ಜ.29ರಿಂದ ಕೇಂದ್ರ ಬಜೆಟ್ ಅಧಿವೇಶನ: ಸಚಿವ ಪ್ರಹ್ಲಾದ್ ಜೋಶಿ

Update: 2021-01-10 11:43 GMT

ಹುಬ್ಬಳ್ಳಿ, ಜ. 10: ಇದೇ ತಿಂಗಳು 29ರಿಂದ ಫೆಬ್ರವರಿ 15ರ ವರೆಗೆ ಕೇಂದ್ರ ಬಜೆಟ್ ಅಧಿವೇಶನ ನಡೆಯಲಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಹಾಗೂ ಗಣಿ ಮತ್ತು ಕಲ್ಲಿದ್ದಲು ಸಚಿವ ಪ್ರಹ್ಲಾದ್ ಜೋಶಿ ಇಂದಿಲ್ಲಿ ತಿಳಿಸಿದ್ದಾರೆ.

ರವಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಫೆ.1ಕ್ಕೆ 2021-22ನೆ ಸಾಲಿನ ಆಯವ್ಯಯ ಮಂಡಿಸಲಿದ್ದು, ಕರ್ನಾಟಕ ರಾಜ್ಯದ ಆದ್ಯತಾ ಪಟ್ಟಿಯನ್ನು ಕೇಂದ್ರಕ್ಕೆ ಈಗಾಗಲೇ ಸಲ್ಲಿಸಲಾಗಿದೆ ಎಂದು ಹೇಳಿದರು.

ಜ.30ರಂದು ಸರ್ವಪಕ್ಷದ ಸಭೆ ನಡೆಯಲಿದ್ದು, ಮಾರ್ಚ್ 8ರಿಂದ ಎಪ್ರಿಲ್ 8ರ ವರೆಗೆ ಎರಡನೇ ಅಧಿವೇಶನ ನಡೆಯಲಿದೆ ಎಂದ ಅವರು, ಸಚಿವ ಸಂಪುಟ ವಿಸ್ತರಣೆ ಸಂಬಂಧ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ರಾಷ್ಟ್ರೀಯ ಚರ್ಚಿಸಿ ತೀರ್ಮಾನ ಮಾಡಲಿದ್ದಾರೆ ಎಂದರು.

ಬಿಜೆಪಿ ಹಾಗೂ ಪ್ರಧಾನಿ ಮೋದಿ ಅವರನ್ನು ವಿರೋಧಿಸುವ ಭರದಲ್ಲಿ ವಿಪಕ್ಷಗಳು ದೇಶವನ್ನು ವಿರೋಧಿಸುವುದು ಬೇಡ. ಅಲ್ಲದೆ ವಿಜ್ಞಾನಿಗಳಿಗೆ ಅಗೌರವ ತೋರುವುದು ಬೇಡ ಎಂದ ಅವರು, ಕೋವಿಡ್ ವ್ಯಾಕ್ಸಿನ್ ಅತ್ಯಂತ ಸುರಕ್ಷಿತ ಎಂದು ಹೇಳಿದರು.

ಜ.16 ಹಾಗೂ 17ರಂದು ಕೇಂದ್ರ ಗೃಹ ಸಚಿವ ಅಮೀತ್ ಶಾ ಅವರು ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ. ಜ.17ರಂದು ಬೆಳಗಾವಿಯಲ್ಲಿ ನಡೆಯಲಿರುವ ‘ಜನಸೇವಕ ಸಮಾವೇಶ’ ಪಾಲ್ಗೊಳ್ಳಲಿದ್ದು, ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News