ವಂಚಕ ಯುವರಾಜ್ ಬಂಧನ ಪ್ರಕರಣ: ಸಚಿವರ ಜತೆಗಿದ್ದ ಫೋಟೋ ವೈರಲ್

Update: 2021-01-09 15:03 GMT

ಬೆಂಗಳೂರು, ಜ.9: ವಂಚನೆ ಆರೋಪದಡಿ ಬಂಧನಕ್ಕೊಳಗಾಗಿರುವ ಯುವರಾಜ್ ಯಾನೆ ಸ್ವಾಮೀಯ ವಿಚಾರಣೆ ಮುಂದುವರಿದಿದ್ದು, ಈತ ರಾಜ್ಯ ಸರಕಾರದಲ್ಲಿ ಪ್ರಮುಖ ಹುದ್ದೆ ಪಡೆದಿರುವ ಸಚಿವರೊಬ್ಬರ ಮನೆಯ ದೇವರ ಕೋಣೆಯನ್ನೆ ಬದಲಾವಣೆ ಮಾಡಿದ್ದ ಎಂದು ಹೇಳಲಾಗುತ್ತಿದೆ.

ವಾಸ್ತು, ಜ್ಯೋತಿಷ್ಯ ಹೆಸರಿನಲ್ಲಿ ಸಚಿವರೊಬ್ಬರಿಗೆ ಬಹಳ ಆಪ್ತನಾಗಿದ್ದ. ಇದರ ನಡುವೆ ಮೂರು ತಿಂಗಳ ಹಿಂದೆ ಸಚಿವ ಸಂಪುಟ ಬದಲಾವಣೆಯ ಕೂಗು ಎದ್ದಿತ್ತು. ಈ ವೇಳೆ ಸಚಿವರೊಬ್ಬರ ಮನೆಗೆ ಆರೋಪಿ ಯುವರಾಜ್ ಭೇಟಿ ನೀಡಿ, ಅವರೊಂದಿಗೆ ಭೋಜನ ಸವಿದಿದ್ದ. ತದನಂತರ, ಮನೆಯ ವಾಸ್ತು ನುಡಿದು, ಈ ಮನೆಯಲ್ಲಿ ಸದಾದೈವ ಶಕ್ತಿಯ ಆಗಮನ ಆಗಬೇಕು ಎನ್ನುವ ಉದ್ದೇಶವಿದ್ದರೆ, ವಿಶೇಷವಾದ ಪೂಜಾ ಕೋಣೆ ಅಥವಾ ಕೊಠಡಿಯನ್ನು ನಿರ್ಮಿಸಬೇಕು ಎಂದಿದ್ದ. ಇದನ್ನು ತ್ವರಿತಗತಿ ಮಾಡಿದರೆ, ತಮ್ಮ ಸ್ಥಾನವೂ ಉಳಿಯಲಿದೆ ಎಂದು ನಂಬಿಕೆ ಹುಟ್ಟಿಸಿದ್ದ ಎಂದು ಮೂಲಗಳು ತಿಳಿಸಿವೆ. 

ಇನ್ನು, ಆರೋಪಿ ಯುವರಾಜ್ ಮಾತುಗಳನ್ನು ಗಂಭೀರವಾಗಿ ಪರಿಗಣಿಸಿದ್ದ ಆ ಸಚಿವರು, ಪೂಜಾ ಕೋಣೆ ನಿರ್ಮಾಣಕ್ಕೆ ಕೈಹಾಕಿದ್ದರು ಎನ್ನಲಾಗಿದೆ.

ಆರೋಪಗಳ ಸರಮಾಲೆ: ಬಂಧಿತ ಯುವರಾಜ್ ವಿರುದ್ಧ ವಂಚನೆಗೊಳಗಾಗಿರುವ ಆರೋಪಗಳು ದಿನೇ ದಿನೇ ಹೆಚ್ಚಾಗುತ್ತಿದ್ದು, ಸಿನೆಮಾ ನಿರ್ಮಾಪಕ ಸಹದೇವ್ ಎಂಬುವರಿಗೂ ವಂಚಿಸಿರುವ ಆರೋಪ ಕೇಳಿಬಂದಿದೆ.

ಸಿನಿಮಾ ನಿರ್ಮಾಣಕ್ಕೆ 70 ಲಕ್ಷ ರೂ. ಹಣ ಕೊಡಿಸುವುದಾಗಿ ವಂಚಿಸಿರುವ ಯುವರಾಜ್, ತನಗೆ 10 ಲಕ್ಷ ಹಣವನ್ನು ಕೊಡಿ ನಿಮಗೆ 70 ಲಕ್ಷ ಹಣವನ್ನು ಕೊಡಿಸುತ್ತೇನೆ ಎಂದು ಹೇಳಿ ವಂಚನೆ ಮಾಡಿದ್ದಾನೆ ಎನ್ನಲಾಗಿದೆ. ಈ ಸಂಬಂಧ ಯುವರಾಜ್‍ನ ಮೇಲೆ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಸಚಿವರ ಜತೆ ಆರೋಪಿ: ಫೋಟೋ ವೈರಲ್

ಸಚಿವರಾದ ಲಕ್ಷ್ಮಣ ಸವದಿ, ವಿ.ಸೋಮಣ್ಣ ಆರೋಪಿ ಯುವರಾಜ್‍ನೊಂದಿಗೆ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ ಎನ್ನಲಾದ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ರಾಜ್ಯಪಾಲೆ ಹುದ್ದೆಗೆ 8.8 ಕೋಟಿ ಕೊಟ್ಟ ನಿವೃತ್ತ ನ್ಯಾಯಾಧೀಶೆ?

ರಾಜ್ಯಪಾಲೆ ಹುದ್ದೆಯನ್ನು ಬಯಸಿದ್ದ ನಿವೃತ್ತ ನ್ಯಾಯಾಧೀಶೆಯೊಬ್ಬರು 8.8 ಕೋಟಿ ರೂಪಾಯಿಯನ್ನು ಯುವರಾಜ್ ಸ್ವಾಮಿಗೆ ನೀಡಿದ್ದರು ಎನ್ನಲಾಗಿದೆ.

ಈ ಸಂಬಂಧ ಯುವರಾಜ್‍ಗೆ ತಾವು ಹಣ ನೀಡಿ ವಂಚನೆಗೊಳಗಾಗಿರುವ ಕುರಿತು ಡಿ. 21ರಂದು ನಿವೃತ್ತ ಮಹಿಳಾ ನ್ಯಾಯಾಧೀಶರು ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News