ಹೆದ್ದಾರಿಯಲ್ಲಿಯೇ ಕೆಎಸ್‌ಆರ್‌ಟಿಸಿ ಬಸ್ ಅಡ್ಡಗಟ್ಟಿದ ಶಿಕ್ಷಣ ಸಚಿವ ಸುರೇಶ್ ಕುಮಾರ್

Update: 2021-01-09 12:30 GMT

ಕೊರಟಗೆರೆ: ಕಡ್ಡಾಯ ಬಸ್‌ ನಿಲುಗಡೆ ಸ್ಥಳದಲ್ಲಿ ವಿದ್ಯಾರ್ಥಿಗಳಿಗೆ ಬಸ್ ನಿಲ್ಲಿಸದೇ ತೆರಳುತ್ತಿದ್ದ ಸರಕಾರಿ ಬಸ್ಸನ್ನು ಅಡ್ಡಗಟ್ಟಿದ ಶಿಕ್ಷಣ ಸಚಿವ ಸುರೇಶ್ ಕುಮಾರ್ ಚಾಲಕನನ್ನು ತರಾಟೆಗೆ ತೆಗೆದುಕೊಂಡ ಘಟನೆ ಶನಿವಾರ ಜರುಗಿದೆ.

ಕೊರಟಗೆರೆ ತಾಲೂಕು ಕೋಳಾಲ ಹೋಬಳಿ ನೀಲಗೊಂಡನಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಐ.ಕೆ.ಕಾಲೋನಿಯ ರಾಜ್ಯ ಹೆದ್ದಾರಿಯಲ್ಲಿಯೇ ಬಸ್ಸನ್ನು ಅಡ್ಡಗಟ್ಟಿದ ಶಿಕ್ಷಣ ಸಚಿವ ಸುರೇಶ್ ಕುಮಾರ್, ವಿದ್ಯಾರ್ಥಿಗಳನ್ನು ಬಿಟ್ಟು ಹೋದ ಚಾಲಕ ಮತ್ತು ನಿರ್ವಾಹಕನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಅಲ್ಲದೇ ಇನ್ನು ಮುಂದೆ ವಿದ್ಯಾರ್ಥಿಗಳಿಗೆ ಬಸ್ಸು ನಿಲ್ಲಿಸುವಂತೆ ಚಾಲಕನಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಸುರೇಶ್‌ ಕುಮಾರ್ ಅವರು ಬೆಂಗಳೂರಿನಿಂದ ದಾಬಸ್ ಪೇಟೆ-ಕೊರಟಗೆರೆ ಮಾರ್ಗವಾಗಿ ಮಧುಗಿರಿಯ ದೂರ ತರಂಗ ಶಿಕ್ಷಣ ಅಭಿಯಾನ ಕಾರ್ಯಕ್ರಮಕ್ಕೆ ತೆರಳುತ್ತಿದ್ದರು. ಈ ವೇಳೆ ಕೆಎಸ್‌ಆರ್‌ಟಿಸಿ ಚಾಲಕ ಶಾಲಾ ಮಕ್ಕಳನ್ನು ಬಿಟ್ಟು ಹೋಗಿರುವುದು ಅವರ ಗಮನಕ್ಕೆ ಬಂದಿದೆ. ಇದನ್ನು ಗಮನಿಸಿದ ಶಿಕ್ಷಣ ಸಚಿವರು ಬಸ್‌ನ್ನು ತಡೆದು ತರಾಟೆಗೆ ತೆಗೆದುಕೊಂಡಿದ್ದಾರೆ.

ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಶಾಲಾ-ಕಾಲೇಜಿಗೆ ತೆರಳಲು ಅನುಕೂಲ ಆಗುವಂತೆ ಸಾರಿಗೆ ಸಚಿವರ ಜೊತೆ ಚರ್ಚಿಸಿ ಗ್ರಾಮೀಣ ಸಾರಿಗೆ ವ್ಯವಸ್ಥೆ ಕಲ್ಪಿಸುವ ಭರವಸೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News