ಸಂವಿಧಾನ ಉಳಿಸಬಹುದಾದ ಶಕ್ತಿ ಇರುವುದು ದಲಿತ, ದಮನಿತ ಸಮುದಾಯಗಳಿಗೆ ಮಾತ್ರ: ಚಿಂತಕ ಶಿವಸುಂದರ್
ಮೈಸೂರು: ಭೀಮಾ ಕೋರೆಗಾಂವ್ ಪ್ರಕರಣ ನೆನಸಿಕೊಳ್ಳಬೇಕು ಎಂದರೆ ದಲಿತರ ಸ್ವಾಭಿಮಾನವನ್ನು ಮತ್ತು ದಮನಿತ ಸಮುದಾಯದ ಪರಾಕ್ರಮ ಅಗತ್ಯವಿದೆ ಎಂದು ಪ್ರಗತಿಪರ ಚಿಂತಕ ಶಿವಸುಂದರ್ ಹೇಳಿದರು.
ನಂಜನಗೂಡಿನ ಖಾಸಿ ಬಸ್ ನಿಲ್ದಾಣದ ಬಳಿ ಇರುವ ಅಂಬೇಡ್ಕರ್ ಸಮುದಾಯ ಭವನದಲ್ಲಿ ರವಿವಾರ ನಂಜನಗೂಡು ತಾಲೂಕು ದಲಿತ ಸಂಘಟನೆಗಳ ಒಕ್ಕೂಟದ ವತಿಯಿಂದ ಆಯೋಜಿಸಿದ್ದ 203ನೇ ಭೀಮಾ ಕೋರೆಗಾಂವ್ ವಿಜಯೋತ್ಸವದ ಅಂಗವಾಗಿ ದಲಿತರ ಸ್ವಾಭಿಮಾನ ಜಾಗೃತಿ ದಿನ “ಬೃಹತ್ ಸಮಾವೇಶ”ದಲ್ಲಿ ಮುಖ್ಯ ಭಾಷಣಕಾರರಾಗಿ ಅವರು ಮಾತನಾಡಿದರು.
ಸಂವಿಧಾನ ಉಳಿಸಿಕೊಡಬಹುದಾದ ಶಕ್ತಿ ಇರುವುದು ದಲಿತ ದಮನಿತ ಸಮುದಾಯಗಳಿಗೆ ಮಾತ್ರ. ಸಂವಿಧಾನದಿಂದ ಸಿಗಬೇಕಾದದ್ದು ಸಿಗದಿರುವುದು ಬ್ರಾಹ್ಮಣಶಾಹಿಗಳಿಂದ. ದೇಶದ ಪ್ರಧಾನಿ ಅಂಬಾನಿ, ಅದಾನಿ ಜೊತೆ ಸೇರಿಕೊಂಡು ಆಳ್ವಿಕೆ ಮಾಡುತ್ತಿದ್ದಾರೆ. ಇವೆರಡರ ವಿರುದ್ಧ ನಾವು ನಿರಂತರ ಸ್ವಾಭಿಮಾನ ಪೂರಕ ಮತ್ತೊಂದು ಯುದ್ಧ ಮಾಡಬೇಕಿದೆ. ಸಂವಿಧಾದನ ಉಳಿವಿಗೆ ಮತ್ತು ಬೆಳವಿಗೆ ಹೋರಾಟ ಮಾಡಬೇಕಿದೆ ಎಂದು ಹೇಳಿದರು.
