ವಕ್ಫ್ ಬೋರ್ಡ್ ಅನುದಾನ ದುರುಪಯೋಗ ಆರೋಪ: ಶಾಫಿ ಸಅದಿ ವಿರುದ್ಧ ಎಸಿಬಿಗೆ ದೂರು

Update: 2021-01-10 16:07 GMT
ಶಾಫಿ ಸಅದಿ

ಬೆಂಗಳೂರು, ಜ.10: ಮಸೀದಿ ಕಾಂಪೌಂಡ್ ನಿರ್ಮಾಣದ ಹೆಸರಿನಲ್ಲಿ ಕರ್ನಾಟಕ ವಕ್ಫ್ ಬೋರ್ಡ್ ಸದಸ್ಯ ಎನ್.ಕೆ.ಎಂ. ಶಾಫಿ ಸಅದಿಯವರು ಸರಕಾರಿ ಅನುದಾನವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಆರೋಪಿಸಿ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ)ಕ್ಕೆ ದೂರು ನೀಡಲಾಗಿದೆ.

ಈ ಬಗ್ಗೆ ಬೆಂಗಳೂರು ನಗರ ವಕ್ಫ್ ಸಲಹಾ ಸಮಿತಿಯ ಉಪಾಧ್ಯಕ್ಷ ನಯಾಝ್ ಅಹ್ಮದ್ ಅವರು ಭ್ರಷ್ಟಾಚಾರ ನಿಗ್ರಹ ದಳದ ಎಡಿಜಿಪಿಗೆ ದೂರು ನೀಡಿದ್ದಾರೆ.

ವಕ್ಫ್ ಬೋರ್ಡ್ ಸದಸ್ಯರಾಗಿರುವ ಶಾಫಿ ಸಅದಿ ತನ್ನ ಅಧಿಕಾರವನ್ನು ದುರುಪಯೋಪಡಿಸಿಕೊಂಡು ಅವರು ಕಾರ್ಯದರ್ಶಿಯಾಗಿರುವ ಮಸೀದಿಯನ್ನು 2020ರ ಸೆಪ್ಟಂಬರ್ 9ರಂದು ವಕ್ಫ್ ಬೋರ್ಡ್‌ನಡಿ ನೋಂದಣಿ ಮಾಡಿಸಿದ್ದಾರೆ. ಅಲ್ಲದೆ ಮಸೀದಿಗೆ ಈಗಾಗಲೇ ಕಾಂಪೌಂಡ್ ಗೋಡೆ ಇದ್ದರೂ ಕಾಂಪೌಂಡ್ ನಿರ್ಮಾಣದ ಹೆಸರಿನಲ್ಲಿ 2020ರ ಅಕ್ಟೋಬರ್ 29ರಂದು ಮಸೀದಿಗೆ ಅನುದಾನ ಮಂಜೂರು ಮಾಡಿಸಿಕೊಂಡಿದ್ದಾರೆ. ಅಲ್ಲದೆ 2020ರ ಡಿಸೆಂಬರ್ 31ರಂದು ಈ ಅನುದಾನ ಬಿಡುಗಡೆಯೂ ಆಗಿದೆ. ಈ ರೀತಿ ವಕ್ಫ್ ಬೋರ್ಡ್ ಸದಸ್ಯರಾಗಿದ್ದುಕೊಂಡು ಶಾಫಿ ಸಅದಿ ಸರಕಾರಕ್ಕೆ ವಂಚನೆ ಎಸಗಿದ್ದಾರೆ. ಆದ್ದರಿಂದ ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಹಾಗೂ ವಕ್ಫ್ ಬೋರ್ಡ್ ಸದಸ್ಯತ್ವದಿಂದ ಅವರನ್ನು ವಜಾಗೊಳಿಸಬೇಕು ಎಂದು ದೂರಿನಲ್ಲಿ ಒತ್ತಾಯಿಸಿದ್ದಾರೆ.

