ಇನ್ನು ಮುಂದೆ ರೈತನ ಬಳಿ ಇರಲಿದೆ ‘ಸ್ವಾಭಿಮಾನಿ ರೈತ' ಗುರುತಿನ ಚೀಟಿ
ಬೆಂಗಳೂರು, ಜ.8: ದೇಶಕ್ಕೆ ಅನ್ನ ನೀಡುವ ಅನ್ನದಾತ ಸ್ವಾಭಿಮಾನಿಯೂ ಆಗಿದ್ದಾನೆ. ಐಟಿ-ಬಿಟಿ, ಸರಕಾರಿ, ಖಾಸಗಿ ಕಚೇರಿಗಳಲ್ಲಿ ಕೆಲಸ ಮಾಡುವ ಸಿಬ್ಬಂದಿ ಬಳಿ ಗುರುತಿನ ಮಾದರಿಯಲ್ಲೇ ‘ಸ್ವಾಭಿಮಾನಿ ರೈತ’ ಹೆಸರಿನ ಗುರುತಿನ ಚೀಟಿಯನ್ನು ರೈತರಿಗೆ ನೀಡಲು ಕೃಷಿ ಇಲಾಖೆ ಸಜ್ಜಾಗಿದೆ.
ಇದೇ ಜ.9 ರಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ತಮ್ಮ ಉಸ್ತುವಾರಿ ಜಿಲ್ಲೆ ಕೊಪ್ಪಳದಿಂದಲೇ ರೈತರಿಗೆ ‘ಸ್ವಾಭಿಮಾನಿ ರೈತ’ ಎನ್ನುವ ಗುರುತಿನ ಚೀಟಿ ವಿತರಣೆಗೆ ಚಾಲನೆ ನೀಡಲಿದ್ದಾರೆ. ತಂತ್ರಾಂಶದಲ್ಲಿ ನೋಂದಾಯಿಸಲ್ಪಟ್ಟಿರುವ ರೈತರಿಗೆ ಸ್ವಾಭಿಮಾನಿ ರೈತರ ಗುರುತಿನ ಚೀಟಿ ನೀಡಲಾಗುತ್ತಿದೆ.
‘ಸ್ವಾಭಿಮಾನಿ ರೈತ’ ಗುರುತಿನ ಚೀಟಿ ಎಂದರೇನು?: ರಾಜ್ಯದ ಇ-ಆಡಳಿತ ಇಲಾಖೆಯು ಎನ್‍ಐಸಿ ಮೂಲಕ ರಾಜ್ಯದ ರೈತರ ವಿವರಗಳನ್ನು ದಾಖಲಿಸಲು ಎಫ್‍ಆರ್‍ಯುಐಟಿಎಸ್ ತಂತ್ರಾಂಶವನ್ನು ಅಭಿವೃದ್ಧಿ ಪಡಿಸಲಾಗಿದ್ದು ಪ್ರತಿಯೊಬ್ಬ ರೈತರಿಗೆ ಒಂದು ಪ್ರತ್ಯೇಕ ಗುರುತಿನ ಸಂಖ್ಯೆಯನ್ನು ನೀಡುವುದು.
