ಗೋಮಾಂಸ ತಿನ್ನುವುದೇ ದೊಡ್ಡ ಸಾಧನೆ ಎಂದು ಹೇಳುತ್ತಾರೆ: ಸಿದ್ದರಾಮಯ್ಯ ವಿರುದ್ಧ ಬಿಎಸ್‌ವೈ ಪರೋಕ್ಷ ವಾಗ್ದಾಳಿ

Update: 2021-01-11 15:15 GMT

ಮೈಸೂರು,ಜ.11: ಕಾಂಗ್ರೆಸ್ ಪಕ್ಷ ಎಲ್ಲಿದೆ? ಯಾಕಾಗಿ ಅವರನ್ನು ನಾವು ಪದೇಪದೇ ನೆನಪು ಮಾಡಿಕೊಳ್ಳಬೇಕು? ರಾಜ್ಯ ಹಾಗೂ ಕೇಂದ್ರದಲ್ಲಿ ಎಲ್ಲಾದರೂ ಅವರ ನಾಯಕತ್ವ ಇದೆಯೇ ? ಗೋಮಾಂಸ ತಿನ್ನುವುದೇ ದೊಡ್ಡ ಸಾಧನೆ ಎಂದು ನಿಮ್ಮ ಮೈಸೂರಿನ ಮುಖಂಡ ಹೇಳುತ್ತಾರೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಿದ್ದರಾಮಯ್ಯ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.

ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಗೆದ್ದಿರುವ ಬಿಜೆಪಿ ಬೆಂಬಲಿತ ಸದಸ್ಯರನ್ನು ಸನ್ಮಾನಿಸಲು ನಗರದ ಕಲಾಮಂದಿರದಲ್ಲಿ ಬಿಜೆಪಿ ಆಯೋಜಿಸಿರುವ 'ಜನ ಸೇವಕ್' ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು. 

ಗೋಮಾಂಸ ತಿನ್ನುವುದೇ ದೊಡ್ಡ ಸಾಧನೆ ಎಂದು ನಿಮ್ಮ ಮೈಸೂರಿನ ಮುಖಂಡ ಹೇಳುತ್ತಾರೆ. ಇಂಥ ನಾಯಕರ ಬಗ್ಗೆ ಮಾತನಾಡುವುದು ನಮಗೆ ಶೋಭೆ ತರುವಂಥದ್ದಲ್ಲ. ಅನೇಕ ರೀತಿಯಲ್ಲಿ ಟೀಕಿಸುತ್ತಿದ್ದಾರೆ, ಬೇಕಂತಲೇ ಕೆಣಕುತ್ತಿದ್ದಾರೆ. ಅದಕ್ಕೆ ಮಾಧ್ಯದವರು ನನ್ನಿಂದ ಪ್ರತಿಕ್ರಿಯೆ ನಿರೀಕ್ಷೆ ಮಾಡುತ್ತಾರೆ. ಮಾಧ್ಯಮದವರಿಗೂ ಉತ್ತರ ಕೊಡುವ ಅಗತ್ಯವಿಲ್ಲ. ಪ್ರತಿಕ್ರಿಯೆ ಕೊಡುವುದನ್ನೇ ಕಡಿಮೆ ಮಾಡಿದ್ದೇನೆ ಎಂದು ತಿಳಿಸಿದರು.

ಹೊಸದಿಲ್ಲಿಯಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಹಾಗೂ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಪಕ್ಷದ ಸಾಧನೆ ವಿವರಿಸಿದೆ. ಉಳಿದ ರಾಜ್ಯಗಳಿಗೆ ಮಾರ್ಗದರ್ಶನ ನೀಡುವ ರೀತಿಯಲ್ಲಿ ಬೆಳೆಯುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ 140ರಿಂದ 150 ಸ್ಥಾನ ಗೆಲ್ಲುವ ಭರವಸೆ ಕೊಟ್ಟು ಬಂದಿದ್ದೇನೆ ಎಂದು ಹೇಳಿದರು. 

ನಾನು ಕೂಡ ಪುರಸಭೆ ಸದಸ್ಯನಾಗಿ ಶಿಕಾರಿಪುರದಲ್ಲಿ ರಾಜಕೀಯ ಜೀವನ ಆರಂಭಿಸಿದೆ. ರಾಜ್ಯದ ಮುಖ್ಯಮಂತ್ರಿ ಆಗುತ್ತೇನೆ ಎಂದು ಕನಸು ಕೂಡ ಕಂಡಿರಲಿಲ್ಲ. ಇಡೀ ರಾಜ್ಯದಲ್ಲಿ ಹುಚ್ಚನಂತೆ ಗ್ರಾಮ ಗ್ರಾಮಗಳಿಗೂ ಅಲೆದಿದ್ದೇನೆ. ಹಲವಾರು ಹೋರಾಟ ನಡೆಸಿದ್ದೇನೆ. ರೈತರ ಪಕ್ಷವನ್ನಾಗಿ ಮಾಡಲು ಹೋರಾಡಿದ್ದೇನೆ ಎಂದು ನುಡಿದರು.

ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‍ ಕುಮಾರ್ ಕಟೀಲು, ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಸಂಸದರಾದ ವಿ.ಶ್ರೀನಿವಾಸಪ್ರಸಾದ್, ಪ್ರತಾಪ್ ಸಿಂಹ, ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್, ಮಾಜಿ ಸಚಿವ ಸಿ.ಎಚ್.ವಿಜಯಶಂಕರ್, ಶಾಸಕರಾದ ಎಸ್.ಎ.ರಾಮದಾಸ್, ಎಲ್.ನಾಗೇಂದ್ರ, ಹರ್ಷವರ್ಧನ್, ಬಿಜೆಪಿ ರಾಜ್ಯ ಉಪಾಧ್ಯಕ್ಷ ರಾಜೇಂದ್ರ, ನಗರ ಬಿಜೆಪಿ ಅಧ್ಯಕ್ಷ ಶ್ರೀವತ್ಸ, ಗ್ರಾಮಾಂತರ ಬಿಜೆಪಿ ಅಧ್ಯಕ್ಷೆ ಮಂಗಳಾ ಸೋಮಶೇಖರ್, ಕಾರ್ಯದರ್ಶಿ ಪ್ರತಾಪ್ ಜಿ.ದೇವನೂರು, ಕಾಂಪೋಸ್ಟ್ ನಿಗಮದ ಅಧ್ಯಕ್ಷ ಎಸ್.ಮಹದೇವಯ್ಯ, ಖಾದಿ ನಿಗಮದ ಅಧ್ಯಕ್ಷ ಎನ್.ಆರ್.ಕೃಷ್ಣಪ್ಪಗೌಡ, ಮೈಲ್ಯಾಕ್ ಅಧ್ಯಕ್ಷ ಎನ್.ವಿ.ಪಣೀಶ್, ಮೈ.ವಿ.ರವಿಶಂಕರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. 

ಸಿಎಂ ಭಾಷಣಕ್ಕೂ ಮುನ್ನ ಸಭೆಯಿಂದ ಹೊರನಡೆದ ಶ್ರೀನಿವಾಸಪ್ರಸಾದ್
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಭಾಷಣಕ್ಕೂ ಮುನ್ನ ಬಿಜೆಪಿ ಹಿರಿಯ ಮುಖಂಡ ಹಾಗು ಸಂಸದ ವಿ.ಶ್ರೀನಿವಾಸಪ್ರಸಾದ್ ಸಭೆಯಿಂದ ಹೊರನಡೆದರು.

ಸಮಾವೇಶದಲ್ಲಿ ಭಾಗವಹಿಸಿದ್ದ ಸಂಸದ ವಿ.ಶ್ರೀನಿವಾಸಪ್ರಸಾದ್ ಭಾಷಣ ಮಾಡಿ, ನಾನು ಚಾಮರಾಜನಗರಕ್ಕೆ ತೆರಳಬೇಕು. ಅಲ್ಲಿ 3 ಗಂಟೆಗೆ 'ಜನ ಸೇವಕ್' ಕಾರ್ಯಕ್ರಮ ಆಯೋಜಿಸಲಾಗಿದೆ. ಹಾಗಾಗಿ ನಾನು ಬೇಗ ಹೋಗಬೇಕು ಎಂದು ಹೇಳಿದರು.

ಇವರ ನಂತರ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‍ ಕುಮಾರ್ ಕಟೀಲು ಭಾಷಣ ಆರಂಭಿಸಿದರು. ಇವರ ಭಾಷಣ ಮುಗಿಯುವವರೆಗೆ ಕುಳಿತಿದ್ದ ವಿ.ಶ್ರೀನಿವಾಸಪ್ರಸಾದ್ ಅವರು ಯಡಿಯೂರಪ್ಪ ಭಾಷಣ ಆರಂಭ ಮಾಡುತ್ತಿದ್ದಂತೆ ಹೊರಟು ಹೋದರು. 

ದಕ್ಷಿಣ ಭಾರತದಲ್ಲಿ ಬಿಜೆಪಿ ಪಕ್ಷ ಸಂಘಟನೆಯಾಗಲು ಯಡಿಯೂರಪ್ಪನವರೇ ಕಾರಣ. ಅವರು ಬಿಜೆಪಿಯಲ್ಲಿ ಇದ್ದುದರಿಂದಲೇ ಕರ್ನಾಟಕದಲ್ಲಿ 25 ಬಿಜೆಪಿ ಸಂಸದರು ಆಯ್ಕೆಯಾಗಿರುವುದು.
 -ವಿ.ಶ್ರೀನಿವಾಸಪ್ರಸಾದ್, ಚಾಮರಾಜನಗರ ಸಂಸದ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News