ಜ.11ರಿಂದ ರಾಜ್ಯಾದ್ಯಂತ ಬಿಜೆಪಿಯಿಂದ ಜನಸೇವಕ್ ಸಮಾವೇಶ

Update: 2021-01-09 16:20 GMT

ಬೆಂಗಳೂರು, ಜ.9: ಗ್ರಾಮಪಂಚಾಯತ್ ಚುನಾವಣೆಯಲ್ಲಿ ಗೆದ್ದಿರುವ ಸದಸ್ಯರಿಗೆ ಅಭಿನಂದನೆ ಹಾಗೂ ಮತದಾರರಿಗೆ ಕೃತಜ್ಞತೆ ಸಲ್ಲಿಸಲು ರಾಜ್ಯ ಬಿಜೆಪಿ ವತಿಯಿಂದ ಜ.11 ರಿಂದ 13ರವರೆಗೆ ವಿವಿಧ ಜಿಲ್ಲೆಗಳಲ್ಲಿ ಜನಸೇವಕ್ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಗೋಪಾಲಯ್ಯ ತಿಳಿಸಿದ್ದಾರೆ.

ಶನಿವಾರ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಜನಸೇವಕ ಸಮಾವೇಶದ ಕುರಿತು ಸುದ್ದಿಗೋಷ್ಠಿಯನ್ನುದ್ದೆಶಿಸಿ ಮಾತನಾಡಿದ ಅವರು, ಒಟ್ಟು ಐದು ತಂಡಗಳಲ್ಲಿ ರಾಜ್ಯದ 30 ಜಿಲ್ಲೆಗಳಲ್ಲಿ ಜ.11ರಿಂದ 13ರವರೆಗೆ ಸಮಾವೇಶ ನಡೆಯಲಿದ್ದು, ಗ್ರಾಪಂ ಸದಸ್ಯರು ಮುಂದಿನ ದಿನಗಳಲ್ಲಿ ಯಾವ ರೀತಿ ಜನ ಸೇವೆ ಮಾಡಬೇಕೆಂಬುದರ ಬಗ್ಗೆ ಜಾಗೃತಿ ಮೂಡಿಸುವುದೆ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ ಎಂದರು.

ಜ.11ರಂದು ಮೈಸೂರಿನಲ್ಲಿ ಮೊದಲ ಸಮಾವೇಶ ಆರಂಭವಾಗಲಿದ್ದು, ಮುಖ್ಯಮಂತ್ರಿ ಯಡಿಯೂರಪ್ಪ, ರಾಜ್ಯ ಬಿಜೆಪಿ ಅಧ್ಯಕ್ಷ ನಳೀನ್‍ಕುಮಾರ್ ಕಟೀಲ್, ಆಭಾಗದ ಸಂಸದರು, ಶಾಸಕರು, ಜಿಲ್ಲಾ ಹಾಗೂ ತಾಲೂಕು ಪಂಚಾಯತ್ ಸದಸ್ಯರು, ಗ್ರಾಪಂ ಚುನಾವಣೆಯಲ್ಲಿ ಗೆದ್ದಿರುವ ಅಭ್ಯರ್ಥಿಗಳು ಮತ್ತು ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ಅವರು ಮಾಹಿತಿ ನೀಡಿದರು.

ರಾಜ್ಯದ ಎಲ್ಲ ಕಡೆಯೂ ಈ ಜನಸೇವಕ್ ಸಮಾವೇಶಗಳನ್ನು ಆಯೋಜಿಸಲಾಗುವುದು. ಇದಕ್ಕಾಗಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಉಪಮುಖ್ಯಮಂತ್ರಿಗಳಾದ ಅಶ್ವಥ ನಾರಾಯಣ, ಗೋವಿಂದ ಕಾರಜೋಳ, ಸಚಿವರಾದ ಜಗದೀಶ್ ಶೆಟ್ಟರ್, ಕೆ.ಎಸ್.ಈಶ್ವರಪ್ಪ ಹಾಗೂ ಶ್ರೀರಾಮುಲು ನೇತೃತ್ವದಲ್ಲಿ 5 ತಂಡಗಳನ್ನು ರಚನೆ ಮಾಡಲಾಗಿದೆ ಎಂದು ಅವರು ತಿಳಿಸಿದರು.

