ಜಿಯೋ ಸಿಮ್ ವಾಪಸ್ ನೀಡಿ ರಿಲಯನ್ಸ್ ಕಂಪನಿ ವಿರುದ್ಧ ರೈತರ ಪ್ರತಿಭಟನೆ
Update: 2021-01-09 21:29 IST
ಮೈಸೂರು,ಜ.9: ದೆಹಲಿಯ ರೈತ ಪ್ರತಿಭಟನೆ ಹಿನ್ನಲೆ 'ಜಿಯೋ ಸಿಮ್ ವಾಪಸ್' ಘೋಷಣೆಗಳೊಂದಿಗೆ ಜಿಯೋ ಸಿಮ್ ಗೆ ಉಗಿದು ರಿಲಯನ್ಸ್ ಕಂಪನಿಗೆ ಛೀಮಾರಿ ಹಾಕಿ ರೈತರಿಂದ ಪ್ರತಿಭಟನೆ ನಡೆಸಲಾಯಿತು.
ನಗರದ ಡಿ.ದೇವರಾಜ ಅರಸು ರಸ್ತೆಯಲ್ಲಿರುವ ಜಿಯೋ ಔಟ್ ಲೆಟ್ ಮುಂದೆ ಅಂಬಾನಿ, ಅದಾನಿ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭ ರಾಜ್ಯ ಕಬ್ಬುಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಮಾತನಾಡಿ, ಕೇಂದ್ರ ಸರ್ಕಾರ ಅವೈಜ್ಞಾನಿಕ ಕೃಷಿ ಕಾಯ್ದೆ ಮೂಲಕ ರೈತರಿಗೆ ಅನ್ಯಾಯ ಮಾಡುತ್ತಿದೆ. ರಿಲಯನ್ಸ್ ಕಂಪೆನಿಗೆ ಲಾಭ ಮಾಡಿಕೊಡಲು ಕೇಂದ್ರ ಮುಂದಾಗಿದೆ ಎಂದು ಕಿಡಿಕಾರಿದರು.
ರಿಲಯನ್ಸ್ ಕಂಪನಿಯನ್ನು ಬಾಯ್ಕಾಟ್ ಮಾಡುತ್ತಿದ್ದೇವೆ. ಜಿಯೋ ಸಿಮ್ ವಾಪಸ್ ಮಾಡಿ ಬೇರೆ ಕಂಪನಿಯ ಸಿಮ್ ಉಪಯೋಗಿಸಲು ಮುಂದಾಗುತ್ತಿದ್ದೇವೆ ಎಂದು ತಿಳಿಸಿದರು.
ಪ್ರತಿಭಟನೆಯಲ್ಲಿ ಅತ್ತಹಳ್ಳಿ ದೇವರಾಜು, ಕುಮಾರ್, ಮಹದೇವ ಸೇರಿದಂತೆ ಹಲವರು ಭಾಗವಹಿಸಿದ್ದರು.