‘ಪಂಚರತ್ನ’ ಕಾರ್ಯಕ್ರಮದಡಿ ಚುನಾವಣೆಗೆ ಜೆಡಿಎಸ್ ಸಿದ್ಧತೆ: ಮಾಜಿ ಸಿಎಂ ಕುಮಾರಸ್ವಾಮಿ

Update: 2021-01-10 18:01 GMT

ಮಂಡ್ಯ, ಜ.10: ‘ಪಂಚರತ್ನ’ ಕಾರ್ಯಕ್ರಮ ಸೂತ್ರದ ಮೂಲಕ ಜೆಡಿಎಸ್ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಜನರ ಬಳಿಗೆ ಹೋಗಲಿದೆ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ನೇರಳೆಕೆರೆ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ರವಿವಾರ ಚಾಲನೆ ನೀಡಿದ ವೇಳೆ ಮಾಧ್ಯಮದವರ ಜತೆ ಮಾತನಾಡಿದ ಅವರು, ರಾಜ್ಯದಲ್ಲಿ ತಮ್ಮ ಪಕ್ಷದ ನೇತೃತ್ವದ ಜನತಾ ಸರಕಾರ ತರಲು ಸಿದ್ದತೆ ನಡೆಸಿದ್ದೇನೆ ಎಂದರು.

ರಾಜ್ಯದ ಸಮಗ್ರ ಅಭಿವೃದ್ಧಿ ದೃಷ್ಟಿಕೋನವನ್ನು ಇಟ್ಟುಕೊಂಡು ಪಂಚರತ್ನ ಕಾರ್ಯಕ್ರಮದ ರೂಪುರೇಷೆಯ ಸಿದ್ದತೆಯಾಗಿದೆ. ವರ್ಷಕ್ಕೆ ಒಂದು ಕಾರ್ಯಕ್ರಮದಂತೆ ಐದು ವರ್ಷ ಐದು ಕಾರ್ಯಕ್ರಮಗಳನ್ನು ಪಂಚರತ್ನ ಕಾರ್ಯಕ್ರಮ ಒಳಗೊಂಡಿದೆ ಎಂದು ಅವರು ವಿವರಿಸಿದರು.

ರಾಜ್ಯದ 224 ಕ್ಷೇತ್ರದಲ್ಲೂ ಕುಮಾರಸ್ವಾಮಿಯೇ ಅಭ್ಯರ್ಥಿಯೆಂದು ತಿಳಿದು ಜನರು ಜೆಡಿಎಸ್‍ಗೆ ಪೂರ್ಣ ಬಹುಮತ ಕೊಟ್ಟು ನೋಡಲಿ ಕೊಟ್ಟ ಮಾತಿನಂತೆ ರೈತರ ಸಾಲಮನ್ನಾ ಮಾಡಿದ ಹಾಗೆ ದೇಶಕ್ಕೇ ಮಾದರಿಯಾಗುವಂತಹ ಪಂಚರತ್ನ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಿ ಮಾಡಿ ತೋರಿಸುತ್ತೇನೆ ಎಂದು ಅವರು ಮನವಿ ಮಾಡಿದರು.

ರಾಜ್ಯದ ಜನತೆ ಜಾತಿಗೆ ಮತ್ತು ಹಣದ ವ್ಯಾಮೋಹಕ್ಕೆ ಬಲಿಯಾಗದೆ ನನ್ನ ಪಕ್ಷ ಬೆಂಬಲಿಸಿದರೆ ನಾನು ನೀಡಿದ ಭರವಸೆಗಳನ್ನು ಸಾಕಾರಗೊಳಿಸುತ್ತೇನೆ. ಒಂದು ಪಕ್ಷ ಸಾಧ್ಯವಾಗದಿದ್ದರೆ ಜೆಡಿಎಸ್ ಪಕ್ಷವನ್ನು ವಿಸರ್ಜಿಸಿ ರಾಜಕೀಯಕ್ಕೆ ಗುಡ್‍ಬೈ ಹೇಳುತ್ತೇನೆ ಎಂದು ಕುಮಾರಸ್ವಾಮಿ ಹೇಳಿಕೊಂಡರು.

