ಚಿಕ್ಕಮಗಳೂರು: ಎಸ್ಪಿ ಕಚೇರಿ ಎದುರಿನ ವೃತ್ತಕ್ಕೆ ಮಧುಕರ್ ಶೆಟ್ಟಿ ಹೆಸರಿಡಲು ಆಗ್ರಹ

Update: 2021-01-10 16:18 GMT
ಎಸ್ಪಿ ಕಚೇರಿ ಎದುರಿನ ವೃತ್ತ (ಒಳ ಚಿತ್ರದಲ್ಲಿ ಮಧುಕರ್ ಶೆಟ್ಟಿ)

ಚಿಕ್ಕಮಗಳೂರು, ಜ.10: ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಮುಂಭಾಗದ ವೃತ್ತಕ್ಕೆ ಐಪಿಎಸ್ ಅಧಿಕಾರಿ ದಿ.ಮಧುಕರ್ ಶೆಟ್ಟಿ ಅವರ ಹೆಸರಿಡಬೇಕೆಂದು ಸಂವಿಧಾನ ಸಂರಕ್ಷಣಾ ಸಮಿತಿ ಮುಖಂಡರು ಶನಿವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್.ಎಂ.ಅಕ್ಷಯ್ ಅವರಿಗೆ ಮನವಿ ಸಲ್ಲಿದ್ದಾರೆ. 

ಜಿಲ್ಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದ ಮಧುಕರ್ ಶೆಟ್ಟಿ ಅವರು ಪ್ರಾಮಾಣಿಕ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ಜಾತಿ ಧರ್ಮದ ಭೇದವಿಲ್ಲದೇ, ಬಡವ ಬಲ್ಲಿದರೆಂಬ ತಾರತಮ್ಯವಿಲ್ಲದೇ ಜೀವಿತಾವಧಿವರೆಗೂ ಪ್ರಾಮಾಣಿಕ ಸೇವೆ ಸಲ್ಲಿಸಿದ್ದಾರೆ ಎಂದು ಮುಖಂಡರು ಎಸ್ಪಿ ಸಲ್ಲಿಸಿರುವ ಮನವಿಯಲ್ಲಿ ತಿಳಿಸಿದ್ದಾರೆ. 

ಪೊಲೀಸ್ ಇಲಾಖೆಯಲ್ಲದೇ ಬೇರೆ ಇಲಾಖೆಯಲ್ಲಿ ಬಡವರಿಗೆ ದೊರೆಯಬೇಕಾದ ಸರಕಾರಿ ಸವಲತ್ತುಗಳನ್ನು ಸಂಬಂಧಿಸಿದ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ಸೌಲಭ್ಯಗಳನ್ನು ಬಡ ಫಲಾನುಭವಿಗಳಿಗೆ ಕೊಡಿಸುವ ಕೆಲಸ ಮಾಡುತ್ತಿದ್ದರು. ಸಾರಗೋಡು ವ್ಯಾಪ್ತಿಯ ಬಡವರನ್ನು ಅರಣ್ಯ ಇಲಾಖೆ ಅಧಿಕಾರಿಗಳು ಒಕ್ಕಲೆಬ್ಬಿಸಿದಾಗ ಯಲಗುಡಿಗೆ ಗ್ರಾಮಕ್ಕೆ ಸೇರಿದ ಒತ್ತುವರಿಯಾಗಿದ್ದ ಕಂದಾಯ ಭೂಮಿಯನ್ನು 32 ಜನರಿಗೆ ಹಂಚಿಕೆ ಮಾಡಿಕೊಡುವಲ್ಲಿ ಮುಖ್ಯ ಪಾತ್ರವಹಿಸಿದ್ದರು ಎಂದರು.

ಮಧುಕರ್ ಶೆಟ್ಟಿಯವರ ಅಕಾಲಿಕ ನಿಧನ ಪೊಲೀಸ್ ಇಲಾಖೆಗೆ ತುಂಬಲಾರದ ನಷ್ಟವಾಗಿದೆ. ಅವರ ನಿಧನದ ನಂತರ ಅವರ ಪತ್ನಿ ಗುಪ್ತಶೆಟ್ಟಿ ಹಳ್ಳಿಗೆ ಭೇಟಿ ನೀಡಿ ಅಲ್ಲಿನ ಬಡವರೊಂದಿಗೆ ಮಾತನಾಡಿ ಗ್ರಾಮದ ಅಭಿವೃದ್ಧಿಗೆ ಕೈಲಾದ ಸಹಾಯ ಮಾಡುವ ಭರವಸೆಯನ್ನು ನೀಡಿದ್ದರು. ಜಿಲ್ಲಾಧಿಕಾರಿಯಾಗಿದ್ದ ಹರ್ಷಗುಪ್ತ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ಮಧುಕರ್ ಶೆಟ್ಟಿ ಅವರನ್ನು ಹೆಸರನ್ನು ಶಾಶ್ವತಗೊಳಿಸಲು ಗ್ರಾಮಕ್ಕೆ ನಾಮಕರಣ ಮಾಡಿದ ಊರೇ ಈಗೀನ ಗುಪ್ತಶೆಟ್ಟಿಹಳ್ಳಿಯಾಗಿದೆ. ಜಿಲ್ಲೆಯಲ್ಲಿ ಪೊಲೀಸ್ ಅಧಿಕಾರಿಯಾಗಿ ಉತ್ತಮ ಕೆಲಸ ನಿರ್ವಹಿಸಿರುವ ಮಧುಕರ್ ಶೆಟ್ಟಿಯವರ ಹೆಸರನ್ನು ಜಿಲ್ಲಾ ಪೊಲೀಸ್ ಕಚೇರಿ ಎದುರಿನ ನೂತನವಾಗಿ ನಿರ್ಮಿಸಿರುವ ವೃತ್ತಕ್ಕೆ ನಾಮಕರಣ ಮಾಡಬೇಕೆಂದು ಮನವಿಯಲ್ಲಿ ಮುಖಂಡರು ಕೋರಿದ್ದಾರೆ. 

ಮನವಿ ನೀಡಿದ ಸಂದರ್ಭದಲ್ಲಿ ಸಮಿತಿ ಜಿಲ್ಲಾಧ್ಯಕ್ಷ ಗೌಸ್ ಮೊಹಿಯುದ್ದೀನ್, ಮುಖಂಡರಾದ ಪಿ.ಕೆ.ಹಸನಬ್ಬ, ಟಿ.ಎಲ್.ಗಣೇಶ್, ಮೋಹನ್, ಕೆ.ಆರ್.ಅಶೋಕ್ ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News