×
Ad

ಸನಾತನ ಪ್ರಗತಿಪರ ಮರುಸೃಷ್ಟಿಯಿಂದ ದೇಶ ಉದ್ಧಾರ ಆಗುವುದಿಲ್ಲ: ನಿಜಗುಣಾನಂದ ಸ್ವಾಮೀಜಿ

Update: 2021-01-10 22:44 IST

ಮೈಸೂರು, ಜ.10: ಸನಾತನ ಪ್ರಗತಿಪರ ಮರುಸೃಷ್ಠಿಯಿಂದ ದೇಶ ಉದ್ಧಾರ ಆಗುವುದಿಲ್ಲ. ಬುದ್ಧ ಬಸವ ಅಂಬೇಡ್ಕರ್ ಅವರ ಚಿಂತನೆಯ ಮರುಸೃಷ್ಟಿ ಆದಾಗ ಮಾತ್ರ ದೇಶ ಉದ್ಧಾರವಾಗುತ್ತದೆ ಎಂದು ಬೆಳಗಾವಿಯ ಮುಂಡರಗಿಯ ಶ್ರೀ ನಿಷ್ಕಲ ಮಂಟಪ, ಬೈಲೂರು ಮತ್ತು ತೋಂಟದಾರ್ಯ ಮಠದ ಶ್ರೀ ನಿಜಗುಣಾನಂದ ಸ್ವಾಮೀಜಿ ಅಭಿಪ್ರಾಯಿಸಿದರು.

ನಂಜನಗೂಡು ತಾಲೂಕು ದಲಿತ ಸಂಘಟನೆಗಳ ಒಕ್ಕೂಟದ ವತಿಯಿಂದ ನಗರದ ಅಂಬೇಡ್ಕರ್ ಭವನದ ಆವರಣದಲ್ಲಿ ರವಿವಾರ ಆಯೋಜಿಸಿದ್ದ 203ನೇ ಭೀಮಾ ಕೋರೆಂಗಾವ್ ವಿಜಯೋತ್ಸವದ ಅಂಗವಾಗಿ ದಲಿತರ ಸ್ವಾಭಿಮಾನ ಜಾಗೃತಿ ದಿನ 'ಬೃಹತ್ ಸಮಾವೇಶ'ವನ್ನು ಉದ್ಘಾಟನೆ ಮಾಡಿ ಅವರು ಮಾತನಾಡಿದರು.

ಬಸವಣ್ಣನವರ ವಿಚಾರ ಧಾರೆಗಳ ಬಗ್ಗೆ ಜಾಗೃತಿ ಮೂಡಿಸಬೇಕಾದ ನಾವು ಸನಾತನವಾದದ ಬಗ್ಗೆ ಮಾತನಾಡುತ್ತಿದ್ದೇವೆ. ಇದೇ ಸನಾತನವಾದಿಗಳು ಬುದ್ಧನ ವಿಚಾರಧಾರೆಗಳನ್ನು ಕೊಂದರು. ಬಸವಣ್ಣನವರನ್ನು ಮಧ್ಯ ರಾತ್ರಿ 12 ಗಂಟೆಯಲ್ಲಿ ಗಡಿಪಾರು ಮಾಡಿ ಶಿಕ್ಷೆ ಕೊಟ್ಟರು. ಅಂತಹ ಸನಾತವಾದದ ಬಗ್ಗೆ ನಾವುಗಳು ಮಾತನಾಡುತ್ತಿರುವುದು ವಿಪರ್ಯಾಸ ಎಂದು ವಾಗ್ದಾಳಿ ನಡೆಸಿದರು.

ಸನಾತನವಾದ ನೋಡಿದಾಗ ನಮಗೆ ಸಂತೋಷವಾಗುವುದಿಲ್ಲ. ಬುದ್ಧ, ಬಸವ ಮತ್ತು ಅಂಬೇಡ್ಕರ್ ಮೂರ್ತಿಗಳನ್ನು ನೋಡಿದಾಗ ಸಂತೋಷ ಆಗುತ್ತಿದೆ. ಇಂದಿನ ಯುವಕರಿಗೆ ಬುದ್ಧ, ಬಸವ ಅಂಬೇಡ್ಕರ್ ರವರ ಕೊರತೆ ಎದ್ದು ಕಾಣುತ್ತಿದ್ದು, ಎಲ್ಲರೂ ಬುದ್ಧ, ಬಸವಣ್ಣ ಮತ್ತು ಅಂಬೇಡ್ಕರ್ ಅವರನ್ನು ಓದಿಕೊಳ್ಳಬೇಕು ಎಂದು ಹೇಳಿದರು.

