×
Ad

ಕರ್ನಾಟಕದಲ್ಲಿ ಹೂಡಿಕೆ ಮಾಡಲು ಆಟಿಕೆ ಉತ್ಪಾದಕರಿಗೆ ಸಿಎಂ ಬಿಎಸ್‍ವೈ ಕರೆ

Update: 2021-01-09 17:08 IST

ಕೊಪ್ಪಳ, ಜ. 9: ಕಿನ್ನಾಳ ಆಟಿಕೆ ಖ್ಯಾತಿಯ ಕೊಪ್ಪಳ ಜಿಲ್ಲೆಯಲ್ಲಿ ಭಾರತ ದೇಶದ ಮೊಟ್ಟ ಮೊದಲ ಆಟಿಕೆ ಉತ್ಪಾದನಾ ಕ್ಲಸ್ಟರ್ ಘಟಕ ಆರಂಭಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಶನಿವಾರ ಭೂಮಿ ಪೂಜೆ ನೆರವೇರಿಸಿದರು. 

ಪ್ರಧಾನಿ ಮೋದಿಯವರ  ಕನಸಿನ ‘ಆತ್ಮನಿರ್ಭರ್ ಭಾರತ್' ‘ಮೇಕ್ ಇನ್ ಇಂಡಿಯಾ' ಮತ್ತು `ವೋಕಲ್ ಫಾರ್ ಲೋಕಲ್’ಗೆ ಪೂರಕವಾಗಿ ಕರ್ನಾಟಕದಲ್ಲಿ ಆರಂಭವಾಗುತ್ತಿರುವ ಏಕಸ್ ಟಾಯ್ ಕ್ಲಸ್ಟರ್, ಅಪಾರ ಪ್ರಮಾಣದ ಹೂಡಿಕೆ ಆಕರ್ಷಿಸುವ ಜತೆಗೆ, ವಿಫುಲ ಉದ್ಯೋಗ ಸೃಷ್ಟಿಸಲಿದೆ ಎಂದು ಯಡಿಯೂರಪ್ಪ ತಿಳಿಸಿದರು.

‘ಏಕಸ್ ಟಾಯ್ ಕ್ಲಸ್ಟರ್ ಕರ್ನಾಟಕ ಸರಕಾರದ ‘ನಿರ್ದಿಷ್ಟ ಉತ್ಪನ್ನ ಕೈಗಾರಿಕಾ ಕ್ಲಸ್ಟರ್ ಅಭಿವೃದ್ಧಿ’ ಯೋಜನೆಯ ಒಂದು ಪ್ರಮುಖ ಭಾಗವಾಗಿದ್ದು, ಆಟಿಕೆ ಕ್ಲಸ್ಟರ್ ಸ್ಥಾಪನೆ ಮಾಡುವ ಮೂಲಕ ನಾವು 1 ಲಕ್ಷ ಜನರಿಗೆ ಉದ್ಯೋಗ ಕಲ್ಪಿಸುತ್ತಿದ್ದೇವೆ ಮತ್ತು ಇದಕ್ಕೆ 5 ಸಾವಿರ ಕೋಟಿ ರೂ. ಬಂಡವಾಳ ಆಕರ್ಷಣೆ ಮಾಡುವ ಉದ್ದೇಶ ಹೊಂದಿದ್ದೇವೆ' ಎಂದು ಯಡಿಯೂರಪ್ಪ ಹೇಳಿದರು.

