ಚಿಕ್ಕಮಗಳೂರು ನಗರದ ವಿವಿಧೆಡೆ ಹಕ್ಕಿಗಳ ಸಾವು: ಹಕ್ಕಿಜ್ವರದ ಆತಂಕ

Update: 2021-01-10 12:13 GMT

ಚಿಕ್ಕಮಗಳೂರು, ಜ.10: ರಾಜ್ಯ ಹಾಗೂ ದೇಶದ ವಿವಿಧ ರಾಜ್ಯಗಳಲ್ಲಿ ಹಕ್ಕಿಜ್ವರದ ಭೀತಿ ಎದುರಾಗಿರುವ ಸಂದರ್ಭದಲ್ಲಿ ಜಿಲ್ಲೆಯಲ್ಲೂ ಹಕ್ಕಿಜ್ವರದ ಭೀತಿ ಸಾರ್ವಜನಿಕರನ್ನು ಕಾಡುತ್ತಿದೆ. ರವಿವಾರ ನಗರದ ಬಡಾವಣೆಯೊಂದರಲ್ಲಿ ನಾಲ್ಕು ಹಕ್ಕಿಗಳು ಸತ್ತು ಬಿದ್ದಿದ್ದು, ಹಕ್ಕಿಜ್ವರದಿಂದಲೇ ಹಕ್ಕಿಗಳು ಸತ್ತು ಬಿದ್ದಿರಬಹುದೆಂದು ಸಾರ್ವಜನಿಕರು ಆತಂಕಗೊಂಡಿದ್ದಾರೆ.

ನಗರದ ಜಯಜನಗರ ಬಡಾವಣೆಯ 7ನೇ ತಿರುವಿನಲ್ಲಿ ನಾಲ್ಕು ಹಕ್ಕಿಗಳು ಸತ್ತು ಬಿದ್ದಿದ್ದು, ಇವು ಹಕ್ಕಿಜ್ವರದಿಂದಲೇ ಸತ್ತಿರಬಹುದೆಂದು ಬಡಾವಣೆ ನಿವಾಸಿಗಳು ಶಂಕಿಸಿ ಸಂಬಂಧಿಸಿದ ಇಲಾಖಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಆದರೆ ಯಾವ ಅಧಿಕಾರಿಗಳು ಸ್ಥಳಕ್ಕೆ ಬರಲಿಲ್ಲ ಎಂದು ಆರೋಪಿಸಿರುವ ನಿವಾಸಿಗಳು ಸತ್ತು ಬಿದ್ದಿದ್ದ ಹಕ್ಕಿಗಳನ್ನು ಬೀದಿ ನಾಯಿಗಳು ತಿಂದು ಹಾಕಿವೆ ಎಂದು ತಿಳಿಸಿದ್ದಾರೆ.

ರಾಜ್ಯದ ಹಲವೆಡೆ ಹಕ್ಕಿಜ್ವರದ ಭೀತಿ ಆವರಿಸಿದ್ದು, ಚಿಕ್ಕಮಗಳೂರು ನಗರದಲ್ಲಿ ಕೆಲ ದಿನಗಳಿಂದ ವಿವಿಧ ಜಾತಿಯ ಹಕ್ಕಿಗಳು ಎಲ್ಲೆಂದರಲ್ಲಿ ಸತ್ತು ಬೀಳುತ್ತಿದ್ದು, ಈ ಹಕ್ಕಿಗಳು ಹಕ್ಕಿಜ್ವರದಿಂದ ಸಾಯುತ್ತಿವೆಯೋ ಅಥವಾ ಬೇರೆ ರೋಗಗಳಿಂದ ಸಾಯುತ್ತಿವೆಯೋ ಎಂಬುದನ್ನು ಆರೋಗ್ಯ ಇಲಾಖೆಯ ಅಧಿಕಾರಿಗಳು ಸಾರ್ವಜನಿಕರಿಗೆ ಸ್ಪಷ್ಟನೆ ನೀಡಬೇಕಿದೆ. ಆದರೆ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಸಾರ್ವಜನಿಕರಲ್ಲಿ ಹಕ್ಕಿಜ್ವರದ ಆತಂಕ ದಿನೇ ದಿನೇ ಹೆಚ್ಚುತ್ತಿದೆ ಎಂದು ಜಯನಗರ ಬಡಾವಣೆ ನಿವಾಸಿಗಳು ದೂರು ಹೇಳಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News