ಬಸವಣ್ಣನವರ ಹೆಜ್ಜೆಗಳು ಬಹಳ ಅದ್ಭುತ. ಬಸವಣ್ಣನವರನ್ನು ನಂಬಿದವರು ಯಾರೂ ಕೆಟ್ಟಿಲ್ಲ. ಕೆಟ್ಟವರು ಬಸವಣ್ಣನನ್ನು ನಂಬುವುದಿಲ್ಲ. ಬಸವಣ್ಣನವರನ್ನು ಈ ಪರಿಸ್ಥಿತಿಗೆ ತಂದು ಬಿಟ್ಟಿದ್ದಾರೆ. ಬಸವಣ್ಣನವರನ್ನು ಎತ್ತು, ಬಾಲಗಳಿಗೆ ತಂದು ನಿಲ್ಲಿಸಲಾಗಿದೆ ಎಂದು ಹರಿಹಾಯ್ದರು.

ನಮ್ಮಲ್ಲಿ ಸಂಘಟಿತ ಹೋರಾಟ ಬಹಳ ಮುಖ್ಯ. ಆದರೆ ಜಾತಿ ಹೆಸರಿನಲ್ಲಿ ಸಂಘಟನೆ ಮಾಡುವುದು ಸರಿಯಲ್ಲ. ಬುದ್ಧ ಬಸವಣ್ಣ ಮತ್ತು ಅಂಬೇಡ್ಕರ್ ಅವರ  ಮನಸ್ಸಿನಲ್ಲಿ ಏನಿತ್ತು ಎಂಬುದನ್ನು ತಿಳಿದುಕೊಂಡು ಸಂಘಟನೆ ಮಾಡಿ. ದ್ವೇಷಕ್ಕೆ ದ್ವೇಷವೇ ಪರಿಹಾರವಲ್ಲ, ದ್ವೇಷ ಮಾಡುವವರಿಗೆ ವಿಚಾರ ಹೇಳಿ ಪರಿವರ್ತನೆ ಮಾಡಬೇಕಿದೆ ಎಂದು ಹೇಳಿದರು.

ಬಸವಣ್ಣನ ಬಗ್ಗೆ ಮಾತನಾಡುವ ನಾವು ಅವರ ವಿಚಾರಗಳನ್ನು ಅನುಸರಿಸುತ್ತಿಲ್ಲ, ಬಸವಜಯಂತಿ ದಿನ ಎತ್ತಿಗೆ ಪೂಜೆ ಮಾಡಿ ಪಾನಕ ಕೋಸಂಬರಿ ತಿಂದು ಹೋಗಲಾಗುತ್ತಿದೆ. ಬಸವಣ್ಣನವರನ್ನು ಎತ್ತಿಗೆ ಹೋಲಿಕೆ ಮಾಡಲಾಗಿದೆ. ಬಸವಣ್ಣನವರನ್ನು ಎಲ್ಲಿಯವರೆಗೆ ನಾವು ಎತ್ತಾಗಿ ನೋಡುತ್ತೇವೆಯೋ ಅಲ್ಲಿಯವರೆಗೆ ನಮ್ಮನ್ನು ಯಾರು ಎತ್ತುವುದಿಲ್ಲ. ಬಸವಣ್ಣನವರು ನಮ್ಮ ಮನೆಯ ತಂದೆ ಎಂಬ ಭಾವನೆ ದಲಿತ ಸಮುದಾಯದಲ್ಲಿ ಬಂದರೆ ಜಗತ್ತಿನಲ್ಲಿ ಎಲ್ಲರೂ ಉದ್ಧಾರ ಆಗುವರು ಎಂದರು.

ಬಸವಣ್ಣ ಅವರನ್ನು ಜೀವಂತವಾಗಿ ಯಾವುದಾದರೂ ಸಮುದಾಯ ಉಳಿಸಿಕೊಂಡು ಬಂದಿದೆ ಎಂದರೆ ಅದು ನೀಲಗಾರ ಸಮುದಾಯ. ಅವರು ದಿನನಿತ್ಯ ತಮ್ಮ ಬಾಯಿಯಿಂದ ಬಸವಣ್ಣವರನ್ನು ಮತ್ತು ಅವರ ವಚನಗಳನ್ನು ಹೇಳಿಕೊಂಡು ಹಾಡುತ್ತಿರುತ್ತಾರೆ. ಹಾಗಾಗಿ ನಾವು ಮೊದಲು ಬಸವಣ್ಣನವರ ವಿಚಾರಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಅಭಿಪ್ರಾಯಿಸಿದರು.