‘ಆಟಿಕೆ ಉತ್ಪಾದನಾ ಕ್ಷೇತ್ರವು ಕಾರ್ಮಿಕ ಆಧಾರಿತ ಉದ್ಯಮವಾಗಿದೆ ಮತ್ತು ಇದರಲ್ಲಿ ಬಹುತೇಕ ಕಾರ್ಮಿಕರು ಮಹಿಳೆಯರಾಗಿರುತ್ತಾರೆ. ಹೀಗಾಗಿ ಕೊಪ್ಪಳದಲ್ಲಿ ಆರಂಭವಾಗುತ್ತಿರುವ ಈ ಟಾಯ್ ಕ್ಲಸ್ಟರ್ ಮಹಿಳೆಯರನ್ನು ಸಬಲೀಕರಣಗೊಳಿಸುವಲ್ಲಿ ಇಡುತ್ತಿರುವ ದಿಟ್ಟ ಹೆಜ್ಜೆಯಾಗಲಿದೆ. ಮಹಿಳೆಯರು ಇದರ ಹೆಚ್ಚು ಹೆಚ್ಚು ಪ್ರಯೋಜನ ಪಡೆಯಲಿದ್ದಾರೆ ಎಂಬ ನಂಬಿಕೆ ನನ್ನದಾಗಿದೆ' ಎಂದು ಯಡಿಯೂರಪ್ಪ ತಿಳಿಸಿದರು.

‘ಇದುವರೆಗೆ ಹೈದರಾಬಾದ್ ಕರ್ನಾಟಕ ಭಾಗದ ಹೆಚ್ಚಿನ ಜನರು ಉದ್ಯೋಗವನ್ನು ಹುಡುಕಿಕೊಂಡು ಸುತ್ತಮುತ್ತಲಿನ ನಗರಗಳಿಗೆ ವಲಸೆ ಹೋಗುತ್ತಿದ್ದ ಪರಿಪಾಠವಿತ್ತು. ಆದರೆ, ಏಕಸ್ ಟಾಯ್ ಕ್ಲಸ್ಟರ್ ಆರಂಭದಿಂದಾಗಿ ಈ ಪರಿಸ್ಥಿತಿ ಬದಲಾವಣೆ ಆಗಲಿದೆ. ಸ್ಥಳೀಯವಾಗಿ ಉದ್ಯೋಗ ಸೃಷ್ಟಿಯಾಗುವುದರ ಜತೆಗೆ ಈ ಭಾಗದ ಸಮಗ್ರ ಅಭಿವೃದ್ಧಿಯೂ ಆಗಲಿದೆ ಎಂಬ ದೃಢವಾದ ವಿಶ್ವಾಸ ನನಗಿದೆ' ಎಂದು ಯಡಿಯೂರಪ್ಪ ನುಡಿದರು.

‘ಭಾರತವನ್ನು ಜಾಗತಿಕ ಆಟಿಕೆ ಉತ್ಪಾದನಾ ಕೇಂದ್ರವಾಗಿಸುವ ನಮ್ಮ ಪ್ರಯತ್ನದಲ್ಲಿ ಜಾಗತಿಕ ನಿರೀಕ್ಷೆಗಳನ್ನು ಅರಿತು ಕರ್ನಾಟಕದಲ್ಲಿ ಅದಕ್ಕೆ ಪೂರಕ ಅವಕಾಶಗಳನ್ನು ಕಲ್ಪಿಸಲಾಗುತ್ತದೆ. ಆಟಿಕೆ ಕ್ಲಸ್ಟರ್‍ನಲ್ಲಿ ಹೂಡಿಕೆ ಮಾಡಲು ದೇಶ, ವಿದೇಶಗಳ ಆಟಿಕೆ ತಯಾರಕರಿಗೆ ರಾಜ್ಯ ಸರಕಾರ ಮುಕ್ತ ಆಹ್ವಾನ ನೀಡುತ್ತಿದೆ' ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ಮಾತನಾಡಿ, ‘ಕೊಪ್ಪಳವು ಕಿನ್ನಾಳ ಆಟಿಕೆಯಂಥ ಸಾಂಪ್ರದಾಯಿಕ ಆಟಿಕೆಗಳ ತಯಾರಿಕೆಯ ಪರಂಪರೆಯನ್ನು ಹೊಂದಿದೆ. ಈ ಹಿನ್ನೆಲೆಯಲ್ಲಿ ಈ ಕಲೆಯನ್ನು ಉತ್ತೇಜಿಸುವ ಮೂಲಕ ಕೊಪ್ಪಳವನ್ನು ದೇಶದ ಆಟಿಕೆ ತಯಾರಿಕೆ ಹಬ್ ಆಗಿ ಮಾಡುವ ಉದ್ದೇಶವನ್ನು ಹೊಂದಿದ್ದೇವೆ. ಸರಕಾರದ ಉಪಕ್ರಮಗಳ ಜತೆಗೆ ಕೈಜೋಡಿಸಿರುವ ಏಕಸ್ ಮತ್ತು ಇನ್ನಿತರೆ ಟಾಯ್ ಇಂಡಸ್ಟ್ರಿಗಳಿಗೆ ನಾನು ಧನ್ಯವಾದಗಳನ್ನು ಹೇಳಲು ಬಯಸುತ್ತೇನೆ. ಏಕಸ್‍ನಂತಹ ಇನ್ನೂ ಹಲವು ಸಂಸ್ಥೆಗಳು ಮುಂದೆ ಬಂದು ರಾಜ್ಯದ ಆಟಿಕೆ ಉದ್ಯಮವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯಲು ಕೈಜೋಡಿಸಬೇಕೆಂದು ಮನವಿ ಮಾಡಿಕೊಳ್ಳುತ್ತಿದ್ದೇನೆ' ಎಂದರು.

