ಕೋವಿಡ್ ವಾಕ್ಸಿನ್ ಹಂಚಿಕೆ ಬಗ್ಗೆ ಜ.11ಕ್ಕೆ ಪ್ರಧಾನಿ ಉತ್ತರಿಸಲಿದ್ದಾರೆ: ಆರೋಗ್ಯ ಸಚಿವ ಡಾ.ಸುಧಾಕರ್

Update: 2021-01-09 11:47 GMT

ಬೆಂಗಳೂರು, ಜ. 9: ‘ಕೋವಿಡ್-19 ಸೋಂಕು ನಿವಾರಕ ವ್ಯಾಕ್ಸಿನ್ ಯಾವಾಗ ಬರುತ್ತದೆ ಮತ್ತು ಹೇಗೆ ಹಂಚಿಕೆಯಾಗಲಿದೆ ಎಂಬ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರು ಸೋಮವಾರ ಉತ್ತರಿಸಲಿದ್ದಾರೆ' ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್ ಇಂದಿಲ್ಲಿ ಸ್ಪಷ್ಟನೆ ನೀಡಿದ್ದಾರೆ.

ಶನಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ರಾಜ್ಯಕ್ಕೆ 13.90 ಲಕ್ಷ ಲಸಿಕೆ ಬರಲಿದ್ದು, ಬೆಂಗಳೂರು ಮತ್ತು ಉತ್ತರ ಕರ್ನಾಟಕ ಭಾಗದ ಆಸ್ಪತ್ರೆಯೊಂದರಲ್ಲಿ ಪ್ರಧಾನಿ ಮೋದಿ ಲಸಿಕೆ ವಿತರಣೆಗೆ ಹೊಸದಿಲ್ಲಿಯಿಂದಲೇ ನೇರವಾಗಿ ಚಾಲನೆ ನೀಡಲಿದ್ದಾರೆಂದು ವಿವರಿಸಿದರು.

‘ದೇಶದಲ್ಲಿ ಒಟ್ಟು 5 ಸಾವಿರ ಲಸಿಕೆ ಹಂಚಿಕೆ ಕೇಂದ್ರಗಳನ್ನು ಗುರುತಿಸಿದ್ದು, ರಾಜ್ಯದಲ್ಲಿ 235 ಕೇಂದ್ರಗಳನ್ನು ನಿರ್ಮಿಸಲಾಗಿದೆ. ಕೇಂದ್ರ ಸರಕಾರದ ಸಚಿವಾಲಯದ ಕಾರ್ಯದರ್ಶಿಗಳು ಇಂದು ವಿಡಿಯೊ ಸಂವಾದದ ಮೂಲಕ ದೇಶದ ಎಲ್ಲ ರಾಜ್ಯಗಳ ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿಗಳು, ಅಧಿಕಾರಿಗಳು ಸೇರಿದಂತೆ ಇತರರೊಂದಿಗೆ ಚರ್ಚೆ ನಡೆಸುತ್ತಿದ್ದಾರೆ ಎಂದು ವಿವರ ನೀಡಿದರು.

ಕೊರೋನ ನಿಯಂತ್ರಣ ಲಸಿಕೆ ಪೂರೈಕೆ, ಸಂಗ್ರಹಣೆ, ವಿತರಣೆ ಕುರಿತು ಸಂವಾದ ನಡೆಯುತ್ತಿದೆ. ಸೋಮವಾರ (ಜ.11) ಎಲ್ಲ ರಾಜ್ಯಗಳ ಮುಖ್ಯಮಂತ್ರಿ ಮತ್ತು ಆರೋಗ್ಯ ಸಚಿವರೊಂದಿಗೆ ಪ್ರಧಾನಿ ಮೋದಿ ವಿಡಿಯೊ ಸಂವಾದ ನಡೆಸಲಿದ್ದಾರೆ ಎಂದು ಡಾ.ಸುಧಾಕರ್ ತಿಳಿಸಿದರು.

ಭೀತಿ ಅಗತ್ಯವಿಲ್ಲ: ರಾಜ್ಯದಲ್ಲಿ ಹಕ್ಕಿ ಜ್ವರದ ಭೀತಿ ಬೇಡ. ಎಲ್ಲಿಯೂ ಹಕ್ಕಿ ಜ್ವರ ಕಾಣಿಸಿಕೊಂಡಿಲ್ಲ. ಎಲ್ಲ ಹಕ್ಕಿಗಳ ಪರೀಕ್ಷೆ ಮಾಡಿಸಿದ್ದು, ವರದಿ ನೆಗೆಟಿವ್ ಬಂದಿದೆ. ಹೀಗಾಗಿ ರಾಜ್ಯದ ಜನತೆ ಆತಂಕಪಡುವ ಅಗತ್ಯವಿಲ್ಲ ಎಂದು ಡಾ.ಸುಧಾಕರ್ ಸ್ಪಷ್ಟನೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News