ಅಂಬೇಡ್ಕರ್ ಅವರು ಹಲವಾರು ಇಕ್ಕಟ್ಟಿನ ನಡುವೆ ನಮ್ಮ ಜನ ಬದುಕಬೇಕು ಎಂದು ಸಂವಿಧಾನದಲ್ಲಿ ಹಲವಾರು ರಕ್ಷಣೆಗಳನ್ನು ಕೊಟ್ಟಿದ್ದರು. ಆದರೆ ಅವೆಲ್ಲವನ್ನು ಕಿತ್ತುಹಾಕುತ್ತಿದ್ದಾರೆ. ಪಾರ್ಲಿಮೆಂಟ್ ತಪ್ಪು ಮಾಡಿದರೆ ಸುಪ್ರೀಂಕೋರ್ಟ್ ಎಂಬುದಿತ್ತು. ಆದರೆ ಅದೇ ಸುಪ್ರೀಂಕೋರ್ಟ್‍ಗಳು ಪ್ರಧಾನಿ ಮೋದಿ ಹೇಳಿದ್ದೆಲ್ಲಾ ಸರಿ ಎನ್ನುತ್ತಿವೆ ಎಂದು ಹರಿಹಾಯ್ದರು.
ಭೀಮಾ ಕೋರೆಗಾಂವ್ ವಿಜಯೋತ್ಸವ ಆಚರಣೆ ಮಾಡಿದರು ಎಂದು ಆನಂದ್ ತೇಲ್ತುಂಬ್ಡೆ, ವರಹರರಾವ್ ಸೇರಿದಂತೆ ಸ್ಟ್ಯಾನ್ ಸ್ವಾಮಿ ಅವರನ್ನು ಬಂಧಿಸಲಾಗಿದೆ. ಸಾವಿರಾರು ಜನರ ಕೊಲೆಗೆ ಕಾರಣರಾದವರು ದೇಶದ ಗೃಹ ಮಂತ್ರಿ. ಕೊಲೆಗಳಾಗುತ್ತಿದ್ದರೂ ಕಣ್ಣುಮುಚ್ಚಿಕೊಂಡಿದ್ದವರು ದೇಶದ ಪ್ರಧಾನಿ. ಅನ್ಯಾಯದ ವಿರುದ್ಧ ಮಾತನಾಡಿದವರು ದೇಶದ್ರೋಹಿಗಳು ! ಇದೆಂತ ವಿಪರ್ಯಾಸ ಎಂದು ಪ್ರಶ್ನಿಸಿದರು.
ದಿಲ್ಲಿಯಲ್ಲಿ ಕಳೆದ 46 ದಿನಗಳಿಂದ ದೇಶಕಂಡರಿಯದ ರೀತಿ 6 ಲಕ್ಷ ರೈತರು ಮುತ್ತಿಗೆ ಹಾಕಿ ಹೋರಾಟ ಮಾಡುತ್ತಿದ್ದಾರೆ. ಅಲ್ಲಿನ ಚಳಿ ಮಳೆಗೆ ಸಿಲುಕಿ 65 ಮಂದಿ ರೈತರು ಸತ್ತು ಹೋಗಿದ್ದಾರೆ. ಅವರ ಕಷ್ಟವನ್ನು ಕೇಳಲು ಸಮಯವಿಲ್ಲದ ಪ್ರಧಾನಿಗೆ ಸೌರವ್ ಗಂಗೂಲಿ ಆರೋಗ್ಯ ವಿಚಾರಿಸಲು ಸಮಯವಿದೆ ಎಂದು ವಾಗ್ದಾಳಿ ನಡೆಸಿದರು.
ದನಗಳನ್ನು ಕೊಂದರೆ ಜೈಲಿಗೆ ಹಾಕುತ್ತೀವಿ ಎನ್ನುತ್ತಾರೆ. ಜನಗಳನ್ನು ಕೊಂದವರು ದೇಶ ಆಳುತ್ತಿದ್ದಾರೆ. ಇದು ಜನಗಳ ಭಾರತವೊ ಜನಗಳ ಭಾರತವೊ. ದನ ಕೊಂದವರಿಗೆ ಕಠಿಣ ಶಿಕ್ಷೆ, ಜನ ಕೊಂದವರಿಗೆ ಪದವಿಗಳು
-ಜ್ಞಾನಪ್ರಕಾಶ್ ಸ್ವಾಮೀಜಿ, ಉರಿಲಿಂಗಿ ಪೆದ್ದಿ ಮಠ