ಜನಸೇವಕ್ ಸಮಾವೇಶದಲ್ಲಿ ಗ್ರಾಪಂ ಸದಸ್ಯರು ತಾವು ಯಾವ ರೀತಿ ಕರ್ತವ್ಯಗಳನ್ನು ನಿಭಾಯಿಸಬೇಕು, ಸರಕಾರದ ಯೋಜನೆಗಳನ್ನು ಪ್ರತಿ ಹಳ್ಳಿ, ಪ್ರತಿ ಕುಟುಂಬಕ್ಕೆ ತಲುಪಿಸುವುದು ಸೇರಿದಂತೆ ಸದಸ್ಯರ ಜವಾಬ್ದಾರಿಗಳನ್ನು ಹಿರಿಯ ಮುಖಂಡರು ಮನವರಿಕೆ ಮಾಡಿಕೊಡಲಿದ್ದಾರೆ ಗೋಪಾಲಯ್ಯ ಹೇಳಿದರು.

ಗ್ರಾಪಂ ಚುನಾವಣೆಗೂ ಮುನ್ನ ನಾವು ಪಕ್ಷದ ಸೂಚನೆಯಂತೆ ರಾಜ್ಯದ ಹಲವೆಡೆ ಪ್ರವಾಸ ಮಾಡಿ ಕೇಂದ್ರ ಮತ್ತು ರಾಜ್ಯ ಸರಕಾರದ ಯೋಜನೆಗಳನ್ನು ಮತದಾರರಿಗೆ ಮನವರಿಕೆ ಮಾಡಿದ್ದೆವು. ರಾಜ್ಯದ ಜನತೆಯು ಬಿಜೆಪಿಯನ್ನು ಮೆಚ್ಚಿ ಈ ಚುನಾವಣೆಯಲ್ಲಿ ನಮಗೆ ಹೆಚ್ಚಿನ ಸ್ಥಾನ ನೀಡಿದ್ದಾರೆ ಎಂದು ಗೋಪಾಲಯ್ಯ ಹರ್ಷ ವ್ಯಕ್ತಪಡಿಸಿದರು.

ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಮುಖ್ಯಮಂತ್ರಿ ಯಡಿಯೂರಪ್ಪ, ರಾಜಾಧ್ಯಕ್ಷ ನಳಿನ್‍ಕುಮಾರ್ ಕಟೀಲ್ ಸೇರಿದಂತೆ ಪಕ್ಷದ ಮುಖಂಡರ ಸೂಚನೆಯಂತೆ ರಾಜ್ಯದೆಲ್ಲೆಡೆ ಪಕ್ಷವನ್ನು ಸಂಘಟನೆ ಮಾಡಲಾಗುವುದು ಎಂದು ಅವರು ಹೇಳಿದರು.

ಮುಂಬರುವ ತಾಲೂಕು ಮತ್ತು ಜಿಲ್ಲಾ ಪಂಚಾಯತ್ ಚುನಾವಣೆಗೆ ಪಕ್ಷವನ್ನು ಇನ್ನಷ್ಟು ಸಂಘಟಿಸಿ ಹೆಚ್ಚಿನ ಸ್ಥಾನ ಗಳಿಸಲಿದ್ದೇವೆ. ಕೇಂದ್ರ ಮತ್ತು ರಾಜ್ಯ ಸರಕಾರದ ಸಾಧನೆಗಳನ್ನು ರಾಜ್ಯದ ಮತದಾರರು ಒಪ್ಪಿಕೊಂಡಿದ್ದು, ಸರಕಾರದ ಬಗ್ಗೆ ಎಲ್ಲರಿಗೂ ತೃಪ್ತಿಯಿದೆ ಎಂದು ಅವರು ಹೇಳಿದರು.

ವಿಧಾನಪರಿಷತ್ ಸದಸ್ಯ ಎನ್.ರವಿಕುಮಾರ್ ಮಾತನಾಡಿ, ಜ.13 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ. ಬೆಳಗಾವಿ ಭಾಗದ ಜನ ಸೇವಕ್ ಸಮಾವೇಶದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾಗವಹಿಸಲಿದ್ದಾರೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಬಿಜೆಪಿ ಎಸ್ಸಿ ಮೋರ್ಚಾ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News