ಜ.12: ದಾವಣಗೆರೆಯಲ್ಲಿ ರೈತರೊಂದಿಗೊಂದು ದಿನ

Update: 2021-01-11 09:52 GMT

ಬೆಂಗಳೂರು/ದಾವಣಗೆರೆ, ಜ.11: ರೈತರಿಗೆ ಆತ್ಮಸ್ಥೈರ್ಯ ತುಂಬಲು ಹಾಗೂ ಸಮಗ್ರಕೃಷಿ ಬಗ್ಗೆ ಅವರಲ್ಲಿ ಅರಿವು ಮೂಡಿಸಲು ಕೃಷಿ ಸಚಿವ ಬಿ.ಸಿ.ಪಾಟೀಲ್ ಕೈಗೊಂಡಿರುವ “ರೈತರೊಂದಿಗೊಂದು ದಿನ’ ಈಗ ಮಧ್ಯಕರ್ನಾಟಕ ದಾವಣಗೆರೆ ಜಿಲ್ಲೆಯಲ್ಲಿ ಆಯೋಜನೆಗೊಂಡಿದೆ.

ಜ.12ರರಂದು ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನಿಂದ ಕೃಷಿ ಸಚಿವರ ರೈತರೊಂದಿಗೊಂದು ದಿನ ಆರಂಭವಾಗಲಿದೆ. ಹೊನ್ನಾಳಿ ತಾಲೂಕಿನ ಕಮ್ಮಾರಕಟ್ಟೆ ಗ್ರಾಮದ ಪ್ರಗತಿ ಪರ ರೈತ ಶ್ರೀನಿವಾಸ ಪಾಟೀಲ್ ಅವರ ತಾಕಿಗೆ ಭೇಟಿ ನೀಡಲಿರುವ ಸಚಿವರು, ಹೈಡ್ರೋಫೋನಿಕ್ಸ್ ವಿಧಾನದಲ್ಲಿ ಬೆಳೆದ ಮೇವಿನ ಮುಸುಕಿನ ಜೋಳದ ಬೆಳೆ, ಅಜೋಲ್ಲಾ ಬೆಳೆಗಳನ್ನು ವೀಕ್ಷಿಸಲಿದ್ದಾರೆ. ಅಲ್ಲದೇ ಜೀವಾಮೃತವನ್ನು ಬೆಳೆಗಳಿಗೆ ನೀಡಲಿರುವ ಬಿ.ಸಿ.ಪಾಟೀಲ್, ಯಾಂತ್ರೀಕೃತ ವಿಧಾನದಲ್ಲಿ ಭತ್ತದ ನಾಟಿಯಲ್ಲಿ ಪಾಲ್ಗೊಂಡು ಬಳಿಕ ರೈತರೊಂದಿಗೆ ಸಂವಾದ ನಡೆಸಲಿದ್ದಾರೆ.

ಅಲ್ಲಿಂದ ಆರುಂಡಿ ಗ್ರಾಮಕ್ಕೆ ಭೇಟಿ ನೀಡಿ, ಇಲ್ಲಿನ ಪ್ರಗತಿಪರ ರೈತರಾದ ಮಲ್ಲಿಕಾರ್ಜುಜನಪ್ಪ, ಶೇಖರಪ್ಪ ಹಾಗೂ ವೀರೇಶ್ ಇವರ ತಾಕುಗಳಿಗೆ ಭೇಟಿ ನೀಡಿ, ಹಿಂಗಾರು ಜೋಳದ ಬೆಳೆ ಸರ್ವೇ ದಾಖಲೀಕರಣ ಕಾರ್ಯದಲ್ಲಿ ಪಾಲ್ಗೊಳ್ಳಲಿದ್ದಾರೆ ಹಾಗೂ ಈರುಳ್ಳಿ ಬೆಳೆಗೆ ಲಘು ನೀರಾವರಿ ಪಕರಣದ ಮೂಲಕ ನೀರುಣಿಸಿ, ಮುಸುಕಿನ ಜೋಳದ ಬೆಳೆ ಉಳಿಕೆಗಳನ್ನು ಮಣ್ಣಿಗೆ ಸೇರಿಸುವುದು, ಕಡಲೆ ಬೆಳೆ ಕುಡಿ ಚಿವುಡುವುದು, ಲಘು ಪೋಷಕಾಂಶಗಳ ಸಿಂಪಡನೆ ಮಾಡಲಿದ್ದಾರೆ. 

ಬಳಿಕ ಕೆಂಚಿಕೊಪ್ಪ ಗ್ರಾಮದ ರೈತರೊಂದಿಗೆ ಸಾಂಸ್ಕೃತಿಕ ನಡಿಗೆಯಲ್ಲಿ ಪಾಲ್ಗೊಂಡು ಮುಸುಕಿನ ಜೋಳ ಒಕ್ಕಣೆ, ರಾಗಿ ತೆನೆಯಿಂದ  ರೋಣಗಲ್ಲು ಮೂಲಕ ರಾಗಿ ಬೇರ್ಪಡಿಸುವಿಕೆ ಮತ್ತು ಕಣ  ಸುಗ್ಗಿ ಹಬ್ಬ ಹಾಗೂ ರೈತರೊಡನೆ ರಾಶಿ ಪೂಜೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಅಲ್ಲದೇ ಕೃಷಿ ವಸ್ತು ಪ್ರದರ್ಶನ ಮಳಿಗೆಗಳ ಉದ್ಘಾಟನೆ ನೆರವೇರಿಸಿ ರೈತರಿಗೆ ಇಲಾಖೆಗಳ ಸವಲತ್ತುಗಳನ್ನು ವಿತರಿಸಲಿದ್ದಾರೆ. ಇನ್ನು ಕೆಂಚಿಕೊಪ್ಪ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿ ವೇದಿಕೆ ಕಾರ್ಯಕ್ರಮ ಆಯೋಜನೆಗೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News