ಶಾಸ್ತ್ರ ಪುರಾಣ ಹೇಳಿ ಜನರನ್ನು ದಾರಿತಪ್ಪಿಸುವವರು ದೇಶದ್ರೋಹಿಗಳಲ್ಲ. ಸತ್ಯವನ್ನು ಪ್ರತಿಪಾದನೆ ಮಾಡುವ ನಾವು ದೇಶದ್ರೋಹಿಗಳು. ನಮ್ಮನ್ನು ದೇಶದ್ರೋಹಿ ಎಂದವರು ಬಸವಣ್ಣ, ಬುದ್ಧನ ಅಂಬೇಡ್ಕರ್ ವಿಚಾರ ಧಾರೆಗಳನ್ನು ದೇಶದ್ರೋಹ ಎನ್ನಲಿದ್ದಾರೆಯೇ ಎಂದು ಪ್ರಶ್ನಿಸಿದರು.

ಬಸವಣ್ಣ ಯಾರಿಗಾಗಿ ಬದುಕಿದರು. ಬಸವಣ್ಣನ ಧರ್ಮ ಸಿದ್ಧಾಂತ ಏನು ಎಂದು ಅರಿತುಕೊಳ್ಳಬೇಕಿದೆ. ಬುದ್ಧನ ವಿಚಾರಗಳು ಹೆಚ್ಚು ಹೆಚ್ಚು ಹರಡುತ್ತದೆ ಎಂದು ಬುದ್ಧನನ್ನು ಓಡಿಸಿದರು. ಬುದ್ಧನ ನಂತರ ಮಹಾದೊಡ್ಡ ಮಹಾ ಪ್ರವಾದಿ ಯಾರಾದರೂ ಇದ್ದರೆ ಬಸವಣ್ಣ. ಬಸವಣ್ಣ ಬಹಳ ದೊಡ್ಡ ವ್ಯಕ್ತಿ. ಬಸವಣ್ಣ ಅವರ ಜೀವನ ಚರಿತ್ರೆ ಕೇವಲ ವಚನದ ಮೇಲೆ ನಿರ್ಧಾರ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು. 

ಅಂಬೇಡ್ಕರ್ ಅವರನ್ನು ಮೀಸಲಾತಿಗಾಗಿ ಬಳಸಬೇಡಿ, ಬದುಕಿಗಾಗಿ ಬಳಸಿ ಎಂದ ನಿಜಗುಣಾನಂದ ಸ್ವಾಮೀಜಿ, ಮಾಧ್ಯಮ ಎಂದರೆ ಏನು, ದೇವರು ಕಣ್ಣಿಗೆ ಬಟ್ಟೆಕಟ್ಟಿಕೊಂಡು ನ್ಯಾಯ ಕೊಡದಿದ್ದಾಗ ನಿಮ್ಮ ಪೆನ್ನುಗಳು ನ್ಯಾಯ ಒದಗಿಸುವಂತಾಗಬೇಕು. ಮಾಧ್ಯಮ ಎಂದರೆ ಸತ್ಯ ಎಂದು ಭಾವಿಸಲಾಗಿದೆ.  ಮಾಧ್ಯಮದವರ ಲೇಖನಿಯ ಇಂಕು ಸ್ವಾಭಿಮಾನದ ಇಂಕಾಗಬೇಕು. ರಾಜಕಾರಣಿಗಳ ಎರವಲಿನ ನಂಬಿಕೆ ಅಪನಂಬಿಕೆಯ ಇಂಕಾಗಬಾರದು ಎಂದು ಹೇಳಿದರು.

