ಯುವ ಕಾಂಗ್ರೆಸ್ ಚುನಾವಣೆಯಿಂದ ಮಿಥುನ್ ರೈ ಹಿಂದೆ ಸರಿದ ಬಗ್ಗೆ ಡಿ.ಕೆ.ಶಿವಕುಮಾರ್ ಹೇಳಿದ್ದು ಹೀಗೆ...

Update: 2021-01-10 11:07 GMT

ಬೆಂಗಳೂರು, ಜ.10: 'ಯುವ ಕಾಂಗ್ರೆಸ್ ಅಧ್ಯಕ್ಷ ಚುನಾವಣೆ ಪಾರದರ್ಶಕವಾಗಿ ನಡೆಯಲಿ. ಪಕ್ಷ ಸಂಘಟನೆ ಮಾಡುವ ಉತ್ತಮ ನಾಯಕನ ಆಯ್ಕೆಯಾಗಲಿ. ನಾನು ಈ ಚುನಾವಣೆಯಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ತಿಳಿಸಿದ್ದಾರೆ.

ನಗರದಲ್ಲಿ ರವಿವಾರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ತಾಲೂಕು ಮಟ್ಟದಿಂದ ಜಿಲ್ಲಾ, ರಾಜ್ಯ ಹಾಗೂ ರಾಷ್ಟ್ರಮಟ್ಟದವರೆಗೂ ನಾಯಕರು ಬೆಳೆಯಬೇಕು ಎಂಬುದು ನಮ್ಮ ನಾಯಕರಾದ ರಾಜೀವ್ ಗಾಂಧಿ ಅವರ ಚಿಂತನೆ. ಅದಕ್ಕಾಗಿ ಅವರು ಸಂವಿಧಾನ ತಿದ್ದುಪಡಿ ತಂದರು. ನಾವು ವಿದ್ಯಾರ್ಥಿ ಸಂಘಟನೆಗಳ ಚುನಾವಣೆ ನಿಲ್ಲಿಸಿದ್ದೇವೆ. ಹೀಗಾಗಿ ಯುವ ಕಾಂಗ್ರೆಸ್ ಚುನಾವಣೆ ನಡೆಯುತ್ತಿದೆ ಎಂದು ಹೇಳಿದರು.

ಪಾರದರ್ಶಕ ಹಾಗೂ ಮುಕ್ತವಾಗಿ ಚುನಾವಣೆ ನಡೆಯಬೇಕು. ಪಕ್ಷದ ಅಧ್ಯಕ್ಷನಾಗಿ ನಾನು ಯಾರ ಪರವೂ ನಿಲ್ಲುವುದಿಲ್ಲ. ಯಾರಿಗೂ ವಿರೋಧ ಮಾಡುವುದಿಲ್ಲ.‌ ಯಾರಿಗೆ ಆಸಕ್ತಿ ಇದೆಯೋ, ಯಾರು ಪಕ್ಷಕ್ಕೆ ಸಮಯ ಕೊಟ್ಟು ಸಂಘಟನೆಗೆ ಶ್ರಮಿಸುತ್ತಾರೋ ಅಂತಹವರನ್ನು ಆಯ್ಕೆ ಮಾಡಿ ಕಳುಹಿಸಿ ಎಂದು ಮತದಾರರಿಗೆ ಮನವಿ ಮಾಡುತ್ತೇನೆ ಎಂದು ತಿಳಿಸಿದರು.

