ಭ್ರಷ್ಟಾಚಾರದಲ್ಲಿ ದಲಿತ ಅಧಿಕಾರಿಗಳೇ ಮೇಲುಗೈ: ನಿವೃತ್ತ ನ್ಯಾ. ನಾಗಮೋಹನ್ ದಾಸ್

Update: 2021-01-11 15:53 GMT

ಬೆಂಗಳೂರು, ಜ.11: ಸಮುದಾಯದ ಏಳಿಗೆಗೆ ದುಡಿಯಬೇಕಾಗಿದ್ದ ಎಸ್ಸಿ-ಎಸ್ಟಿ ಜನಾಂಗದ ಸರಕಾರಿ ಸಿಬ್ಬಂದಿ, ಅಧಿಕಾರಿಗಳೇ ಹೆಚ್ಚಾಗಿ ಭ್ರಷ್ಟಾಚಾರ ಪ್ರಕರಣಗಳಲ್ಲಿ ಸಿಲುಕಿದ್ದಾರೆ ಎಂದು ಹೈಕೋರ್ಟ್ ನ ನಿವೃತ್ತ ನ್ಯಾಯಾಧೀಶ ಎಚ್.ಎನ್.ನಾಗಮೋಹನ್ ದಾಸ್ ಅಸಮಾಧಾನ ವ್ಯಕ್ತಪಡಿಸಿದರು.

ಸೋಮವಾರ ನಗರದ ಗಾಂಧಿಭವನದಲ್ಲಿ ಕರ್ನಾಟಕ ದಲಿತ ಹಕ್ಕುಗಳ ಸಮಿತಿಯೂ ದಲಿತರಿಗೆ ಭೂ ಒಡೆತನ, ಕೊಳವೆ ಬಾವಿ, ಸ್ಮಶಾನ ಭೂಮಿ, ಉದ್ಯೋಗ ಮತ್ತು ಎಸ್ಸಿಎಸ್ಪಿ-ಎಸ್ಟಿಎಸ್ಪಿ ಉಪ ಯೋಜನೆ ಸಮರ್ಪಕ ಜಾರಿಗೆ ಒತ್ತಾಯಿಸಿ ಆಯೋಜಿಸಿದ್ದ ದುಂಡು ಮೇಜಿನ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.

ಸರಕಾರದ ಅಡಿಯಲ್ಲಿ ಕಾರ್ಯನಿರ್ವಹಿಸುವ ಎಲ್ಲ ಅಭಿವೃದ್ಧಿ ನಿಗಮ ಮಂಡಳಿಗಳಲ್ಲೂ ಭ್ರಷ್ಟಾಚಾರ ತಾಂಡವ ಆಡುತ್ತಿದೆ. ಈ ಸಿಬ್ಬಂದಿ, ಅಧಿಕಾರಿಗಳ ಮನೆಯ ಮೇಲಿನ ದಾಳಿ, ಕೋಟ್ಯಂತರ ರೂಪಾಯಿ ಹಣ ಜಪ್ತಿಯಂತಹ ಪ್ರಕರಣಗಳು ದಿನನಿತ್ಯ ಪತ್ರಿಕೆಗಳಲ್ಲಿ ವರದಿಯಾಗುತ್ತಿದ್ದು, ಇದರಲ್ಲಿ ಬಹುಪಾಲು ಎಸ್ಸಿ-ಎಸ್ಟಿ ಸಮುದಾಯದವರೇ ಇದ್ದಾರೆ ಎಂದು ತಿಳಿಸಿದರು.

