ಫೆ.8ರಿಂದ ದೇಶಾದ್ಯಂತ 500 ಕೇಂದ್ರಗಳಲ್ಲಿ 'ಶಾಹೀನ್ ಸ್ಕಾಲರ್ ಗ್ರೂಪ್' ಪರೀಕ್ಷೆ: ಡಾ.ಅಬ್ದುಲ್ ಖದೀರ್

Update: 2021-01-11 17:32 GMT

ಬೆಂಗಳೂರು, ಜ.11: 2021ನೆ ಸಾಲಿನ ಶಾಹೀನ್ ಸ್ಕಾಲರ್ ಗ್ರೂಪ್(ಎಸ್‍ಎಸ್‍ಜಿ) ಪರೀಕ್ಷೆಗಳು ದೇಶದ 500 ಕೇಂದ್ರಗಳಲ್ಲಿ ಫೆಬ್ರವರಿ 8 ರಿಂದ 11 ವರೆಗೆ ನಡೆಯಲಿವೆ. ಈ ಪರೀಕ್ಷೆ ಆನ್‍ಲೈನ್ ಹಾಗೂ ಆಫ್‍ಲೈನ್ ನಡೆಯಲಿದೆ ಎಂದು ಶಾಹೀನ್ ಶೈಕ್ಷಣಿಕ ಸಂಸ್ಥೆಗಳ ಸಮೂಹದ ಮುಖ್ಯಸ್ಥ ಡಾ.ಅಬ್ದುಲ್ ಖದೀರ್ ತಿಳಿಸಿದರು.

ಸೋಮವಾರ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ದಾರುಸ್ಸಲಾಮ್ ಕಟ್ಟಡದ ಬಿಫ್ಟ್ ಸಭಾಂಗಣದಲ್ಲಿ ಎಸ್‍ಎಸ್‍ಜಿ 2021 ಪರೀಕ್ಷೆಗಳಿಗೆ ಸಂಬಂಧಿಸಿದ ವಿಚಾರಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಆನ್‍ಲೈನ್ ಪರೀಕ್ಷೆಗಳು shaheengroup.org ವೆಬ್‍ಸೈಟ್‍ನಲ್ಲಿ ನಡೆಯಲಿದ್ದು, ಅಗತ್ಯ ವಿವರಗಳು ಇದರಲ್ಲಿ ಲಭ್ಯವಾಗಲಿವೆ ಎಂದರು.

ಈ ಮೂಲಕ 10ನೆ ತರಗತಿಯನ್ನು ಓದುತ್ತಿರುವ ಮಕ್ಕಳನ್ನು ಆಯ್ಕೆ ಮಾಡಿ 11 ರಿಂದ 12 ತರಗತಿಯ ವರೆಗೆ ಸಾಲ್ಕರ್‍ಶಿಪ್ ನೀಡಿ ಇಂಟಿಗ್ರೇಟೆಡ್ ಪರೀಕ್ಷೆ ಮೂಲಕ ನೀಟ್ ಹಾಗೂ ಜೆಇಇಗಾಗಿ ತರಬೇತಿ ನೀಡಲಾಗುವುದು. ಎಂದಿಗೂ ಶಾಲೆಗೆ ಹೋಗದಂತಹ ಹಾಫಿಝ್ (ಕುರ್‍ಆನ್ ಕಂಠಪಾಠ ಮಾಡಿರುವವರು) ಗಳನ್ನು ಗುರುತಿಸಿ ಅವರಿಗೆ ಮೂರು ತಿಂಗಳ ಫೌಂಡೇಶನ್ ಕೋರ್ಸ್ ಜೊತೆಗೆ 9 ಅಥವಾ 10ನೆ ತರಗತಿಯ ಪರೀಕ್ಷೆ ತೆಗೆದುಕೊಳ್ಳುವಂತೆ ತರಬೇತಿ ನೀಡಲಾಗುವುದು ಎಂದು ಅವರು ಹೇಳಿದರು.

