×
Ad

ಕನಕ ರತ್ನ, ಸಿದ್ದಶ್ರೀ, ಹಾಲುಮತ ಭಾಸ್ಕರ ಪ್ರಶಸ್ತಿ ಪ್ರಕಟ

Update: 2021-01-09 20:12 IST

ಬೆಂಗಳೂರು, ಜ.9: ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನ ತಿಂಥಣಿ ಬ್ರಿಜ್‍ನಲ್ಲಿರುವ ಕಾಗಿನೆಲೆ ಗುರುಪೀಠದ ಕಲ್ಬುರ್ಗಿ ವಿಭಾಗದ ಕನಕ ಗುರುಪೀಠ ಕೊಡಮಾಡುವ ಪ್ರತಿಷ್ಠಿತ ‘ಕನಕ ರತ್ನ' ಪ್ರಶಸ್ತಿಗೆ ವಿಶ್ರಾಂತ ಕುಲಪತಿ, ಜನಪದ ತಜ್ಞ ಪ್ರೊ.ಎಚ್.ಜೆ.ಲಕ್ಕಪ್ಪಗೌಡ, ‘ಸಿದ್ದಶ್ರೀ' ಪ್ರಶಸ್ತಿಗೆ ಹಂಪಿಯ ಸುಭದ್ರಮ್ಮ ಕಾರಮಿಂಚಪ್ಪ ಹಾಗೂ ‘ಹಾಲುಮತ ಭಾಸ್ಕರ' ಪ್ರಶಸ್ತಿಗೆ ಕಡೂರಿನ ವಕೀಲ ಎಂ.ಎಸ್.ಹೆಳವರ ಪಾತ್ರರಾಗಿದ್ದಾರೆ.

ಪ್ರಶಸ್ತಿಯು ತಲಾ 50 ಸಾವಿರ ರೂಪಾಯಿ ನಗದು ಹಾಗು ಸ್ಮರಣಿಕೆ ಒಳಗೊಂಡಿದೆ. ಪ್ರಶಸ್ತಿಯನ್ನು ಜನವರಿ 12ರಿಂದ 14ರವರೆಗೆ ತಿಂಥಣಿ ಬ್ರಿಜ್‍ನಲ್ಲಿರುವ ಕನಕ ಗುರುಪೀಠದಲ್ಲಿ ನಡೆಯಲಿರುವ ‘ಹಾಲು ಮತ ಸಂಸ್ಕೃತಿ ವೈಭವ' ಸಾಂಸ್ಕೃತಿಕ ಉತ್ಸವದಲ್ಲಿ ಪ್ರದಾನ ಮಾಡಲಾಗುವುದು.

ಜನವರಿ 12 ರಂದು ಬೆಳಗ್ಗೆ 11ಕ್ಕೆ ‘ಬೀರ ದೇವರ ಉತ್ಸವ' ಮತ್ತು ಪಂಚಾಯತ್ ಸದಸ್ಯರ ಸಮಾವೇಶವನ್ನು ಉದ್ಘಾಟಿಸುವ ಮೂಲಕ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಉತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಗೋವಾ ರಾಜ್ಯದ ಉಪ ಮುಖ್ಯಮಂತ್ರಿ ಚಂದ್ರಕಾಂತ್ ಕವಳೇಕರ್ ಅವರು, ‘ಕೊಡಗಿನ ಕುರುಬ ಬುಡಕಟ್ಟುಗಳು', ಕುರುಮನ್ಸ್ ಟ್ರೈಬ್ಸ್', ಹಾಗೂ ಬೀರಪ್ಪ ಸಂಪ್ರದಾಯ ಪುಸ್ತಕಗಳನ್ನು ಬಿಡುಗಡೆ ಮಾಡಲಿದ್ದಾರೆ. ಗುರುಪೀಠದ ಶ್ರೀ ನಿರಂಜನಾನಂದಸ್ವಾಮಿ ಉತ್ಸವದ ದಿವ್ಯ ಸಾನಿಧ್ಯ ವಹಿಸಲಿದ್ದಾರೆ. ಮಧ್ಯಾಹ್ನ 2.30ಕ್ಕೆ ‘ಟಗರು ಕಾಳಗ' ನಡೆಯಲಿದೆ. ಸಂಜೆ 7ಕ್ಕೆ ಚುಟುಕು ಹಾಸ್ಯ ಸಾಹಿತ್ಯ ಸಭೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.

ಜ.13ರಂದು ಬೆಳಗ್ಗೆ 11ಕ್ಕೆ ಟಗರು ಜೋಗಿಗಳು-ಹೆಳವರು-ಕಾಡುಸಿದ್ಧರ ಸಮಾವೇಶವನ್ನು ಉಪ ಮುಖ್ಯಮಂತ್ರಿ ಲಕ್ಷಣ ಸವದಿ ಉದ್ಘಾಟಿಸಲಿದ್ದು, ಮಾಜಿ ಸಚಿವ ಎಚ್.ಎಂ.ರೇವಣ್ಣ ಅಧ್ಯಕ್ಷತೆ ವಹಿಸಲಿದ್ದಾರೆ. ಮಧ್ಯಾಹ್ನ 3ಕ್ಕೆ ಅಲೆಮಾರಿ, ಅರೆ ಅಲೆಮಾರಿ ಮತ್ತು ವಿಮುಕ್ತ ಬುಡಕಟ್ಟುಗಳ ಒಕ್ಕೂಟದಿಂದ ಅಲೆಮಾರಿಗಳ ಚಿಂತನಾಗೋಷ್ಠಿ ಏರ್ಪಡಿಸಲಾಗಿದೆ.

ಜ.14ರಂದು ಬೆಳಗ್ಗೆ 11ಕ್ಕೆ ಶ್ರೀ ಬೊಮ್ಮಗೊಂಡೇಶ್ವರ-ಶ್ರೀ ಸಿದ್ದರಾಮೇಶ್ವರ ಉತ್ಸವ ನಡೆಯಲಿದ್ದು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಉದ್ಘಾಟಿಸಲಿದ್ದಾರೆ. ಮಾಜಿ ಸಚಿವ ಎಚ್.ವಿಶ್ವನಾಥ್ ಅಧ್ಯಕ್ಷತೆ ವಹಿಸಲಿದ್ದು, ಶ್ರೀ ಶಿವಾನಂದ ಸ್ವಾಮಿ ದಿವ್ಯ ಸಾನಿಧ್ಯ ವಹಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News