ಈ ತಂತ್ರಾಂಶದಲ್ಲಿ ರೈತರ ನೋಂದಣಿಯ ಉದ್ದೇಶವಾಗಿರುತ್ತದೆ. ಸದರಿ ಗುರುತಿನ ಸಂಖ್ಯೆಯ ಆಧಾರದಲ್ಲಿ ರೈತರು FRUITS ತಂತ್ರಾಂಶ ಬಳಸುವ ಎಲ್ಲ ಇಲಾಖೆಗಳ ಸೌಲಭ್ಯಗಳನ್ನು ಪಡೆಯಬಹುದಾಗಿರುತ್ತದೆ. ರೈತರು ಪಡೆಯುವ ಎಲ್ಲಾ ಇಲಾಖೆಗಳ ಸೌಲಭ್ಯಗಳು ಅವರ ಗುರುತಿನ ಸಂಖ್ಯೆಗೆ ಎದುರಾಗಿ ದಾಖಲಾಗುತ್ತದೆ. ತಂತ್ರಾಂಶದಲ್ಲಿ ರೈತರ ನೋಂದಣಿಯು ಜೂನ್ 2018ರಿಂದ ಪ್ರಾರಂಭವಾಗಿದೆ. ಕೃಷಿ ತೋಟಗಾರಿಕೆ, ರೇಶ್ಮೆ, ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಗಳಲ್ಲಿ ರೈತರನ್ನು ಈ ತಂತ್ರಾಂಶದಲ್ಲಿ ನೋಂದಾಯಿಸಲಾಗುತ್ತಿದೆ. ತಂತ್ರಾಂಶದಲ್ಲಿ ರೈತರ ನೋಂದಣಿಗಾಗಿ ರೈತರ ಗುರುತು, ವಿಳಾಸ, ಭೂ ಹಿಡುವಳಿ, ಆಧಾರ್ ಗುರುತಿನ ಸಂಖ್ಯೆಗೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸಲಾಗುತ್ತಿದೆ. ಈ ಎಲ್ಲ ಮಾಹಿತಿಯನ್ನಯ ನೋಂದಣಿ ಸಂಖ್ಯೆ ಆಧಾರಿತ ಗುರುತಿನ ಚೀಟಿಯನ್ನು ನೀಡಲು ಪ್ರಸ್ತಾಪಿಸಲಾಗಿದೆ. ಈ ತಂತ್ರಾಂಶವನ್ನು ಕೃಷಿ ಹಾಗೂ ಕೃಷಿ ಸಂಬಂಧಿತ ಇಲಾಖೆಗಳಲ್ಲಿ ಒಂದು ಬಾರಿ ಮಾತ್ರ ರೈತರ ನೋಂದಣಿ ಮಾಡಲು ಅಭಿವೃದ್ಧಿ ಪಡಿಸಲಾಗಿದೆ.
ಗುರುತಿನ ಚೀಟಿಯಿಂದೇನು ಲಾಭ?: ಇದರಿಂದ ರೈತರು ಬೆಳೆ ಸಾಲ, ಪಿ.ಎಂ. ಕಿಸಾನ್ ಮುಂತಾದ ವಿವಿಧ ಯೋಜನೆಗಳಡಿ ಸಹಾಯಧನ ಪಡೆಯಲು ಕಚೇರಿಗಳಲ್ಲಿ ವ್ಯಯಿಸಬೇಕಾದ ಸಮಯವನ್ನು ಉಳಿಸಬಹುದು ಹಾಗೂ ರೈತರಿಗೆ ಇದು ಒಂದು ವ್ಯಾವಹಾರಿಕ ಗುರುತಿನ ಚೀಟಿಯಾಗುತ್ತದೆ.
ವಿವಿಧ ದಾಖಲಾತಿಗಳನ್ನು ಭೂ ಹಿಡುವಳಿ ವಿವರಗಳನ್ನು ಪರಿಶೀಲಿಸಿ ರೈತರಿಗೆ ಈ ನೋಂದಣಿ ಸಂಖ್ಯೆ ಆಧಾರಿತ ಗುರುತಿನ ಚೀಟಿಯನ್ನು ನೀಡುವುದರಿಂದ ರೈತರು, ಬೆಳೆಸಾಲ ಪಿಎಂಕಿಸಾನ್ ಮುಂತಾದ ವಿವಿಧ ಯೋಜನೆಗಳಡಿ ಸಹಾಯಧನ ಪಡೆಯಲು ಕಚೇರಿಗಳಲ್ಲಿ ವ್ಯಯಿಸಬೇಕಾದ ಸಮಯವನ್ನು ಉಳಿಸಬಹುದು ಹಾಗೂ ರೈತರಿಗೆ ಇದು ಒಂದು ವ್ಯಾವಹಾರಿಕ ಗುರುತಿನ ಚೀಟಿಯಾಗುತ್ತದೆ.