10ನೆ ತರಗತಿಯನ್ನು ಪೂರ್ಣಗೊಳಿಸಿರುವ ಮಕ್ಕಳಿಗೆ ನಾಲ್ಕು ತಿಂಗಳ ವಿಶೇಷ ಕೋರ್ಸ್ ಮೂಲಕ 11ನೆ ತರಗತಿಯಲ್ಲಿ ಕಲೆ, ವಾಣಿಜ್ಯ, ವಿಜ್ಞಾನ ಕೋರ್ಸುಗಳಲ್ಲಿ ಅಧ್ಯಯನ ಮಾಡುವಂತೆ ತರಬೇತಿ ನೀಡಲಾಗುವುದು. ಜೊತೆಗೆ ಉಲಮಾಗಳಿಗಾಗಿ ಎಐಸಿಯು(ಅಕಾಡಮಿಕ್ ಇಂಟೆನ್ಸಿವ್ ಕೇರ್ ಯೂನಿಟ್) ವಿಭಾಗದಡಿಯಲ್ಲಿ ಮೂರು ತಿಂಗಳು ತರಬೇತಿ ನೀಡಿ ಅವರನ್ನು 10ನೆ ತರಗತಿ ತೆಗೆದುಕೊಳ್ಳುವಂತೆ ತರಬೇತಿ ನೀಡಲಾಗುವುದು ಎಂದು ಅಬ್ದುಲ್ ಖದೀರ್ ತಿಳಿಸಿದರು.

10ನೆ ತರಗತಿ ಅಧ್ಯಯನ ಮಾಡಿರುವವರಿಗೆ 4 ತಿಂಗಳ ತರಬೇತಿ ನೀಡಿ 12ನೆ ತರಗತಿಗೆ, 12ನೆ ತರಗತಿ ಓದಿರುವವರಿಗೆ 4 ತಿಂಗಳ ತರಬೇತಿ ನೀಡಿ ಸ್ನಾತಕೋತ್ತರ ಪದವಿಗಾಗಿ ತರಬೇತಿ ನೀಡಲಾಗುವುದು. ಶಾಲೆಯ ಮುಖವನ್ನೆ ನೋಡದ, ಡ್ರಾಪ್‍ಔಟ್ ಆಗಿರುವ, ನಿರಂತರವಾಗಿ ಅನುತ್ತೀರ್ಣಗೊಳ್ಳುತ್ತಿರುವ ವಿದ್ಯಾರ್ಥಿಗಳಿಗೆ ಮೂರು ತಿಂಗಳ ವಿಶೇಷ ಕಾರ್ಯಕ್ರಮ ನಡೆಸಿ, ಅವರು ಪುನಃ ಶಾಲೆಗಳಿಗೆ ಹೋಗುವಂತೆ ಮಾಡಲಾಗುವುದು ಎಂದು ಅವರು ಹೇಳಿದರು.

ಉಲಮಾಗಳು ಹಾಗೂ ಹಾಫಿಝ್‍ಗಳಿಗೆ ಶುಲ್ಕವನ್ನು ಅತ್ಯಂತ ಕನಿಷ್ಠ ಪ್ರಮಾಣದಲ್ಲಿ ಇಡಲಾಗಿದೆ. ಸಾಮಾನ್ಯವಾಗಿ ನಾವು ಶೇ.50ರಷ್ಟು ಶುಲ್ಕವನ್ನು ಅವರಿಂದ ಪಡೆಯುತ್ತೇವೆ. ಒಂದು ವೇಳೆ ಅವರು ಝಕಾತ್ ಪಡೆಯಲು ಅರ್ಹರಾಗಿದ್ದರೆ ಅಂತಹವರಿಗಾಗಿ ಶೇ.100ರಷ್ಟು ಶುಲ್ಕ ವಿನಾಯಿತಿ ಇರುತ್ತದೆ. ಜೊತೆಗೆ, ಅವರಿಗೆ ಊಟ, ವಸತಿ ಸೌಲಭ್ಯವನ್ನು ಉಚಿತವಾಗಿ ನೀಡಲಾಗುವುದು ಎಂದು ಅಬ್ದುಲ್ ಖದೀರ್ ತಿಳಿಸಿದರು.

