ಜಾನುವಾರು ಸಾಗಿಸುತ್ತಿದ್ದಾಗ ದುಷ್ಕರ್ಮಿಗಳಿಂದ ಹಲ್ಲೆ ಪ್ರಕರಣ: ಕೈ, ಕಾಲಿನ ಮೂಳೆ ಮುರಿದು ಶೋಚನೀಯ ಸ್ಥಿತಿಯಲ್ಲಿ ಚಾಲಕ
ದಾವಣಗೆರೆ, ಜ.11: ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ತನಿಕೋಡು ಚೆಕ್ ಪೋಸ್ಟ್ ಬಳಿ ಕ್ಯಾಂಟರ್ ನಲ್ಲಿ ಜಾನುವಾರು ಸಾಗಿಸುತ್ತಿದ್ದಾಗ ದುಷ್ಕ್ರರ್ಮಿಗಳಿಂದ ಮಾರಣಾಂತಿಕವಾಗಿ ಹಲ್ಲೆಗೆ ಒಳಗಾಗಿರುವ ಚಾಲಕ ಆಬಿದ್ ಆಲಿ ಅಕ್ಷರಶಃ ನರಕಯಾತನೆ ಅನುಭವಿಸುತ್ತಿದ್ದಾರೆ. ಅವರ ಎರಡು ಕೈಗಳ ಮೂಳೆ ಹಾಗೂ ಎಡ ಕಾಲಿನ ಮೂಳೆಯು ಮುರಿದಿದ್ದು, ಇದರಿಂದಾಗಿ ಬೇರೆಯವರ ನೆರವಿನೊಂದಿಗೆ ಜೀವನ ನಡೆಸುವ ಪರಿಸ್ಥಿತಿ ಬಂದಿದೆ.
ಈ ಕುರಿತು 'ವಾರ್ತಾಭಾರತಿ'ಯೊಂದಿಗೆ ಆಬಿದ್ ಆಲಿ ಮಾತನಾಡಿ, ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನಿಂದ ಮಂಗಳೂರಿಗೆ ಜಾನುವಾರು ಸಾಗಾಣೆಗೆ ನಮ್ಮ ಕ್ಯಾಂಟರ್ ಬಾಡಿಗೆ ಪಡೆಯಲಾಗಿತ್ತು. ಈ ಸಂಬಂಧ ನಾನು ನಮ್ಮ ಕ್ಯಾಂಟರ್ ನಲ್ಲಿ 14 ಜಾನುವಾರುಗಳನ್ನು ಹಾಕಿಕೊಂಡು ಎಪಿಎಂಸಿ ಹಾಗೂ ವೈದ್ಯರ ಪರವಾನಿಗೆಯೊಂದಿಗೆ ಮಂಗಳೂರಿನ ಕಡೆಗೆ ತೆರಳಿದವು. ಜನವರಿ 9 ರಂದು ಬೆಳಗಿನ ಜಾವ ತನಿಕೋಡು ಚೆಕ್ ಪೋಸ್ಟ್ ಬಳಿ ಅಡ್ಡಗಟ್ಟಿದ ದುಷ್ಕರ್ಮಿಗಳ ತಂಡ ಗಾಡಿಯಲ್ಲಿ ಏನಿದೆ ಎಂದು ಕೇಳಿ ನಮ್ಮ ಮೇಲೆ ದಾಳಿ ನಡೆಸಿದರು. ನಮ್ಮ ಬಳಿಯಿದ್ದ ಹಣವನ್ನು ಕಸಿದುಕೊಂಡು ಪರಾರಿಯಾದರು. ನನಗೂ ಈ ಪ್ರಕರಣಕ್ಕೂ ಸಂಬಂಧವಿಲ್ಲ. ನಾನು ಕೇವಲ ಬಾಡಿಗೆಗೆ ಮಾತ್ರ ತೆರಳಿದ್ದೆ ಎಂದು ತಮ್ಮ ಆಳಲು ತೋಡಿಕೊಂಡರು.
ಮಾರಣಾಂತಿಕ ಹಲ್ಲೆಯಿಂದಾಗಿ ನಡೆದಾಡದ ಪರಿಸ್ಥಿತಿಯಲ್ಲಿದ್ದು ನನ್ನನ್ನು ಶೃಂಗೇರಿ ಠಾಣೆಯ ಪೊಲೀಸರು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿ ನಂತರ ಶಿವಮೊಗ್ಗ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ದಾಖಲಿಸಿದರು ಎಂದು ಅವರು ತಿಳಿಸಿದರು.
