ಯಡಿಯೂರಪ್ಪ ಸಂಪುಟದಲ್ಲಿ ನಾನು ಮಂತ್ರಿ ಆಗುವುದಿಲ್ಲ: ಶಾಸಕ ಬಸನಗೌಡ ಯತ್ನಾಳ್

Update: 2021-01-10 15:04 GMT

ವಿಜಯಪುರ, ಜ. 10: ‘ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ. ಅಲ್ಲದೆ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಂಪುಟದಲ್ಲಿ ನಾನು ಮಂತ್ರಿ ಆಗದಿರಲು ನಿರ್ಧರಿಸಿದ್ದೇನೆ' ಎಂದು ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅಸಮಾಧಾನ ಹೊರಹಾಕಿದ್ದಾರೆ.

ರವಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನಾನು ಮಂತ್ರಿ ಆಗಬೇಕೆಂದು ಯಡಿಯೂರಪ್ಪ ಹೇಳುವುದಿಲ್ಲ. ನನಗೆ ಅಷ್ಟೊಂದು ವಿಶ್ವಾಸವಿದೆ. ಸಚಿವ ಸ್ಥಾನಕ್ಕಾಗಿ ನಾನು ಎಂದೂ ಒತ್ತಾಯಿಸುವುದಿಲ್ಲ ಎಂದರು.

ಈ ಹಿಂದೆಯೂ ನಾನು ನನ್ನ ಯೋಗ್ಯತೆಯ ಆಧಾರದ ಮೇಲೆ ಕೇಂದ್ರದಲ್ಲಿ ಮಂತ್ರಿ ಆಗಿದ್ದೆ. ಕಾಡಿ-ಬೇಡಿ, ದಲ್ಲಾಳಿಗಳ ಮೂಲಕ ಮಂತ್ರಿ ಆಗಲು ನಾನು ಎಂದೂ ಪ್ರಯತ್ನ ಮಾಡುವುದಿಲ್ಲ. ನನ್ನ ಬಯೋಡೇಟಾ ಪ್ರಧಾನಿಗಳ ಕಚೇರಿಯಲ್ಲಿ, ಗೃಹ ಸಚಿವರ ಕಾರ್ಯಾಲಯದಲ್ಲಿ, ರಾಷ್ಟ್ರೀಯ ಅಧ್ಯಕ್ಷರ ಕಚೇರಿಯಲ್ಲಿದೆ ಎಂದು ಯತ್ನಾಳ್ ತಿಳಿಸಿದರು.

ನನಗೆ ಸಚಿವ ಸ್ಥಾನ ಸಿಗದೇ ಇದ್ದರೂಐ ಅಡ್ಡಿ ಇಲ್ಲ. ಆದರೆ, ರಾಜ್ಯದ ಅಭಿವೃದ್ಧಿಯೇ ನನ್ನ ಕನಸು. ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರಿಯಾಧ್ಯಕ್ಷ ಜೆ.ಪಿ.ನಡ್ಡಾ ತೆಗೆದುಕೊಳ್ಳುವ ನಿರ್ಧಾರಕ್ಕೆ ನಾನು ಬದ್ಧ ಎಂದು ಯತ್ನಾಳ್ ಹೇಳಿದರು.

ಕೊರೋನ ಹಿನ್ನೆಲೆಯಲ್ಲಿ ಆರ್ಥಿಕ ಸಮಸ್ಯೆಯಾಗಿದ್ದು, ಬಜೆಟ್‍ನಲ್ಲಿ ಕೆಲವೊಂದು ಕೆಲಸಕ್ಕೆ ಬಾರದ ಯೋಜನೆಗಳನ್ನು ತೆಗೆಯಬೇಕು. ನೀರಾವರಿ, ವಸತಿ, ಮೂಲಸೌಕರ್ಯಕ್ಕೆ ಬಜೆಟ್‍ನಲ್ಲಿ ಒತ್ತು ನೀಡಬೇಕು ಎಂದು ಅವರು ತಿಳಿಸಿದರು.

ನೋಟಿಸ್ ಬಂದಿಲ್ಲ: ಕೇಂದ್ರ ಶಿಸ್ತು ಸಮಿತಿ ನನಗೆ ನೋಟಿಸ್ ಕೊಡುತ್ತದೆಯೋ ಇಲ್ಲವೋ ಗೊತ್ತಿಲ್ಲ. ಆದರೆ, ನಾನು ಈವರೆಗೆ ಪಕ್ಷದ ಶಿಸ್ತನ್ನು ಮೀರಿಲ್ಲ. ಇದುವರೆಗೆ ಯಾರೂ ನನಗೆ ಯಾವುದೇ ರೀತಿಯ ನೋಟಿಸ್ ನೀಡಿಲ್ಲ ಎಂದು ಬಸನಗೌಡ ಪಾಟೀಲ್ ಯತ್ನಾಳ್ ಸ್ಪಷ್ಟಪಡಿಸಿದರು.

ಸಂಪುಟ ವಿಸ್ತರಣೆ ಬಗ್ಗೆ ಮೋದಿ, ಅಮಿತ್ ಶಾ, ಜೆ.ಪಿ. ನಡ್ಡಾ ನಿರ್ಧಾರ ಮಾಡಬಹುದು. ಪ್ರದೇಶವಾರು, ಜಿಲ್ಲಾವಾರು, ಜಾತಿವಾರು ಸಚಿವ ಸ್ಥಾನ ಹಂಚಿಕೆ ಬಗ್ಗೆ ವರಿಷ್ಠರಿಂದ ನಿರ್ಧಾರ ಸಿಗಬಹುದು. ಸಂಪುಟದಲ್ಲಿ ಏನೇನು ಬದಲಾವಣೆ ಮಾಡುತ್ತಾರೆಂದು ಗೊತ್ತಿಲ್ಲ. ಒಟ್ಟಾರೆ ಪ್ರಮುಖ ನಿರ್ಣಯ ಕೈಗೊಳ್ಳಲು ಮುಖ್ಯಮಂತ್ರಿ ಕರೆಸಿಕೊಂಡಿದ್ದಾರೆಂದು ಅವರು ತಿಳಿಸಿದರು.

‘ಜ.14ಕ್ಕೆ ಮಕರ ಸಂಕ್ರಮಣ, ಈ ಬಾರಿ ಉತ್ತರಾಯಣ 20 ಅಥವಾ 21ಕ್ಕೆ ಇದೆ. ನಾನು ಇದರ ಬಗ್ಗೆ ಮಾತ್ರ ಹೇಳಿಕೆಯನ್ನು ನೀಡಿದ್ದೇನೆ. ಮಾಧ್ಯಮ ಪ್ರತಿನಿಧಿಗಳು ಈ ಕುರಿತು ಗಡಿಬಿಡಿ ಮಾಡುವ ಅಗತ್ಯವಿಲ್ಲ. ಉತ್ತರಾಯಣ ಬದಲಾವಣೆಯ ಪರ್ವಕಾಲ. ಹೀಗಾಗಿ, ಸಚಿವ ಸಂಪುಟದಲ್ಲಿ ಬದಲಾವಣೆಯಾಗಬಹುದು, ಪುನಾರಚನೆಯೂ ಆಗಬಹುದು'

-ಬಸನಗೌಡ ಪಾಟೀಲ್ ಯತ್ನಾಳ್, ಬಿಜೆಪಿ ಶಾಸಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News