ಕ್ಲಸ್ಟರ್ ಅನ್ನು ಸ್ಥಾಪನೆ ಮಾಡುತ್ತಿರುವುದು ಭಾರತವನ್ನು ಮುಂದಿನ `ವಿಶ್ವದ ಟಾಯ್ ಹಬ್’ ಮಾಡುವ ನಿಟ್ಟಿನಲ್ಲಿ ನಮ್ಮ ದಿಟ್ಟ ಹೆಜ್ಜೆಯಾಗಿದೆ. ರಾಜ್ಯವನ್ನು ಭಾರತದ ಆಟಿಕೆ ಉತ್ಪಾದನಾ ಕೇಂದ್ರವಾಗಿಸಲು ಮತ್ತು ಆಟಿಕೆ ಕ್ಷೇತ್ರಕ್ಕೆ ಉತ್ತೇಜನ ನೀಡುವ ರಾಜ್ಯ ಸರ್ಕಾರದ ಪ್ರಯತ್ನದ ಭಾಗವಾಗಿ, ‘ಉತ್ಪನ್ನ ನಿರ್ದಿಷ್ಟ ಕೈಗಾರಿಕಾ ಕ್ಲಸ್ಟರ್ ಅಭಿವೃದ್ಧಿ' (ಪಿಎಸ್‍ಐಸಿಡಿ) ಕಾರ್ಯಕ್ರಮ ರೂಪಿಸಲಾಗಿದೆ' ಎಂದು ಶೆಟ್ಟರ್ ವಿವರಿಸಿದರು.

‘ರಾಜ್ಯದ ಒಟ್ಟು ಆಂತರಿಕ ಉತ್ಪನ್ನದ ಪಾಲು ಹೆಚ್ಚಿಸುವುದು, ಕೈಗಾರಿಕಾ ಅಗತ್ಯತೆಗಳನ್ನು ಪೂರೈಸುವ ಅತ್ಯಾಧುನಿಕ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸುವುದು, ಅಗತ್ಯ ಆಧಾರಿತ ಕೌಶಲ ಅಭಿವೃದ್ಧಿ ಸುಧಾರಿಸುವುದು ಮತ್ತು ಸಮತೋಲಿತ ಸಾಮಾಜಿಕ-ಆರ್ಥಿಕ ಅಭಿವೃದ್ಧಿ ಸಾಧಿಸುವುದು ಮತ್ತು ಹೆಚ್ಚಿನ ಹೂಡಿಕೆ ಆಕರ್ಷಿಸುವುದು ಕ್ಲಸ್ಟರ್‍ನ ಮೂಲ ಉದ್ದೇಶ' ಎಂದರು.