ರಾಜ್ಯ ಸರಕಾರದ 2020-21ನೆ ಸಾಲಿನ ಬಜೆಟ್‍ನಲ್ಲಿ ಶೇಕಡ 24.5 ರಷ್ಟು ಅನುದಾನ ದಲಿತ ಸಮುದಾಯಕ್ಕೆ ಮೀಸಲಿಡಲಾಗಿತ್ತು. ಅಂದರೆ, 27 ಸಾವಿರದ 500 ಕೋಟಿ ರೂ. ಕೆಲ ದಿನಗಳ ನಂತರ ಇದರಲ್ಲಿ 1 ಸಾವಿರ ರೂ. ತಗ್ಗಿಸಲಾಯಿತು. ಆ ನಂತರ, ಇಲ್ಲಿಯವರೆಗೂ ಖರ್ಚು ಮಾಡಿದ್ದು, 8.5 ಸಾವಿರ ಕೋಟಿ ರೂ.ಮಾತ್ರ. ಇನ್ನುಳಿದ ಹಣವನ್ನು ನಮ್ಮ ಮೆಟ್ರೋ, ರಸ್ತೆ ಸೇರಿದಂತೆ ಇನ್ನಿತರೆ ಕಾಮಗಾರಿಗಳಿಗೆ ಖರ್ಚು ಮಾಡಲಾಗಿದೆ. ಇನ್ನು, ಅಲ್ಪಸ್ವಲ್ಪ ಹಣವೂ ಶೋಷಿತ ಸಮುದಾಯಕ್ಕೆ ದಕ್ಕುತ್ತಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಜಿಲ್ಲೆವೊಂದರಲ್ಲಿ ದಲಿತರ ಕುರಿತು ದೊಡ್ಡ ಸಮಾವೇಶ ನಡೆಯುತ್ತಿದೆ ತಾವು ಬರಬೇಕೆಂದು ಈ ಹಿಂದೆ ನನ್ನನ್ನು ಕೆಲವರು ಆಹ್ವಾನಿಸಿದರು. ಆದರೆ, ಆ ಆಹ್ವಾನ ಪತ್ರಿಕೆಯಲ್ಲಿ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಾಗಿರುವ ಅಧಿಕಾರಿಗೆ ಸನ್ಮಾನ ಏರ್ಪಡಿಸಲಾಗಿತ್ತು. ಇದನ್ನು ನೋಡಿದ ನಾನು ಈತನನ್ನು ಏಕೆ ಕರೆಯುತ್ತೀರಿ ಎಂದು ಪ್ರಶ್ನಿಸಿದಾಗ, ಅವರೇ ಸಮಾವೇಶಕ್ಕೆ ಹಣ ನೀಡುತ್ತಿರುವುದಾಗಿ ಉತ್ತರಿಸಿದರು ಎಂದು ನಾಗಮೋಹನ್ ದಾಸ್ ನುಡಿದರು.

ಆರ್‍ಟಿಐ: ಮಾಹಿತಿ ಹಕ್ಕು ಕಾಯ್ದೆ(ಆರ್‍ಟಿಐ) ಕುರಿತು ತಳಮಟ್ಟದವರೆಗೂ ಜನರಲ್ಲಿ ಜಾಗೃತಿ ಮೂಡಿಸಬೇಕು. ಆಗ ಮಾತ್ರ ನಮ್ಮ ಹಕ್ಕುಗಳು, ಯೋಜನೆಗಳು, ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗುತ್ತದೆ. ಮಾಹಿತಿಯೇ ಗೊತ್ತಿಲ್ಲದ ವೇಳೆ ನಾವು ಏನನ್ನೂ ಪ್ರಶ್ನಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.

ಸಭೆಯಲ್ಲಿ ರಾಷ್ಟ್ರೀಯ ಕಾನೂನು ಶಾಲೆಯ ತಳ ಸಮುದಾಯದ ಅಧ್ಯಯನ ಕೇಂದ್ರದ ಸಹಾಯಕ ಪ್ರಾಧ್ಯಾಪಕ ಆರ್.ವಿ.ಚಂದ್ರಶೇಖರ್, ಡಿಎಚ್ ಎಂಎಂ ಕೇಂದ್ರ ಸಮಿತಿ ಸದಸ್ಯ ನಾಗರಾಜ್ ನಂಜುಂಡಯ್ಯ, ಕರ್ನಾಟಕ ದೇವದಾಸಿ ಮಹಿಳೆಯರ ವಿಮೋಚನಾ ಸಂಘದ ಅಧ್ಯಕ್ಷೆ ಮಾಳಮ್ಮ, ಎಸ್ಸಿ, ಎಸ್ಟಿ ನೌಕರರ ಸಮನ್ವಯ ಸಮಿತಿಯ ಡಿ.ಶಿವಶಂಕರ್, ಎಚ್‍ಎಸ್ ರಾಜ್ಯ ಸಂಚಾಲಕ ಗೋಪಾಲಕೃಷ್ಣ ಹರಹಳ್ಳಿ, ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಅಧ್ಯಕ್ಷ ನಿತ್ಯಾನಂದಸ್ವಾಮಿ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News