ರೈತರ ಎತ್ತುಗಳು ಹಾಗೂ ಎಮ್ಮೆಗಳ ಸಾಗಾಟಕ್ಕೆ ಎಪಿಎಂಸಿ ಪರವಾನಿಗೆ ಮತ್ತು ವೈದ್ಯರ ಪತ್ರ ಪಡೆದಿದ್ದರೂ ನಮ್ಮ ಮೇಲೆ ಹಲ್ಲೆಯಾಗಿದೆ. ನಮ್ಮದು ತಪ್ಪು ಇದ್ದರೆ ಕಾನೂನು ಕ್ರಮ ಕೈಗೊಳ್ಳಲಿ. ಅದರೆ ಠಾಣೆಗೆ ಒಪ್ಪಿಸುವ ಬದಲು ಹೀಗೆ ಮಾರಣಾಂತಿಕ ಹಲ್ಲೆ ನಡೆಸಿರುವುದು ಸರಿಯಲ್ಲ. ಗೂಂಡಾಗಿರಿ ನಡೆಸಿರುವವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಮನವಿ ಮಾಡಿದರು. ಕೈ ಮತ್ತು ಕಾಲುಗಳ ಮೂಳೆ ಮುರಿದಿರುವುದರಿಮದ ಇನ್ನೂ ಹೆಚ್ಚಿನ ಚಿಕಿತ್ಸೆ ಅವಶ್ಯಕತೆಯಿದೆ ಎಂದು ಅವರು ತಿಳಿಸಿದರು.
ಶೃಂಗೇರಿ ತಾಲೂಕು ವ್ಯಾಪ್ತಿಯಲ್ಲಿ ಎರಡು ಕ್ಯಾಂಟರ್ ಗಳಲ್ಲಿ ಜಾನುವಾರುಗಳನ್ನು ಸಾಗಿಸುತ್ತಿದ್ದವರನ್ನು ಹಿಂದೂಪರ ಸಂಘಟನೆಗಳೆನ್ನಲಾದ ಕೆಲವರು ತನಿಕೋಡು ಹಾಗೂ ಕೈಮನೆ ಎಂಬಲ್ಲಿ ಅಡ್ಡಗಟ್ಟಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಮಾಹಿತಿ ಮೇರೆಗೆ ಸ್ಥಳಕ್ಕೆ ಭೇಟಿ ನೀಡಿದಾಗ ಓರ್ವ ಚಾಲಕ ಹಲ್ಲೆಯಿಂದ ಗಾಯಗೊಂಡು ಸ್ಥಳದಲ್ಲೇ ಬಿದ್ದಿದ್ದ. ನಾವು ಆತನನ್ನು ಶಿವಮೊಗ್ಗ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದೇವೆ. ಮತ್ತೋರ್ವನನ್ನು ನಾವು ಸ್ಥಳದಲ್ಲೇ ವಶಕ್ಕೆ ಪಡೆದಿದ್ದು, ಸದ್ಯ ಆತ ಜೈಲಿನಲ್ಲಿದ್ದಾನೆ. ಹಲ್ಲೆ ಮಾಡಿದವರ ವಿರುದ್ಧ ಹಲ್ಲೆಗೊಳಗಾದವರು ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿದ್ದೇವೆ. ಹಲ್ಲೆ ಮಾಡಿದವರು ಯಾರೆಂದು ತಿಳಿದು ಬಂದಿಲ್ಲ. ಕ್ಯಾಂಟರ್ ನಲ್ಲಿ ಜಾನುವಾರುಗಳನ್ನು ಅಕ್ರಮವಾಗಿ ಸಾಗಣೆ ಮಾಡಲಾಗುತ್ತಿತ್ತು. ಜಾನುವಾರು ಸಾಗಣೆ ಸಂಬಂಧ ಪೊಲೀಸರಿಗೆ ಯಾವುದೇ ದಾಖಲೆ ಪತ್ರಗಳು ಸಿಕ್ಕಿಲ್ಲ. ಪ್ರಕರಣ ಸಂಬಂಧ ತನಿಖೆ ಪ್ರಗತಿಯಲ್ಲಿದೆ.
- ಸಿದ್ದರಾಮಯ್ಯ, ಎಸ್ಸೈ, ಶೃಂಗೇರಿ ಪೊಲೀಸ್ ಠಾಣೆ