ಭೀಮಾ ಕೊರೆಂಗಾವ್ ವಿಜಯೋತ್ಸವ ಮೆರವಣಿಗೆಗೆ ಅವಕಾಶ ಕೊಟ್ಟಿಲ್ಲ ಎಂಬುದನ್ನು ಕೇಳಿದೆ. ಬ್ರಿಟನ್‍ನ ವೈರಸ್ ನಂಜನಗೂಡಿಗೆ ಬಂದಿರಬೇಕು.  ಇದರಿಂದ ಕಷ್ಟ ಆಗಬಹುದು ಎಂದು ಅನುಮತಿ ನೀಡಲಾಗಿಲ್ಲ ಎಂದುಕೊಳ್ಳುತ್ತೇನೆ ಎಂದು ವ್ಯಂಗ್ಯವಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ದಲಿತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಕಾರ್ಯಬಸವಣ್ಣ ವಹಿಸಿದ್ದರು. ಉರಿಲಿಂಗಿ ಪೆದ್ದಿ ಮಠದ ಜ್ಞಾನಪ್ರಕಾಶ್ ಸ್ವಾಮೀಜಿ ಮೆರವಣಿಗೆ ಉದ್ಘಾಟನೆ ಮಾಡಿದರು. ಪ್ರಗತಿಪರ ಚಿಂತಕ ಶಿವಸುಂದರ್ ಮುಖ್ಯ ಭಾಷಣ ಮಾಡಿದರು. ಮುಖ್ಯ ಅತಿಥಿಗಳಾಗಿ ದಲಿತ ಸಂಘಟನೆಗಳ ಒಕ್ಕೂಟದ ಗೌರವಾಧ್ಯಕ್ಷ ಮಲ್ಲೇಶ್ ಚುಂಚನಹಳ್ಳಿ ಭಾಗವಹಿಸಿದ್ದರು. ಮಲ್ಲಹಳ್ಳಿ ನಾರಾಯಣ್ ಪ್ರಾಸ್ತಾವಿಕ ನುಡಿಗಳನ್ನು ಆಡಿದರೆ,  ಅಭಿನಾಗಭೂಷಣ್ ಸ್ವಾಗತ ಮಾಡಿದರು. ಸುರೇಶ್ ಶಂಕರಪುರ ನಿರೂಪಣೆ ಮಾಡಿದರು.

ವೇದಿಕೆಯಲ್ಲಿ ನಗರ್ಲೆ ವಿಜಯಕುಮಾರ್, ಬೊಕ್ಕಳ್ಳಿ ಲಿಂಗಯ್ಯ, ಪುಟ್ಟಸ್ವಾಮಿ ದೇವರಸನಹಳ್ಳಿ, ಮಂಜುಶಂಕರಪುರ, ನಗರಸಭಾ ಸದಸ್ಯ  ಎನ್.ಎಸ್.ಯೋಗೀಶ್,  ಕುಮಾರ್ ಕಳಲೆ, ದೇವಮ್ಮ ಹೊಸಕೋಟೆ ಉಪಸ್ಥಿತರಿದ್ದರು.

5 ನಿರ್ಣಯಗಳು: ಭೀಮಾ ಕೊರೆಂಗಾವ್ ವಿಜಯೋತ್ಸವದಲ್ಲಿ ಬಂಧನಕ್ಕೊಳಗಾದ ಮುಖಂಡರುಗಳನ್ನು ಬಿಡುಗಡೆಗೊಳಿಸಬೇಕು. ರೈತರಿಗೆ ಮಾರಕವಾಗಿರುವ ಕೃಷಿ ಮಸೂದೆ ತಿದ್ದುಪಡಿ ಕಾಯ್ದೆ ವಿರೋಧಿಸಿ, ದಿಲ್ಲಿಯಲ್ಲಿ ನಡೆಯುತ್ತಿರುವ ರೈತರ ಹೋರಾಟಕ್ಕೆ ಸಂಪೂರ್ಣ ಬೆಂಬಲ. ರಾಜ್ಯ ಸರ್ಕಾರ ಜಾರಿಗೆ ತಂದಿರುವ ಗೋಹತ್ಯೆ ನಿಷೇಧ ಕಾಯ್ದೆಯನ್ನು ವಿರೋಧಿಸಲಾಗುತ್ತದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನವನ್ನು ಕಡಿತಗೊಳಿಸಿರುವುದನ್ನು ಖಂಡಿಸಿ ಹಾಗೂ ಹಿಂದಿನಂತೆ ವಿದ್ಯಾರ್ಥಿ ವೇತನ ನೀಡುವಂತೆ ಆಗ್ರಹ. ಬಳಕೆಯಾಗದ ಪರಿಶಿಷ್ಟಜಾತಿ ಮತ್ತು ಪರಿಶಿಷ್ಟ ಪಂಗಡದ ಅನುಧಾನವನ್ನು ಬೇರೆ ಇಲಾಖೆಗೆ ವರ್ಗಾಯಿಸುವುದನ್ನು ಖಂಡಿಸುತ್ತಾ ಆಯಾಯ ಇಲಾಖೆಗಳೇ ಖರ್ಚು ಮಾಡುವಂತೆ ಆದೇಶ ಮಾಡಬೇಕಾಗಿ ಸಮಾವೇಶದ ಮೂಲಕ ಒತ್ತಾಯ ಮಾಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News