ಸ್ಪರ್ಧೆಯಿಂದ ಹಿಂದೆ ಸರಿಯಲು ಸಲಹೆ ಕೊಟ್ಟೆ: ಮಂಗಳೂರಿನಲ್ಲಿ ಮಿಥುನ್ ರೈಗೆ ಹೆಚ್ಚಿನ ಜವಾಬ್ದಾರಿ ಇದೆ. ಹಿಂದೆ ಅವರು ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದ್ದರು. ನಾನು ಅವರಿಗೆ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಸ್ಪರ್ಧೆಯಿಂದ ಹಿಂದೆ ಸರಿಯುವಂತೆ ಸಲಹೆ ಕೊಟ್ಟೆ. ಬೇರೆಯವರಲ್ಲಿ ಸ್ಪರ್ಧಿಸುವ ಉತ್ಸಾಹ ಇತ್ತು. ಮಿಥುನ್ ನನ್ನ ಆಪ್ತ. ನನ್ನ ಹೆಸರಿಂದ ಒಬ್ಬರಿಗೆ ಅನುಕೂಲವಾಗಿ ಮತ್ತೊಬ್ಬರಿಗೆ ಹಿನ್ನಡೆಯಾಗುವುದು ಬೇಡ ಎಂದು ನಾನು ಸಲಹೆ ನೀಡಿದೆ ಎಂದು ಸ್ಪಷ್ಟಪಡಿಸಿದರು.

ಕ್ರೀಡಾ ಮನೋಭಾವದೊಂದಿಗೆ ಸ್ವೀಕರಿಸಿ: ಯುವ ಕಾಂಗ್ರೆಸ್ ಸಮಿತಿಗೆ ಚುನಾವಣೆ ನಡೆಸಬೇಕು ಎಂದು ರಾಹುಲ್ ಗಾಂಧಿ ಕೈಗೊಂಡ ತೀರ್ಮಾನವನ್ನು ನಾವು ಸ್ವಾಗತಿಸುತ್ತೇವೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾಯಕರನ್ನು ನಾವು ಬೆಳೆಸಬೇಕು. ಚುನಾವಣೆಯಲ್ಲಿ ಸ್ಪರ್ಧಿಸಲು ಆಸಕ್ತಿ ಹೆಚ್ಚಿಸಬೇಕೆಂಬುದು ನಮ್ಮ ನಾಯಕರ ಸಂಕಲ್ಪ ಎಂದು ಶಿವಕುಮಾರ್ ಹೇಳಿದರು.

ಸ್ಪರ್ಧಿಗಳು ಈ ಚುನಾವಣೆಯನ್ನು ಕ್ರೀಡಾ ಮನೋಭಾವನೆಯಿಂದ ಸ್ವೀಕರಿಸಬೇಕು. ಗೆಲುವು, ಸೋಲು ಮುಖ್ಯವಲ್ಲ. ಚುನಾವಣೆಯಲ್ಲಿ ನಿಂತಿರುವವರೆಲ್ಲರೂ ಗೆಲ್ಲಲು ಸಾಧ್ಯವಿಲ್ಲ. ಸ್ಪರ್ಧಿಗಳು ಬಹಳ ತಾಳ್ಮೆಯಿಂದ ಚುನಾವಣೆಯನ್ನು ಎದುರಿಸಬೇಕು. ವೈಯಕ್ತಿಕ ಆರೋಪಗಳನ್ನು ಮಾಡದೆ ಚುನಾವಣೆಯನ್ನು ನಡೆಸಬೇಕು. ತಾಲೂಕು, ಜಿಲ್ಲಾ ಹಾಗೂ ರಾಜ್ಯಮಟ್ಟದಲ್ಲಿ ಪಕ್ಷ ಸಂಘಟನೆಯಲ್ಲಿ ಹೆಚ್ಚು ಸಕ್ರಿಯವಾಗಿರುವ ಯುವಕರ ಅಗತ್ಯ ನಮಗಿದೆ. ಅಂತಹ ನಾಯಕರನ್ನು ನೀವೆ ಆಯ್ಕೆ ಮಾಡಿಕೊಡಿ ಎಂದು ಮತದಾರರಲ್ಲಿ ಮನವಿ ಮಾಡಿಕೊಳ್ಳುತ್ತೇನೆ ಎಂದು ಶಿವಕುಮಾರ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News