‘ಭಾರತವನ್ನು ಜಾಗತಿಕ ಆಟಿಕೆ ಉತ್ಪಾದನಾ ಕೇಂದ್ರವಾಗಿಸುವ ಪ್ರಯತ್ನದಲ್ಲಿ ಜಾಗತಿಕ ನಿರೀಕ್ಷೆಗಳನ್ನು ಅರಿತು ಕರ್ನಾಟಕದಲ್ಲಿ ಅದಕ್ಕೆ ಪೂರಕ ಅವಕಾಶಗಳನ್ನು ಕಲ್ಪಿಸಲಾಗುತ್ತದೆ. ಇದರ ಫಲವಾಗಿ ಆಟಿಕೆ ಉದ್ಯಮ ಸಿಎಜಿಆರ್ ನ (2010-17) ಶೇ.18ರಷ್ಟು ಪ್ರಗತಿ ಸಾಧಿಸಿದ್ದು, 2023ರ ವೇಳೆಗೆ 310 ದಶಲಕ್ಷ ಡಾಲರ್ ತಲುಪುವ ನಿರೀಕ್ಷೆಯಿದೆ. ದೇಶದ ಒಟ್ಟು ಆಟಿಕೆ ವಹಿವಾಟಿನಲ್ಲಿ (159 ಮಿಲಿಯನ್ ಡಾಲರ್) ರಾಜ್ಯದ ಪಾಲು ಶೇ. 9.1ರಷ್ಟಿದ್ದು ಮೂರನೇ ಸ್ಥಾನದಲ್ಲಿದೆ' ಎಂದು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಗೌರವ್ ಗುಪ್ತ ತಿಳಿಸಿದರು.

ಕಾರ್ಯಕ್ರಮದಲ್ಲಿ ಸಂಸದ ಸಂಗಣ್ಣ ಕರಡಿ, ಕೃಷಿ ಸಚಿವ ಬಿ.ಸಿ.ಪಾಟೀಲ್, ಶಾಸಕ ಹಾಲಪ್ಪ ಆಚಾರ್, ಮಾಜಿ ಸಚಿವ ಆರ್.ವಿ.ದೇಶಪಾಂಡೆ, ಉದ್ಯೋಗ ಮಿತ್ರದ ವ್ಯವಸ್ಥಾಪಕ ನಿರ್ದೇಶಕ ರೇವಣ್ಣಗೌಡ, ವಾಣಿಜ್ಯ ಇಲಾಖೆಯ ಜಂಟಿ ನಿರ್ದೇಶಕರೂ ಆದ ಟಾಯ್ ಕ್ಲಸ್ಟರ್ ನೋಡಲ್ ಅಧಿಕಾರಿ ಬಿ.ಕೆ. ಶಿವಕುಮಾರ್, ಏಕಸ್ ಅಧ್ಯಕ್ಷ ಅರವಿಂದ್ ಮೆಳ್ಳಗೇರಿ, ಏಕಸ್ ಏರೋಸ್ಪೇಸ್ ವ್ಯವಸ್ಥಾಪಕ ನಿರ್ದೇಶಕ ರಾಜೀವ್ ಕೌಲ್ ಉಪಸ್ಥಿತರಿದ್ದರು.

