್ರಕರಣವೊಂದಕ್ಕೆ ಆರು ಮಂದಿ ಆರೋಪಿಗಳನ್ನು ಅರಣ್ಯ ಇಲಾಖಾಧಿಕಾರಿಗಳು ಬಂಧಿಸಿದ್ದಾರೆ.

ಸೋಮವಾರ ಪೇಟೆಯ ಚೌಡ್ಲು ಗ್ರಾಮದ ವಿದ್ಯಾಸಾಗರ್(29), ಗೌಡಳ್ಳಿಯ ರವೀಂದ್ರ ಅಲಿಯಾಸ್ ಪೂವಯ್ಯ (41) ಬೆಟ್ಟದಳ್ಳಿಯ ಯಶೋಧರ (34) ತಲ್ತರೆಶೆಟ್ಟಳ್ಳಿಯ ವರಾದ ಪ್ರಸನ್ನ ಜಾನ್ (38) ಸುಜಿತ್ ಅಲಿಯಾಸ್ ತಿಮ್ಮಯ್ಯ (28) ಹಾಗೂ ಶಾಂತಳ್ಳಿಯ ಕುಶಾಲಪ್ಪ (47) ಅವರುಗಳು ಬಂಧಿತ ಆರೋಪಿಗಳಾಗಿದ್ದಾರೆ. ಮತ್ತೊಬ್ಬ ಆರೋಪಿ ನಂಜನಗೂಡಿನವರಾದ ಮಹೇಶ್ (35) ಎಂಬಾತ ತಲೆಮರೆಸಿ ಕೊಂಡಿದ್ದಾನೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.

ಬಂಡಿಪುರದ ಓಂಕಾರ ವನ್ಯಜೀವಿ ವಲಯದ ನಾಗಣಾಪುರ ಬ್ಲಾಕ್ -2ರ ಕಲ್ಲರಕಿಂಡಿ ಎಂಬಲ್ಲಿ ಈ ಕೃತ್ಯ ನಡೆಸಲಾಗಿದೆ. ಬಂಧಿತರಿಂದ ಮಾಂಸ, ಎರಡು ಒಂಟಿ ನಳಿಗೆಯ ಬಂದೂಕು, ಒಂದು ಕಾರನ್ನು ವಶಪಡಿಸಿಕೊಳ್ಳಲಾಗಿದೆ.

 ಆರೋಪಿಗಳು ಮೂರು ಜಿಂಕೆಗಳನ್ನು ಗುಂಡಿಕ್ಕಿ ಹತ್ಯೆಗೈದಿದ್ದರು ಅಲ್ಲದೆ ಉರುಳು ಹಾಕಿ ಮೊಲವೊಂದನ್ನು ಕೂಡ ಹತ್ಯೆಗೈದಿದ್ದಾರೆ. ಒಂದು ಜಿಂಕೆಯ ಚರ್ಮವನ್ನು ಸುಲಿದು ಮಾಂಸವಾಗಿ ಬೇರ್ಪಡಿಸಿ ಅಡುಗೆಗೂ ಸಿದ್ಧತೆ ನಡೆಸಿದ್ದು, ಈ ಸಂದರ್ಭ ಅರಣ್ಯ ಇಲಾಖಾಧಿಕಾರಿಗಳು ಕಾರ್ಯಾಚರಣೆ ನಡೆಸಿ ಇವರುಗಳನ್ನು ಬಂಧಿಸಿದ್ದಾರೆನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News