ದಲಿತರ ಮೇಲಿನ ದೌರ್ಜನ್ಯ ಪ್ರಕರಣ: ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ವಿವಿಧ ಸಂಘಟನೆಗಳಿಂದ ಧರಣಿ

Update: 2021-01-11 12:03 GMT

ಚಿಕ್ಕಮಗಳೂರು, ಜ.11: ತಾಲೂಕಿನ ಹಾದಿಹಳ್ಳಿ ಗ್ರಾಮದ ದಲಿತ ಕುಟುಂಬದ ತಾಯಿ-ಮಗನ ಮೇಲೆ ದೌರ್ಜನ್ಯ ನಡೆಸಿದವರ ಬಂಧನಕ್ಕೆ ಪೊಲೀಸರು ನಿರ್ಲಕ್ಷ್ಯ ವಹಿಸಿದ್ದು, ಆರೋಪಿಗಳನ್ನು ಕೂಡಲೇ ಬಂಧಿಸಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಎಂದು ಆಗ್ರಹಿಸಿ ಜಿಲ್ಲೆಯ ವಿವಿಧ ಪ್ರಗತಿಪರ ಸಂಘಟನೆಗಳ ಮುಖಂಡರು ಮತ್ತು ಹಾದಿಹಳ್ಳಿ ಗ್ರಾಮದ ದಲಿತರು ಸೋಮವಾರ ನಗರದಲ್ಲಿ ಧರಣಿ ನಡೆಸಿದರು.

ದಲಿತರ ಮೇಲೆ ಹಲ್ಲೆ ನಡೆಸಿದ ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ಸೋಮವಾರ ಬೆಳಗ್ಗೆ ನಗರದ ಹನುಮಂತಪ್ಪ ವೃತ್ತದಿಂದ ಮೆರವಣಿಗೆ ಹೊರಟ ವಿವಿಧ ಸಂಘಟನೆಗಳ ಮುಖಂಡರು, ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಆಜಾದ್ ಪಾರ್ಕ್ ವೃತ್ತದಲ್ಲಿ ಸಮಾವೇಶಗೊಂಡು ಧರಣಿ ನಡೆಸಿದರು. ಪ್ರಕರಣ ನಡೆದು 6 ದಿನ ಕಳೆದರೂ ಹಲ್ಲೆ ನಡೆಸಿದ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಉದ್ದೇಶಪೂರ್ವಕವಾಗಿ ನಿರ್ಲಕ್ಷ್ಯ ಮಾಡಿದ್ದಾರೆಂದು ಇದೇ ವೇಳೆ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.

ಸಂವಿಧಾನ ಸಂರಕ್ಷಣಾ ಸಮಿತಿ ಮುಖಂಡ ಗೌಸ್‍ ಮೊಹಿಯುದ್ದೀನ್ ಮಾತನಾಡಿ, ಹಾದಿಹಳ್ಳಿ ಗ್ರಾಮದಲ್ಲಿ ಜ.5ರಂದು ಸಂಜೆ 7:30ರ ಸಮಾರಿನಲ್ಲಿ ದಲಿತ ಕುಟುಂಬದ ಜಾನುವಾರುಗಳು ಮೇಲ್ವರ್ಗದ ಮನೆಯವರ ಮುಂದಿದ್ದ ಜೋಳದ ಸಿಪ್ಪೆಯನ್ನು ತಿಂದಿದ್ದ ಕ್ಷುಲ್ಲಕ ಕಾರಣವನ್ನೇ ನೆಪ ಮಾಡಿಕೊಂಡು ಮೇಲ್ವರ್ಗದ ನಾಲ್ಕು ಮಂದಿ ಜಾನುವಾರುಗಳ ಮಾಲಕರಾದ ದಲಿತ ಸಮುದಾಯದ ಸಿದ್ದಮ್ಮ ಮತ್ತು ಅವರ ಮಗ ಪೂರ್ಣೇಶ್ ಅವರ ಮೇಲೆ ದೊಣ್ಣೆಗಳಿಂದ ಹಲ್ಲೆ ಮಾಡಿದ್ದಾರೆ. ಇಷ್ಟಕ್ಕೇ ಸುಮ್ಮನಾಗದ ಸವರ್ಣೀಯರು ತಾಯಿ ಮಗ ವಾಸವಿದ್ದ ಮನೆಯ ಮೇಲೆ ಕಲ್ಲುಗಳನ್ನು ಎಸೆದು ಹೆಂಚುಗಳನ್ನು ಒಡೆದು ಹಾಕಿದ್ದಾರೆ. ಸವರ್ಣೀಯರ ದಾಳಿಯಿಂದ ಗಾಯಗೊಂಡಿದ್ದ ಸಿದ್ದಮ್ಮ ಮತ್ತು ಪೂರ್ಣೇಶ್ ನಗರದ ಮಲ್ಲೇಗೌಡ ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ನೊಂದ ತಾಯಿ ಮಗ ಗ್ರಾಮಾಂತರ ಪೊಲೀಸರಿಗೆ ಈ ಸಂಬಂದ ದೂರು ನೀಡಿದ್ದಾರೆ. ಆದರೆ ಎಫ್‍ಐಆರ್ ದಾಖಲಿಸಿಕೊಂಡಿರುವ ಪೊಲೀಸರು 6 ದಿನ ಕಳೆದರೂ ಆರೋಪಿಗಳನ್ನು ಬಂಧಿಸಿಲ್ಲ ಎಂದು ಧರಣಿ ನಿರತ ಮುಖಂಡರು ಆರೋಪಿಸಿದರು.

ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದರೂ ಇದುವರೆಗೂ ಹಲ್ಲೆ ನಡೆಸಿದ ಸವರ್ಣೀಯರನ್ನು ಬಂಧಿಸುವಲ್ಲಿ ಪೊಲೀಸರು ಉದ್ದೇಶಪೂರ್ವಕವಾಗಿ ನಿರ್ಲಕ್ಷ್ಯ ವಹಿಸಿದ್ದಾರೆ. ಪ್ರಭಾವಿಗಳ ಒತ್ತಡಕ್ಕೆ ಜಿಲ್ಲಾ ಪೊಲೀಸ್ ಇಲಾಖೆ ಮಣಿದಿದ್ದು, ಆರೋಪಿಗಳ ರಕ್ಷಣೆಗೆ ಪೊಲೀಸರು ಮುಂದಾಗಿದ್ದಾರೆಂದು ದೂರಿದ ಮುಖಂಡರು, ಹಲ್ಲೆ ನಡೆಸಿದವರ ವಿರುದ್ಧ ಕೂಡಲೇ ಕಾನೂನು ಕ್ರಮಕೈಗೊಳ್ಳಬೇಕು. ತಪ್ಪಿದಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಲಾಗುವುದು ಎಂದು ಇದೇ ವೇಳೆ ಎಚ್ಚರಿಸಿದರು. 

ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಘಟನಾ ಸಂಚಾಲಕ ಯಲಗುಡಿಗೆ ಹೊನ್ನಪ್ಪ ಮಾತನಾಡಿ, ಈ ಹಿಂದೇ ಮಲ್ಲಂದೂರು ಗ್ರಾಮದ ಯುವಕ ಸುನೀಲ್ ಎಂಬ ಯುವಕನ ತಲೆಯನ್ನು ಪೊಲೀಸ್ ಪೇದೆಯೊಬ್ಬರು ಬೋಳಿಸಿ, ಹಲ್ಲೆ ನಡೆಸಿದ್ದರೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಾವುದೇ ಕ್ರಮ ಕೈಗೊಂಡಿಲ್ಲ. ಜಿಲ್ಲೆಯಲ್ಲಿ ದಲಿತರ ಮೇಲಿನ ಹಲ್ಲೆ ಪ್ರಕರಣಗಳು ಪದೇ ಪದೇ ನಡೆಯುತ್ತಿದ್ದು, ಇಂತಹ ಪ್ರಕರಣಗಳಿಗೆ ಜಿಲ್ಲಾಡಳಿತ ಮತ್ತು ಜಿಲ್ಲಾ ಪೊಲೀಸ್ ಇಲಾಖೆ ಕಡಿವಾಣ ಹಾಕಬೇಕೆಂದ ಅವರು, ಹಾದಿಹಳ್ಳಿ ಗ್ರಾಮದಲ್ಲಿ ದಲಿತ ಮೇಲೆ ಹಲ್ಲೆ ನಡೆಸಿದವರನ್ನು ಕೂಡಲೇ ಬಂಧಿಸಬೇಕು. ಹಲ್ಲೆಗೊಳಗಾದ ದಲಿತ ಕುಟುಂಬಕ್ಕೆ ರಕ್ಷಣೆ ನೀಡಬೇಕೆಂದರು

ಸಂವಿಧಾನ ಸಂರಕ್ಷಣಾ ವೇದಿಕೆಯ ಕೃಷ್ಣಮೂರ್ತಿ, ದಲಿತ ಸಂಘರ್ಷ ಸಮಿತಿ ರಾಜ್ಯ ಮುಖಂಡ ಕೆ.ಸಿ.ವಸಂತಕುಮಾರ್, ದಲಿತ ಜನದನಿಯ ಅನಿಲ್‍ಆನಂದ್, ಆಲ್ದೂರಿನ ನವರಾಜ್, ಯೂಸೂಫ್‍ ಹಾಜಿ, ತಡಗಸೆಯ ದಿವಾಕರ ಮತ್ತಿತರರು ಮಾತನಾಡಿದರು.

ಧರಣಿಯಲ್ಲಿ ದಸಂಸ ಮುಖಂಡರಾದ ಕೆ.ಆರ್.ಅಶೋಕ್, ಜಯಪ್ಪ, ದಲಿತ ಸಂಘಟನೆಯ ಮುಖಂಡರಾದ ಟಿ.ಎಲ್.ಗಣೇಶ್, ಪಿ.ಟಿ.ಚಂದ್ರಶೇಖರ್, ಹಾದಿಹಳ್ಳಿ ಪುಟ್ಟಸ್ವಾಮಿ, ಕೊಪ್ಪ ದಸಂಸ ಮುಖಂಡರಾದ ಮಮತಾ ಸಂಜೀವ, ವಿಶ್ವರತ್ನ ಯುವಸೇನೆಯ ಮುಖಂಡ ಎನ್.ವೆಂಕಟೇಶ್ ಸೇರಿದಂತೆ ಹಾದಿಹಳ್ಳಿ ಗ್ರಾಮದ ದಲಿತರು ಧರಣಿಯಲ್ಲಿ ಉಪಸ್ಥಿತರಿದ್ದರು. ಧರಣಿ ಬಳಿಕ ಎಸ್ಪಿ ಹಾಗೂ ಜಿಲ್ಲಾಧಿಕಾರಿಗೆ ಈ ಸಂಬಂಧದ ಮನವಿಯನ್ನು ಮುಖಂಡರು ಸಲ್ಲಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News