ರೈತ ಹೋರಾಟ: ಮುಂದೇನು?

Update: 2021-01-12 06:48 GMT

ದೇಶದ ರಾಜಧಾನಿ ದಿಲ್ಲಿಯಲ್ಲಿ ಕೊರೆಯುವ ಚಳಿಯಲ್ಲಿ ಕೇಂದ್ರ ಸರಕಾರದ ಮೂರು ಕೃಷಿ ಕಾಯ್ದೆಗಳ ವಿರುದ್ಧ ರೈತರು ನಡೆಸಿರುವ ಚಾರಿತ್ರಿಕ ಹೋರಾಟ ನಿರ್ಣಾಯಕ ಹಂತವನ್ನು ಪ್ರವೇಶಿಸಿದೆ. 40ಕ್ಕೂ ಹೆಚ್ಚು ರೈತರು ಚಳವಳಿಯ ತಾಣದಲ್ಲೇ ಕೊನೆಯುಸಿರೆಳೆದಿದ್ದಾರೆ. ಈ ನಡುವೆ ಸುಪ್ರೀಂ ಕೋರ್ಟ್ ಸೋಮವಾರ ಈ ಕುರಿತು ಸಲ್ಲಿಸಲಾದ ಅರ್ಜಿಗಳನ್ನು ವಿಚಾರಣೆಗೆ ಕೈಗೆತ್ತಿಕೊಂಡು ಸರಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ‘‘ರೈತರು ವಿರೋಧಿಸುತ್ತಿರುವ ಕಾಯ್ದೆಗಳನ್ನು ತಡೆ ಹಿಡಿಯುತ್ತಿರೋ? ಇಲ್ಲ ನಾವೇ ತಡೆ ಹಿಡಿಯಬೇಕೋ?’’ ಎಂದು ಕೇಂದ್ರ ಸರಕಾರವನ್ನು ಮುಖ್ಯ ನ್ಯಾಯಮೂರ್ತಿ ಎಸ್.ಎ.ಬ್ಡೋೆ ಅವರ ನೇತೃತ್ವದ ಮೂವರು ಸದಸ್ಯರ ಪೀಠ ಪ್ರಶ್ನಿಸಿದೆ.ಇದೇ ಸಂದರ್ಭದಲ್ಲಿ ಸರಕಾರ ‘‘ಕೃಷಿ ಕಾಯ್ದೆಗಳನ್ನು ತಡೆ ಹಿಡಿದರೆ ನೀವು ಪ್ರತಿಭಟನೆಯ ಜಾಗವನ್ನು ಬದಲಿಸುತ್ತೀರಾ?’’ ಎಂದು ರೈತರನ್ನು ಕೇಳಿದೆ. ಸರಕಾರದ ಪರವಾಗಿ ವಾದಿಸಿದ ವೇಣುಗೋಪಾಲ್, ‘‘ಕೇವಲ ಪಂಜಾಬ್ ಮತ್ತು ಹರ್ಯಾಣ ರೈತರು ಮಾತ್ರ ಹೋರಾಟದಲ್ಲಿ ಇದ್ದಾರೆ’’ ಎಂದು ಹೇಳಿದ್ದಾರೆ.

ಸುಪ್ರೀಂ ಕೋರ್ಟ್ ಪೀಠ ಸರಕಾರವನ್ನು ತರಾಟೆಗೆ ತೆಗೆದುಕೊಂಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ಹೋರಾಟ ನಿರತ ರೈತ ಚಳವಳಿಯ ನಾಯಕರು ತಾವು ಹೋರಾಟ ಮಾಡುತ್ತಿರುವ ದಿಲ್ಲಿಯ ಜಾಗದಿಂದ ತಮ್ಮನ್ನು ಬೇರೆಡೆ ಸಾಗಿಸುವ ಯತ್ನ ನಡೆದಿದೆ ಎಂಬ ಭಾವನೆ ಉಂಟಾಗಿದೆ. ನಮ್ಮ ಬೇಡಿಕೆ ಕರಾಳ ಕಾನೂನುಗಳನ್ನು ತಡೆ ಹಿಡಿಯುವುದಲ್ಲ ಸಂಪೂರ್ಣವಾಗಿ ರದ್ದು ಪಡಿಸುವುದಾಗಿದೆ ಎಂದು ಹೇಳಿದ್ದಾರೆ.

