ಸಿಸಿಬಿ ಬಲೆಗೆ ಬಿದ್ದ ಯುವರಾಜನಿಗೂ ನನಗೂ ಯಾವುದೇ ಸಂಬಂಧವಿಲ್ಲ: ಸಚಿವ ವಿ.ಸೋಮಣ್ಣ

Update: 2021-01-09 16:23 GMT

ಬೆಂಗಳೂರು, ಜ. 9: ‘ಆತನ ನಡೆ, ವೇಷಭೂಷಣ ನೋಡಿ ದೈವಭಕ್ತ ಇರಬೇಕು ಅಂದುಕೊಂಡಿದ್ದೆ. ಹೀಗಾಗಿ, ನಾನು ಆತನ ಮನೆಗೆ ಹೋಗಿದ್ದೆ. ನಾಲ್ಕೈದು ಬಾರಿ ನನಗೆ ಕರೆ ಮಾಡಿದ್ದ. ಈಗ ಅನಿಸ್ತಿದೆ, ಅವನ ಮನೆಗೆ ಹೋಗಿದ್ದು ತಪ್ಪು ಅಂತಾ' ಎಂದು ವಸತಿ ಸಚಿವ ವಿ.ಸೋಮಣ್ಣ, ಸಿಸಿಬಿ ಬಲೆಗೆ ಬಿದ್ದ ಯುವರಾಜನ ಕುರಿತು ಇಂದಿಲ್ಲಿ ಸ್ಪಷ್ಟನೆ ನೀಡಿದ್ದಾರೆ.

ಶನಿವಾರ ತಮ್ಮ ನಿವಾಸದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಯುವರಾಜನಿಗೂ ನನಗೂ ಯಾವುದೇ ವ್ಯಕ್ತಿಗತ ಸಂಬಂಧವಿಲ್ಲ. ಒಮ್ಮೆ ಆತನ ಮನೆಗೆ ಹೋಗಿ ತಿಂಡಿ ತಿಂದು, ಕಾಫಿ ಕುಡಿದಿದ್ದೆ. ಆತ ಕೊಟ್ಟ ತಟ್ಟೆ ನೋಡಿಯೇ ಬೆಚ್ಚಿಬಿದ್ದಿದ್ದೆ ಎಂದು ಹೇಳಿದರು.

ಯುವರಾಜ ಯಾರು ಎಂದು ನನಗೆ ಗೊತ್ತಿರಲಿಲ್ಲ. ಬಿಜೆಪಿ ಕಾರ್ಯಕರ್ತ ಎಂದು ಗುರುತಿಸಿಕೊಂಡಿದ್ದ. ಒಂದು ದಿನ ಬಲವಂತವಾಗಿ ಅವರ ಮನೆಗೆ ಕರೆದುಕೊಂಡು ಹೋಗಿದ್ದ. ಆತನ ವೈಭವಯುತ ಮನೆ ನೋಡಿದಾಗ ನನಗೆ ಆಗಲೆ ಗೊತ್ತಾಗಿತ್ತು. ಆತನಿಂದ ನನಗೆ ಯಾವುದೇ ರೀತಿಯಲ್ಲಿ ಅನ್ಯಾಯ ಆಗಿಲ್ಲ ಎಂದು ಸೋಮಣ್ಣ ವಿವರಣೆ ನೀಡಿದರು.

ನಾನು ಆತನಿಗೆ ಯಾವುದೇ ಹಣವನ್ನು ನೀಡಿಲ್ಲ. ಅದರ ಅಗತ್ಯವೂ ನನಗಿಲ್ಲ. ಒಂದು ವೇಳೆ ಅವನೇನಾದರೂ ನನ್ನ ಹೆಸರು ಹೇಳಿಕೊಂಡು ಬೇರೆಯವರಿಗೆ ಮೋಸ ಮಾಡಿದ್ದಾನೆಂದು ಸಣ್ಣ ಸುಳಿವು ಸಿಕ್ಕಿದರೂ ನನ್ನ ಬೆಂಬಲಿಗರು ಅವನನ್ನು ಸುಮ್ಮನೆ ಬಿಡುತ್ತಿರಲಿಲ್ಲ ಎಂದು ಸೋಮಣ್ಣ ತಿಳಿಸಿದರು.

ಕಾನೂನಿಗಿಂತ ಯಾರೂ ದೊಡ್ಡವರಲ್ಲ. ಯಾವ ತನಿಖೆ ಬೇಕಾದರೂ ಆಗಲಿ, ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದ ಅವರು, ಮಾಧ್ಯಮಗಳಲ್ಲಿ ಸುದ್ದಿ ಬಂದ ಮೇಲೇನೇ ಆತ ವಂಚಕ ಎಂದು ಗೊತ್ತಾಯಿತು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News