×
Ad

ಹೊಸ ವರ್ಷ ಆಚರಿಸಿದ ವೀರೇಂದ್ರ ಹೆಗ್ಗಡೆ, ರವಿಶಂಕರ್ ಗುರೂಜಿ ಕ್ಷಮೆ ಕೋರಲಿ: ಪ್ರಮೋದ್ ಮುತಾಲಿಕ್

Update: 2021-01-09 21:55 IST

ಬೆಳಗಾವಿ, ಜ.9: ಜ.1ರಂದು ಮಂಜುನಾಥ ದೇವಸ್ಥಾನಕ್ಕೆ ದೀಪಾಲಂಕಾರ ಮಾಡಿ ಹೊಸ ವರ್ಷ ಆಚರಿಸಿರುವ ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಹಾಗೂ ಬೆಂಗಳೂರಿನ ಇಸ್ಕಾನ್ ದೇವಸ್ಥಾನದವರು ಸಾರ್ವಜನಿಕವಾಗಿ ಕ್ಷಮೆ ಯಾಚಿಸಬೇಕು ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಆಗ್ರಹಿಸಿದರು.

ಶನಿವಾರ ನಗರದಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮುತಾಲಿಕ್, ಪವಿತ್ರವಾದ ಧರ್ಮಸ್ಥಳ ಮಂಜುನಾಥ ದೇವಾಲಯ ಮತ್ತು ಕೃಷ್ಣನ ದೇವಸ್ಥಾನವಾದ ಇಸ್ಕಾನ್‍ನಲ್ಲಿ ನಮ್ಮದಲ್ಲದ ಸಂಸ್ಕೃತಿಯ ಆಚರಣೆ ಮಾಡಿರುವುದು ನೋವಿನ ಸಂಗತಿಯಾಗಿದ್ದು, ಅವರ ಈ ಕ್ರಮವನ್ನು ತೀವ್ರವಾಗಿ ಖಂಡಿಸುತ್ತೇನೆ. ಕೂಡಲೇ ಕ್ಷಮೆ ಕೋರದಿದ್ದಲ್ಲಿ ಹೋರಾಟ ನಡೆಸಲಾಗುವುದು ಎಂದರು.

ಒಂದೆಡೆ ನಾವು ಮತಾಂತರದ ವಿರೋಧ ಮಾಡುತ್ತಿದ್ದೇವೆ. ಮತಾಂತರ ಪ್ರಕ್ರಿಯೆಯನ್ನು ಕಾಯ್ದೆ ಮೂಲಕ ತಡೆಯುವ ಪ್ರಕ್ರಿಯೆಯೂ ರಾಜ್ಯದಲ್ಲಿ ನಡೆಯುತ್ತಿದೆ. ಹೀಗಿರುವಾಗ, ಹಿಂದೂ ದೇವರನ್ನು ಆರಾಧಿಸುವ ದೇವಸ್ಥಾನದಲ್ಲಿ ಕ್ರೈಸ್ತ ಧರ್ಮದ ಆಚರಣೆ ಎಷ್ಟು ಸರಿ, ಧರ್ಮ ವಿರೋಧಿಯಾಗಿ ನಡೆದುಕೊಂಡರೆ ಹೇಗೆ ಎಂದು ಪ್ರಶ್ನಿಸಿದರು.

ಆರ್ಟ್ ಆಫ್ ಲಿವಿಂಗ್‍ನ ರವಿಶಂಕರ್ ಗುರೂಜಿ ಅವರು ಎಂಥದೋ ವೇಷವನ್ನೇ ಧರಿಸಿ ಹೊಸ ವರ್ಷ ಆಚರಿದ್ದಾರೆ. ಅವರಿಗೆ ನಾಚಿಕೆ, ಮಾನಮರ್ಯಾದೆ ಇದೆಯೇ ಎಂದು ಪ್ರಶ್ನಿಸಿದರು.

ದೇವಾಲಯಗಳಲ್ಲಿ ಹೊಸ ವರ್ಷಾಚರಣೆಯು, ಕ್ರೈಸ್ತ ಧರ್ಮಕ್ಕೆ ಮತಾಂತರಕ್ಕೆ ಪ್ರೇರಣೆ ಕೊಟ್ಟಂತಾಗುತ್ತದೆ. ಹೀಗೆ ಆಚರಿಸಿದ ಫೋಟೊಗಳನ್ನೇ ಹಿಡಿದುಕೊಂಡು ಪಾದ್ರಿಗಳು ಮತಾಂತರಕ್ಕೆ ಹೋಗುತ್ತಿದ್ದಾರೆ ಎಂದರು.

ಗೋಮಾಂಸ ರಫ್ತು ನಿಷೇಧಿಸಬೇಕು

ಗೋ ಹತ್ಯೆ ನಿಷೇಧ ಕಾಯ್ದೆಯಲ್ಲಿ ಕೆಲ ಲೋಪಗಳೂ ಇವೆ. ಕಸಾಯಿಖಾನೆಗಳ ಬಗ್ಗೆ ಉಲ್ಲೇಖವಿಲ್ಲ. 13 ವರ್ಷದ ಮೇಲಿನ ಗೋವುಗಳ ಹತ್ಯೆಗೆ ಅವಕಾಶ ನೀಡಲಾಗಿದೆ. ಇದು ಸರಿಯಲ್ಲ. ಸಂಪೂರ್ಣವಾಗಿ ನಿಷೇಧವಾಗಬೇಕು. ಗೋಮಾಂಸ ರಫ್ತು ಕೂಡ ನಿಷೇಧಿಸಬೇಕು. ಚೆಕ್‍ಪೋಸ್ಟ್‍ಗಳಲ್ಲಿ ಬಿಗಿ ಬಂದೋಬಸ್ತ್ ಕೈಗೊಳ್ಳಬೇಕು. ಗ್ರಾಮ ಮಟ್ಟದಲ್ಲಿ ಸಮಿತಿ ರಚಿಸಬೇಕು.

-ಪ್ರಮೋದ್ ಮುತಾಲಿಕ್, ಶ್ರೀರಾಮ ಸೇನೆ ಸಂಸ್ಥಾಪಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News