ಆರು ಒಪ್ಪಂದಗಳಿಗೆ ಸಹಿ

‘ದೇಶದ ಮೊಟ್ಟ ಮೊದಲ ಆಟಿಕೆ ಉತ್ಪಾದನಾ ಕ್ಲಸ್ಟರ್ ಆರಂಭಕ್ಕೆ ಭೂಮಿ ಪೂಜೆ ನೆರವೇರಿಸಿದ ಬೆನ್ನಲ್ಲೇ ಆಟಿಕೆ ಉತ್ಪಾದನೆ ಮತ್ತು ಪೂರೈಕೆಗೆ ಸಂಬಂಧಿಸಿದಂತೆ ರಾಜ್ಯ ಸರಕಾರ ಆರು ಕಂಪೆನಿಗಳ ಜತೆ ಒಪ್ಪಂದಕ್ಕೆ ಸಹಿ ಹಾಕಿದೆ. ಇದರಿಂದ ಮುಂದಿನ 5 ವರ್ಷಗಳಲ್ಲಿ 450 ದಶಲಕ್ಷ ಡಾಲರ್ ನಷ್ಟು ಆದಾಯ ವೃದ್ಧಿಯಾಗುವ ನಿರೀಕ್ಷೆಯಿದೆ. ರಿಮೋಟ್ ಕಂಟ್ರೋಲ್ ಆಧಾರಿತ ಆಟಿಕೆ ಕಾರು ಉತ್ಪಾದನಾ ಕಂಪೆನಿ ಪ್ಲೇ ಗ್ರೋ ಇಂಡಸ್ಟ್ರೀಸ್ ಲಿಮಿಟೆಡ್ ಸೇರಿದಂತೆ ಸ್ಟರ್ಲಿಂಗ್ ನ್ಯೂ ಹಾರಿಜಾನ್ ಪ್ರೈವೇಟ್ ಲಿಮಿಟೆಡ್, ಮೈಕ್ರೋ ಪ್ಲಾಸ್ಟಿಕ್ಸ್ ಪ್ರೈವೇಟ್ ಲಿಮಿಟೆಡ್, ಹಾಟ್ ಶಾಟ್ ಟ್ರೂಲಿಂಗ್ ಲಿಮಿಟೆಡ್ ಮತ್ತು ಏಕಸ್ ಪ್ಲಾಸ್ಟಿಕ್ ಲಿಮಿಟೆಡ್ ಕಂಪೆನಿಗಳ ಜತೆ ಸರಕಾರ ಒಪ್ಪಂದಕ್ಕೆ ಸಹಿ ಹಾಕಿದೆ'.

ಆಟಿಕೆ ಕ್ಲಸ್ಟರ್ ವಿಶೇಷತೆ

‘450 ಎಕರೆ ಪ್ರದೇಶದಲ್ಲಿ ಕ್ಲಸ್ಟರ್, ಕೊಪ್ಪಳದಿಂದ 30 ಕಿ.ಮೀ. ದೂರದ ಕುಕನೂರು ತಾಲೂಕಿನ ತಳಬಾಳ ಸಮೀಪ.ಕೊಪ್ಪಳ ಟಾಯ್ ಕ್ಲಸ್ಟರ್ ರಾಷ್ಟ್ರೀಯ ಹೆದ್ದಾರಿ 63ರಲ್ಲಿದ್ದು, ಉತ್ತಮ ಸಂಪರ್ಕ ವ್ಯವಸ್ಥೆ ಹೊಂದಿದೆ. ಜತೆಗೆ, ವಾಣಿಜ್ಯ ನಗರ ಹುಬ್ಬಳ್ಳಿಗೆ ಸಮೀಪದಲ್ಲಿದೆ. ಆರು ಮೆಟ್ರೋ ನಗರಗಳಿಗೆ ಮತ್ತು ರಾಷ್ಟ್ರೀಯ ಹೆದ್ದಾರಿಗಳ ಮೂಲಕ ಪ್ರಮುಖ ಬಂದರುಗಳಿಗೆ ಸುಲಭವಾಗಿ ಸಂಪರ್ಕವನ್ನು ಹೊಂದಿದೆ. ಸಾಂಪ್ರದಾಯಿಕ, ಸಾಮಾನ್ಯ ಆಟಿಕೆಗಳಲ್ಲದೆ, ಅತ್ಯಾಧುನಿಕ ಎಲೆಕ್ಟ್ರಾನಿಕ್ ಆಟಿಕೆಗಳ ಉತ್ಪಾದನೆ'.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News