ಬಸ್ ಚಾಲಕ, ನಿರ್ವಾಹಕರಿಂದ ವಿದ್ಯಾರ್ಥಿಗಳ ನಿರ್ಲಕ್ಷ್ಯ: ಸಚಿವ ಸುರೇಶ್ ಕುಮಾರ್

Update: 2021-01-11 15:55 GMT

ಬೆಂಗಳೂರು, ಜ.11: ವಿದ್ಯಾರ್ಥಿಗಳು ಶಾಲಾ ಕಾಲೇಜಿಗೆ ಹೊರಟು ನಿಂತಾಗ ರಾಜ್ಯದ ವಿವಿಧೆಡೆಯ ಗ್ರಾಮಾಂತರ ಪ್ರದೇಶಗಳ ಅನೇಕ ಬಸ್ ನಿಲ್ದಾಣಗಳಲ್ಲಿ ಬಸ್‍ಗಳನ್ನು ನಿಲ್ಲಿಸದೆ ರಾಜ್ಯ ಸಾರಿಗೆ ಸಂಸ್ಥೆಯ ಬಸ್ಸುಗಳ ಕೆಲವು ಚಾಲಕರು/ನಿರ್ವಾಹಕರು ವಿದ್ಯಾರ್ಥಿಗಳ ಕುರಿತು ನಿರ್ಲಕ್ಷ್ಯ ತೋರುತ್ತಿರುವುದು ಕಂಡುಬರುತ್ತಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಬೇಸರ ವ್ಯಕ್ತಪಡಿಸಿದ್ದಾರೆ.

ಈ ಸಂಬಂಧ ಸಾರಿಗೆ ಸಚಿವರೂ ಆದ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿಗೆ ಪತ್ರ ಬರೆದಿರುವ ಅವರು, ನಾನು ಕಳೆದ ಶನಿವಾರ ತುಮಕೂರು ಜಿಲ್ಲೆಯ ಪ್ರವಾಸದಲ್ಲಿರುವಾಗ ಪಿನಗಾನಹಳ್ಳಿ ಮಾರ್ಗದ ಬಸ್‍ವೊಂದು ನಿಲುಗಡೆ ಕಡ್ಡಾಯವಾಗಿದ್ದರೂ ಬಸ್ ನಿಲ್ಲದಿದ್ದಾಗ ವಿದ್ಯಾರ್ಥಿಗಳು ತೊಂದರೆ ಅನುಭವಿಸಿದ್ದು ನನ್ನ ಗಮನಕ್ಕೆ ಬಂತು. ಆ ಬಸ್ ಚಾಲಕ/ನಿರ್ವಾಹಕರಿಗೆ ಬಸ್ ನಿಲ್ಲಿಸದಿದ್ದರೆ ಮಕ್ಕಳಿಗೆ ಆಗುವ ತೊಂದರೆ ಕುರಿತು ಮನದಟ್ಟು ಮಾಡಿದೆ ಎಂದು ತಿಳಿಸಿದ್ದಾರೆ.

ಪಾಸು ಹೊಂದಿದ ವಿದ್ಯಾರ್ಥಿಗಳನ್ನು ಸರಕಾರಿ ಬಸ್‍ಗಳ ಚಾಲಕ, ನಿರ್ವಾಹಕರು ನಿರ್ಲಕ್ಷ್ಯದಿಂದ ಕಾಣುವುದು ಪದೇ ಪದೇ ನಾವು ಕೇಳುವ ಸಾರ್ವಜನಿಕ ದೂರಾಗಿದೆ. ರಾಜ್ಯ ಸರಕಾರವು, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ತೆಗೆದುಕೊಳ್ಳುವ ನಿರ್ಧಾರಗಳು ಅನುಷ್ಠಾನ ಮಾಡಬೇಕಾದ ಜವಾಬ್ದಾರಿ ಹೊತ್ತಿರುವವರ ನಡವಳಿಕೆಯಿಂದ ಮೂಲೆಗುಂಪಾಗಿ ಹೋಗುತ್ತಿವೆ. ಇದು ಸರಕಾರಕ್ಕೆ ಕೆಟ್ಟ ಹೆಸರನ್ನು ತರುವುದಲ್ಲದೆ, ಇಂತಹ ಸಂಕಷ್ಟದ ಸಂದರ್ಭದಲ್ಲಿ ದೇಶದ ಭವಿಷ್ಯವನ್ನು ರೂಪಿಸುವ ನಮ್ಮ ವಿದ್ಯಾರ್ಥಿಗಳ ಆತ್ಮವಿಶ್ವಾಸಕ್ಕೆ ಧಕ್ಕೆ ತರುವ ವಿಷಯವಾಗಿದೆ ಎಂದು ಸುರೇಶ್ ಕುಮಾರ್ ಹೇಳಿದ್ದಾರೆ.

ನಿರೀಕ್ಷಿತ ದಾಖಲೆಯನ್ನು ತೋರಿಸುವ ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ಯಾವುದೆ ತೊಂದರೆಯಾಗದ ರೀತಿಯಲ್ಲಿ ಬಸ್ ಪ್ರಯಾಣಕ್ಕೆ ಅನುವು ಮಾಡಿಕೊಡುವ ಸ್ವನಿಯಂತ್ರಣಾ ವ್ಯವಸ್ಥೆಯನ್ನು ಜಾರಿಯಲ್ಲಿಡಬೇಕು ಹಾಗೂ ಚಾಲಕ, ನಿರ್ವಾಹಕರು, ಬಸ್‍ನಲ್ಲಿ ಪ್ರಯಾಣಿಸಿರುವ ವಿದ್ಯಾರ್ಥಿಗಳ ಬಗ್ಗೆ ಸಹಾನುಭೂತಿಯಿಂದ ವರ್ತಿಸಲು ಸೂಕ್ತ ನಿರ್ದೇಶನಗಳನ್ನು ಜಾರಿ ಮಾಡಬೇಕು ಎಂದು ಅವರು ಕೋರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News