''ಸರಕಾರದಿಂದಲೇ ವಕ್ಫ್ ಬೋರ್ಡ್ ಸದಸ್ಯರಾಗಿ ನಿಯೋಜಿತರಾಗಿರುವ ಶಾಫಿ ಸಅದಿಯವರು ಬನ್ನೇರುಘಟ್ಟದಲ್ಲಿರುವ ತನ್ನ ಸಅದಿಯ ಎಜ್ಯುಕೇಶನಲ್ ಫೌಂಡೇಶನ್ ಅಧೀನದ ಮಸೀದಿಗೆ ಕಾಂಪೌಂಡ್ ಗೋಡೆ ನಿರ್ಮಾಣಕ್ಕೆಂದು ಸರಕಾರ ನೀಡುವ ಹಣವನ್ನು ಮಂಜೂರಾತಿ ಮಾಡಿಸಿದ್ದಾರೆ. ಆದರೆ ಶಾಫಿ ಸಅದಿ ಕಾರ್ಯದರ್ಶಿಯಾಗಿರುವ ಈ ಮಸೀದಿ ಕಟ್ಟಡ, ಕಾಂಪೌಂಡ್ ಗೋಡೆ ಸೇರಿದಂತೆ ಎಲ್ಲ ಕಾಮಗಾರಿಗಳು 2015ರಲ್ಲೇ ಪೂರ್ಣಗೊಂಡಿದ್ದು, ಅದರ ಉದ್ಘಾಟನಾ ಕಾರ್ಯಕ್ರಮದ ಶಿಲಾ ಫಲಕವನ್ನು ಕಾಂಪೌಂಡ್ ಗೋಡೆಯಲ್ಲೇ ಕಾಣಬಹುದು'' ಎಂದು ರಾಜ್ಯ ಅಲ್ಪ ಸಂಖ್ಯಾತ ಆಯೋಗದ ಮಾಜಿ ಅಧ್ಯಕ್ಷ ಅನ್ವರ್ ಮಾಣಿಪ್ಪಾಡಿ ಹೇಳಿದ್ದಾರೆ.

ಶಾಫಿ ಸಅದಿ ಈ ಮಸೀದಿಯನ್ನು 2020ರ ಸೆಪ್ಟಂಬರ್ 9ರಂದು ವಕ್ಫ್ ಬೋರ್ಡ್‌ನಡಿ ನೋಂದಣಿ ಮಾಡಿಸಿದ್ದಾರೆ. ಅಲ್ಲದೆ ಮಸೀದಿಗೆ ಈಗಾಗಲೇ ಕಾಂಪೌಂಡ್ ಗೋಡೆ ಇದ್ದರೂ ಸರಕಾರಕ್ಕೆ ಸುಳ್ಳು ಹೇಳಿ 2020ರ ಅಕ್ಟೋಬರ್ 29ರಂದು 19 ಲಕ್ಷ ರೂ. ಮಂಜೂರಾತಿ ಮಾಡಿಸಿದ್ದಾರೆ. ಡಿ.31ರಂದು ಅನುದಾನ ಬಿಡುಗಡೆ ಕೂಡಾ ಆಗಿದೆ. ಅದರಲ್ಲಿ ಮೊದಲ ಕಂತಿನ 5 ಲಕ್ಷ ರೂ. ಬಿಡುಗಡೆಯಾಗಿತ್ತು. ಈ ವಿಚಾರವನ್ನು ತಾನು ಈಗಾಗಲೇ ರಾಜ್ಯ ವಕ್ಫ್ ಸಚಿವರ ಗಮನಕ್ಕೆ ತಂದು ಈ ಹಣವನ್ನು ಸ್ಥಗಿತಗೊಳಿಸುವಂತೆ ಮಾಡಿದ್ದೇನೆ. ಅಲ್ಲದೆ ಈ ಬಗ್ಗೆ ಬೆಂಗಳೂರು ನಗರ ವಕ್ಫ್ ಸಲಹಾ ಸಮಿತಿಯ ಉಪಾಧ್ಯಕ್ಷ ನಯಾಝ್ ಅಹ್ಮದ್ ಎಸಿಬಿಗೆ ದೂರು ಕೂಡಾ ನೀಡಿದ್ದಾರೆ ಎಂದು ಅನ್ವರ್ ಮಾಣಿಪ್ಪಾಡಿ ತಿಳಿಸಿದ್ದಾರೆ.

ಈ ಬಗ್ಗೆ ವಕ್ಫ್ ಬೋರ್ಡ್ ಸದಸ್ಯ ಎನ್.ಕೆ.ಎಂ.ಶಾಫಿ ಸಅದಿ ಅವರು ಪ್ರತಿಕ್ರಿಯಿಸಿದ್ದು, ಎಲ್ಲಾ ಆರೋಪದ ಬಗ್ಗೆ ಶೀಘ್ರದಲ್ಲೇ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಲಿದ್ದೇನೆ ಎಂದು ತಿಳಿಸಿದ್ದಾರೆ.

(ದೂರುದಾರರು ಬಿಡುಗಡೆ ಮಾಡಿರುವ ಫೋಟೋಗಳು)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News