ಉಪಚುನಾವಣೆ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಮುಂದಿನ ವಿಧಾನಸಭಾ ಚುನಾವಣೆಯತ್ತ ನನ್ನ ಗುರಿ. ಈ ಆ ಚುನಾವಣೆ ಜನರು ಮತ್ತು ನನ್ನ ನಡುವಿನ ಪ್ರಶ್ನೆಯಾಗಿದೆ. ಪಕ್ಷದಿಂದ ಯಾರೇ ಅಭ್ಯರ್ಥಿಯಾದರೂ ಕುಮಾರಸ್ವಾಮಿಯೆಂದೇ ಮತಹಾಕಬೇಕು ಎಂದು ಅವರು ಮನವಿ ಮಾಡಿದರು.

ಪಕ್ಷ ಸಂಘಟನೆಗೂ ಈಗಾಗಲೇ ಚಾಲನೆ ಕೊಟ್ಟಿದ್ದೇವೆ. ಗ್ರಾಮ ಪಂಚಾಯತ್ ಮಟ್ಟದಿಂದ ಪಕ್ಷವನ್ನು ಸಂಘಟಿಸಿ ಬಲಗೊಳಿಸಲು ಸಿದ್ದತೆ ನಡೆದಿದೆ. ಜನವರಿ 15ರಿಂದ ಅದರ ಚಟುವಟಿಕೆಗಳು ಆರಂಭವಾಗಲಿವೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಸ್ಥಳೀಯ ಜೆಡಿಎಸ್ ಶಾಸಕ ರವೀಂದ್ರ ಶ್ರೀಕಂಠಯ್ಯ, ವಿಧಾನಪರಿಷತ್ ಸದಸ್ಯರಾದ ಕೆ.ಟಿ.ಶ್ರೀಕಂಠೇಗೌಡ, ಎನ್.ಅಪ್ಪಾಜಿಗೌಡ, ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

ಬಿಜೆಪಿಯವರು ರಾಮರಾಜ್ಯ ರಾಮರಾಜ್ಯ ಎಂದು ಬರೀ ಬಾಯಲ್ಲಿ ಹೇಳುತ್ತಾರೆ ಅಷ್ಟೆ. ಇವತ್ತು ಉತ್ತರಪ್ರದೇಶದಲ್ಲಿ ಏನಾಗುತ್ತಿದೆ ನೋಡುತ್ತಿದ್ದೀವಲ್ಲ, ಅದು ಅವರ ರಾಮರಾಜ್ಯವೇ ?. ಜನರು ಜೆಡಿಎಸ್‍ಗೆ ಮತನೀಡಿ ಪರೀಕ್ಷೆ ಮಾಡಿ ನೋಡಲಿ, ಜನರಿಂದ ಆಯ್ಕೆಯಾದ ಒಂದು ಸರಕಾರ ಯಾವ ರೀತಿ ಕೆಲಸ ಮಾಡಬಹುದು, ಯಾವ ರೀತಿ ರಾಮರಾಜ್ಯ ಮಾಡಬಹುದು ಎಂಬುದನ್ನು ಸಾಬೀತು ಮಾಡಿ ತೋರುತ್ತೇನೆ.
-ಎಚ್.ಡಿ.ಕುಮಾರಸ್ವಾಮಿ, ಮಾಜಿ ಸಿಎಂ

ನಾನು ಮುಖ್ಯಮಂತ್ರಿಯಾಗಿದ್ದಾಗ ರೂಪಿಸಿದ್ದ ಕಾಂಪೀಟ್ ವಿತ್ ಚೈನಾ ಯೋಜನೆಯ ಮರುರೂಪವೇ ಬಿಜೆಪಿಯ ಆತ್ಮನಿರ್ಭರ ಕಾರ್ಯಕ್ರಮ. ಯುವಕರಿಗೆ ಉದ್ಯೋಗ ನೀಡುವುದಾಗಿ ನಿನ್ನೆ ಕೊಪ್ಪಳದಲ್ಲಿ ಯಡಿಯೂರಪ್ಪ ಚಾಲನೆ ನೀಡಿದ ಆಟಿಕೆ ಕ್ಲಸ್ಟರ್ ಯೋಜನೆಗೂ ನಾನೇ ಹಾಂಕಾಂಗ್ ಜತೆ ಒಪ್ಪಂದಕ್ಕೆ ಸಹಿ ಹಾಕಿದ್ದೆ.
-ಎಚ್.ಡಿ.ಕುಮಾರಸ್ವಾಮಿ. ಮಾಜಿ ಸಿಎಂ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News