ಜ.26ರಂದು ಗಣರಾಜ್ಯೋತ್ಸವ ಆಚರಿಸದಿರಲು ರೈತ ಸಂಘ ನಿರ್ಧಾರ: ಬಡಗಲಪುರ ನಾಗೇಂದ್ರ

Update: 2021-01-11 17:22 GMT

ಮೈಸೂರು,ಜ.11: ಕೇಂದ್ರದ ಕೃಷಿ ತಿದ್ದುಪಡಿ ಕಾಯ್ದೆ ವಿರೋಧಿಸಿ ರೈತರ ಪ್ರತಿಭಟನೆ ಮುಂದುವರಿದಿದ್ದು, ಈ ನಡುವೆ ದಿಲ್ಲಿಯಲ್ಲಿ ರೈತರ ಹೋರಾಟಕ್ಕೆ ರಾಜ್ಯದಲ್ಲೂ ರೈತ ಸಂಘಟನೆಗಳು ಬೆಂಬಲ ನೀಡಿವೆ. ಹಾಗಾಗಿ ಜನವರಿ 26ರಂದು ಗಣರಾಜ್ಯೋತ್ಸವ ಆಚರಿಸದಿರಲು ರೈತ ಸಂಘ ನಿರ್ಧಾರ ಮಾಡಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ತಿಳಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ಸೋಮವಾರ ಪತ್ರಿಕಾಗೋಷ್ಠಿ ನಡೆಸಿ ಮಾನಾಡಿದ ಅವರು, ಅಂದು ಬೃಹತ್ ಕಿಸಾನ್ ಮಜ್ದೂರ್ ಟ್ರ್ಯಾಕ್ಟರ್ ಪರೇಡ್ ನಡೆಸಲು ರಾಜ್ಯ ರೈತ ಸಂಘ ಮುಂದಾಗಿದೆ. ಗಣರಾಜ್ಯದ ಉಳಿವಿಗಾಗಿ ಲಕ್ಷಾಂತರ ರೈತರು ಮತ್ತು ಕಾರ್ಮಿಕರಿಂದ ದಿಲ್ಲಿಯಲ್ಲಿ ಬೃಹತ್ ಹೋರಾಟ ನಡೆಯಲಿದೆ. ನಮ್ಮ ರಾಜ್ಯದ ಪರವಾಗಿ 25 ಸಾವಿರಕ್ಕೂ ಅಧಿಕ ಮಂದಿ ದಿಲ್ಲಿಗೆ ತೆರಳಲಿದ್ದಾರೆ. ಅದರ ಜೊತೆಗೆ ಬೆಂಗಳೂರಿನಲ್ಲೂ ಕೂಡ ಜನವರಿ 26 ರಂದು ಟ್ರ್ಯಾಕ್ಟರ್ ರ್‍ಯಾಲಿ ನಡೆಯಲಿದೆ ಎಂದು ಮಾಹಿತಿ ನೀಡಿದರು. 

ಹಾಗೆಯೇ ಈ ಹೋರಾಟಕ್ಕೆ ಇಡೀ ಭಾರತದಲ್ಲಿ 7 ಮಂದಿ ಸಂಯೋಜಕರನ್ನು ನೇಮಿಸಲಾಗಿದೆ. ಕರ್ನಾಟಕ ರಾಜ್ಯದಲ್ಲಿ ನನ್ನನ್ನೂ ಕೂಡ ಸಂಯೋಜಕನನ್ನಾಗಿ ನೇಮಿಸಲಾಗಿದೆ. ಇನ್ನು ಐಕ್ಯ ಹೋರಾಟ ಸಮಿತಿಯ ಬದಲಾಗಿ 50 ಸಂಘಟನೆಗಳು ಸೇರಿ ಸಂಯುಕ್ತ ಹೋರಾಟ ಕರ್ನಾಟಕ ಸಂಘ ಎಂದು ಮಾಡಿಕೊಂಡಿದ್ದೇವೆ. ಇನ್ನು ಮುಂದೆ ಸಂಯುಕ್ತ ಹೋರಾಟ ಕರ್ನಾಟಕ ಸಂಘದ ಜೊತೆಯಲ್ಲಿ ನಮ್ಮ ಹೋರಾಟ ನಡೆಯಲಿದೆ ಎಂದು ಬಡಗಲಪುರ ನಾಗೇಂದ್ರ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News