ಶಾಲೆಯ ಮುಖವನ್ನೆ ನೋಡದ ಹಾಫಿಝ್‍ಗಳು ಮೂರು ವರ್ಷ ನಮ್ಮಿಂದ ತರಬೇತಿ ಪಡೆದು ಸರಕಾರಿ ಕೋಟಾದಡಿಯಲ್ಲಿ ವೈದ್ಯಕೀಯ ಸೀಟುಗಳನ್ನು ಪಡೆದು ಅಧ್ಯಯನ ಮಾಡುತ್ತಿದ್ದಾರೆ. ವೈದ್ಯಕೀಯ, ದಂತ ವೈದ್ಯಕೀಯ ಕೋರ್ಸುಗಳನ್ನು ಪಡೆಯಲು, ಐಎಎಸ್, ಐಪಿಎಸ್ ಮಾಡಲು ಅರ್ಹತೆ ಇರುವವರನ್ನು ಪ್ಲಂಬರ್, ಟೇಲರ್ ಗಳನ್ನಾಗಿ ಮಾಡಲು ಹೊರಡುತ್ತಿರುವುದು ದುಃಖಕರ ಸಂಗತಿ ಎಂದು ಅವರು ತಿಳಿಸಿದರು.

ದೇಶದಲ್ಲಿ ಹಿಫ್ಝುಲ್ ಕುರ್‍ಆನ್ ಪ್ಲಸ್ ಹೆಸರಿನಲ್ಲಿ 10 ಕೇಂದ್ರಗಳು ನಡೆಯುತ್ತಿವೆ. ಈ ವರ್ಷ ಎಸ್‍ಎಸ್‍ಜಿ ಪರೀಕ್ಷೆಯಿಂದ ಇಡೀ ದೇಶದಲ್ಲಿ ಸುಮಾರು 2000 ಮಕ್ಕಳಿಗೆ ಈ ಅನುಕೂಲವಾಗಬಹುದು. ಶಿಕ್ಷಣ ಸಂಸ್ಥೆಗಳ ಮೂಲಕವೇ ಸಮಾಜದಲ್ಲಿ ಕ್ರಾಂತಿಯಾಗಬೇಕು ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಕರ್ನಾಟಕ ಮುಸ್ಲಿಮ್ ಮುತ್ತಹಿದ ಮಹಾಝ್ ಸಂಚಾಲಕ ಮಸೂದ್ ಅಬ್ದುಲ್ ಖಾದರ್, ಶಿಕ್ಷಣ ಕ್ಷೇತ್ರದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಯಾಗಬೇಕು. ಧಾರ್ಮಿಕ ಶಿಕ್ಷಣದ ಜೊತೆಗೆ ಲೌಕಿಕ ಶಿಕ್ಷಣದ ಕಡೆಗೂ ಗಮನ ಹರಿಸಬೇಕಾದ ಅಗತ್ಯವಿದೆ. ಶಿಕ್ಷಣ ಕಲಿಕೆಯ ಪ್ರಕ್ರಿಯೆ ಆಗಬೇಕೇ ಹೊರತು, ಕೇವಲ ಉದ್ಯೋಗಕ್ಕಾಗಿ ಸೀಮಿತಗೊಳಿಸಬಾರದು ಎಂದು ಸಲಹೆ ನೀಡಿದರು.

ವಿಚಾರಗೋಷ್ಠಿಯಲ್ಲಿ ಫಾಲ್ಕರ್ ಶಾಹೀನ್ ಗ್ರೂಪ್‍ನ ವ್ಯವಸ್ಥಾಪಕ ನಿರ್ದೇಶಕ ಡಾ.ಅಬ್ದುಲ್ ಸುಬಾನ್, ಶಾಹೀನ್ ಕಿಡ್ಸ್‍ನ ನಿರ್ದೇಶಕ ಸೈಯ್ಯದ್ ತನ್ವೀರ್ ಅಹ್ಮದ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News