×
Ad

ಜಾನುವಾರು ಸಾಗಾಟ ವಾಹನ ತಡೆದು ಚಾಲಕನಿಗೆ ಹಲ್ಲೆ ನಡೆಸಿದ ಬಜರಂಗದಳ ಕಾರ್ಯಕರ್ತರು: ಆರೋಪ

Update: 2021-01-09 19:33 IST

ಚಿಕ್ಕಮಗಳೂರು ಜ.9: ಕ್ಯಾಂಟರ್ ನಲ್ಲಿ ಜಾನುವಾರುಗಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಆರೋಪದ ಮೇರೆಗೆ ಬಜರಂಗದಳದ ಕಾರ್ಯಕರ್ತರು ಕ್ಯಾಂಟರ್ ತಡೆದು ಚಾಲಕನಿಗೆ ಹಲ್ಲೆ ಮಾಡಿದ ಘಟನೆ ಆಗುಂಬೆ ರಸ್ತೆಯ ಕೈಮನೆ ಗ್ರಾಮದ ಬಳಿ ನಡೆದಿದೆ. ಮತ್ತೊಂದು ಪ್ರಕರಣದಲ್ಲಿ, ಜಾನುವಾರುಗಳನ್ನು ಸಾಗಾಟ ಮಾಡುತ್ತಿದ್ದ ಕ್ಯಾಂಟರ್ ಗಳನ್ನು ಬಜರಂಗದಳದ ಕಾರ್ಯಕರ್ತರು ಶೃಂಗೇರಿ ತಾಲೂಕಿನ ತನಿಕೋಡು ಚೆಕ್‍ಪೋಸ್ಟ್ ಬಳಿ ತಡೆದ ಘಟನೆ ನಡೆದಿದೆ.

ಶೃಂಗೇರಿ ತಾಲೂಕಿನ ತನಿಕೋಡು ಚೆಕ್ ಪೋಸ್ಟ್ ಬಳಿ ಹಾಗೂ ಆಗುಂಬೆ ರಸ್ತೆಯ ಕೈಮನೆ ಗ್ರಾಮದ ಬಳಿ ಕ್ಯಾಂಟರ್ ನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದರೆನ್ನಲಾದ ಜಾನುವಾರುಗಳನ್ನು ಬಜರಂಗದಳ ಸಂಘಟನೆ ಕಾರ್ಯಕರ್ತರು ತಡೆದಿದ್ದಾರೆ. ತನಿಕೋಡು ಚೆಕ್‍ಪೋಸ್ಟ್ ಬಳಿ ಕಾರ್ಯಕರ್ತರು ಕ್ಯಾಂಟರ್ ನ್ನು ಅಡ್ಡಗಟ್ಟಿದಾಗ ಕ್ಯಾಂಟರ್ ಚಾಲಕ ಹಾಗೂ ಮತ್ತೋರ್ವ ಸ್ಥಳದಲ್ಲೇ ವಾಹನ ಬಿಟ್ಟು ಪರಾರಿಯಾಗಿದ್ದಾರೆ. 

ಆದರೆ ಆಗುಂಬೆ ರಸ್ತೆಯ ಕೈಮನೆ ಗ್ರಾಮದ ಬಳಿ ಕಾರ್ಯಕರ್ತರು ಕ್ಯಾಂಟರ್ ಚಾಲಕನಿಗೆ ಹಲ್ಲೆ ಮಾಡಿದ್ದಾರೆ ಎನ್ನಲಾಗಿದ್ದು, ಗಾಯಗೊಂಡಿರುವ ಆತನನ್ನು ಶಿವಮೊಗ್ಗ ನಗರದ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲು ಮಾಡಲಾಗಿದೆ. ಮತ್ತೋರ್ವ ಆರೋಪಿಯನ್ನು ಶೃಂಗೇರಿ ಪೊಲೀಸರು ಬಂಧಿಸಿದ್ದಾರೆಂದು ತಿಳಿದು ಬಂದಿದೆ.

ಆರೋಪಿಗಳು ರಾಣಿಬೆನ್ನೂರಿನ ಎರಡು ಕ್ಯಾಂಟರ್ ಗಳಲ್ಲಿ ಒಟ್ಟು 34 ಎತ್ತು ಹಾಗೂ ಎಮ್ಮೆಗಳನ್ನು ಮಂಗಳೂರಿಗೆ ಸಾಗಣೆ ಮಾಡುತ್ತಿದ್ದರೆಂದು ತಿಳಿದುಬಂದಿದ್ದು, ಕ್ಯಾಂಟರ್ ಸಾಗುವ ಮೊದಲು ಕೆರೆಕಟ್ಟೆ ಮಾರ್ಗವಾಗಿ ಒಂದು ಸ್ಕಾರ್ಫಿಯೋ ಹಾಗೂ ಇನೊವಾ ಕಾರುಗಳು ಹೋಗಿದ್ದು, ಈ ಕುರಿತು ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ರಾಜ್ಯದಲ್ಲಿ ಗೋಹತ್ಯೆ ನಿಷೇದ ಕಾಯ್ದೆ ಜಾರಿಗೆ ಬಂದ ಬಳಿಕ ದಾಖಲಾದ ಮೊದಲ ಪ್ರಕರಣ ಇದಾಗಿದೆ.

ಶೃಂಗೇರಿ ತಾಲೂಕಿನ ಪ್ರತ್ಯೇಕ ಮಾರ್ಗಗಳಲ್ಲಿ ಎರಡು ಕ್ಯಾಂಟರ್ ವಾಹನಗಳಲ್ಲಿ ಎತ್ತುಗಳು ಮತ್ತು ಎಮ್ಮೆಗಳನ್ನು ಸಾಗಣೆ ಮಾಡಲಾಗುತ್ತಿದೆ ಎಂಬ ಆರೋಪದ ಮೇರೆಗೆ ಸ್ಥಳೀಯ ಪೊಲೀಸರು ಚಾಲಕ ಸೇರಿದಂತೆ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ. ಘಟನೆ ಸಂಬಂಧ ಶೃಂಗೇರಿ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ. ಗೋವುಗಳನ್ನು ಅಕ್ರಮವಾಗಿ ಸಾಗಣೆ ಮಾಡಲಾಗುತ್ತಿತ್ತೋ ಇಲ್ಲವೋ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ.
- ಅಕ್ಷಯ್ ಮಚೀಂದ್ರ , ಎಸ್ಪಿ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News