ಈ ನಡುವೆ ರೈತ ಹೋರಾಟ ಉಳಿದ ಹೋರಾಟಗಳಂತೆ ಕೆಲ ದಿನ ಸಾಂಕೇತಿಕವಾಗಿ ನಡೆದು ಸುಸ್ತಾದ ರೈತರು ಊರಿಗೆ ವಾಪಸು ಹೋಗುತ್ತಾರೆ ಎಂಬ ಸರಕಾರದ ಲೆಕ್ಕಾಚಾರ ಉಲ್ಟಾ ಪಲ್ಟಾ ಆಗಿದೆ. ದಿನದಿಂದ ದಿನಕ್ಕೆ ರೈತರ ಹೋರಾಟ ತೀವ್ರ ಸ್ವರೂಪ ಪಡೆಯುತ್ತಿದೆ.ಅತ್ಯಂತ ಯೋಜನಾಬದ್ಧವಾಗಿ ಇದು ನಡೆದಿದೆ. ಜನವರಿ 26ನೇ ತಾರೀಕು ದಿಲ್ಲಿಯ ಕೆಂಪು ಕೋಟೆ ಬಳಿ ಸಹಸ್ರಾರು ಟ್ರ್ಯಾಕ್ಟರ್‌ಗಳೊಂದಿಗೆ ಬೃಹತ್ ಮೆರವಣಿಗೆ ನಡೆಸಲು ಹೋರಾಟ ನಿರತ ರೈತರು ಸಿದ್ಧತೆ ನಡೆಸಿದ್ದಾರೆ. ಈಗಾಗಲೇ ಅದರ ಪೂರ್ವಾಭ್ಯಾಸವನ್ನೂ ಮಾಡಿ ತೋರಿಸಿದ್ದಾರೆ. ಇನ್ನೊಂದೆಡೆ ರವಿವಾರ ಹರ್ಯಾಣದಲ್ಲಿ ಕೃಷಿ ಕಾಯ್ದೆಗಳ ಪರವಾಗಿ ಅಲ್ಲಿನ ಬಿಜೆಪಿ ಸರಕಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಪ್ರತಿಭಟನಾನಿರತ ರೈತರು ನುಗ್ಗಿ ಕೋಲಾಹಲ ಉಂಟು ಮಾಡಿದ್ದಾರೆ. ಈ ರೈತರನ್ನು ಚದುರಿಸಲು ಸರಕಾರ ಜಲ ಫಿರಂಗಿಯ ಮೊರೆ ಹೋಗಿದೆ. ಪರಿಸ್ಥಿತಿ ಪ್ರಕ್ಷುಬ್ಧವಾಗುತ್ತಿದೆ.

ಇಂತಹ ಸೂಕ್ಷ್ಮ ವಿಷಯದಲ್ಲಿ ಕೇಂದ್ರ ಸರಕಾರ ಹಠಮಾರಿ ಧೋರಣೆಯನ್ನು ಕೈ ಬಿಡಬೇಕು. ಇದನ್ನು ಪ್ರತಿಷ್ಠೆಯನ್ನಾಗಿ ಮಾಡುವುದು ಸರಕಾರಕ್ಕೆ ಶೋಭೆ ತರುವುದಿಲ್ಲ. ರೈತರನ್ನು ನಮ್ಮ ದೇಶ ಅನ್ನದಾತರೆಂದು ಗೌರವಿಸುತ್ತಾ ಬಂದಿದೆ. ರೈತರು ಸಾಮಾನ್ಯವಾಗಿ ಸಣ್ಣಪುಟ್ಟ ವಿಷಯಗಳಲ್ಲಿ ಹೋರಾಟಕ್ಕೆ ಇಳಿಯುವುದಿಲ್ಲ. ಅದಕ್ಕೆ ಅವರಿಗೆ ಪುರುಸೊತ್ತೂ ಇರುವುದಿಲ್ಲ. ಈಗ ಅವರು ದಿಲ್ಲಿಗೆ ಬಂದು ಬೀಡು ಬಿಟ್ಟಿರುವುದು ತಮ್ಮ ಬದುಕಿನ ಆಸರೆಯಾದ ಕೃಷಿ ಕ್ಷೇತ್ರವೇ ಕೈ ತಪ್ಪಿಕಾರ್ಪೊರೇಟ್ ಕಂಪೆನಿಗಳ ಪಾಲಾದರೆ ಮುಂದೇನು ಎಂಬ ಆತಂಕದಿಂದ. ಈ ಆತಂಕ ನಿವಾರಣೆಯಾಗಬೇಕಾದರೆ ಸರಕಾರ ರೈತರು ವಿರೋಧಿಸುತ್ತಿರುವ ಮೂರು ಕಾಯ್ದೆಗಳನ್ನು ವಾಪಸು ಪಡೆಯಬೇಕು. ಕಾರ್ಪೊರೇಟ್ ಕಂಪೆನಿಗಳಿಗೆ ರಿಯಾಯಿತಿ ಮೇಲೆ ರಿಯಾಯಿತಿ ನೀಡುವ ಸರಕಾರ ದೇಶಕ್ಕೆ ಅನ್ನ ಹಾಕುವ ಮಣ್ಣಿನ ಮಕ್ಕಳ ವಿಷಯದಲ್ಲಿ ತನ್ನ ನಿಲುವನ್ನು ಸಡಿಲಿಸಬೇಕು. ಯಾವುದೇ ಕಾರಣಕ್ಕೂ ರೈತರನ್ನು ಶತ್ರುಗಳಂತೆ ಕಾಣಬಾರದು. ಸುಪ್ರೀಂ ಕೋರ್ಟ್‌ನ ಇಂಗಿತವೂ ಅದೇ ಆಗಿದೆ.

ಗಣರಾಜ್ಯೋತ್ಸವಕ್ಕೆ ಇನ್ನು ಎರಡು ವಾರ ಬಾಕಿ ಉಳಿದಿದೆ. ಆ ದಿನ ಇಡೀ ದೇಶ ಒಂದಾಗಿ ಜಗತ್ತಿನ ಎದುರು ಒಗ್ಗಟ್ಟನ್ನು ಪ್ರದರ್ಶಿಸಬೇಕಾದ ದಿನ. ಆ ದಿನ ರೈತರು ಸಹಸ್ರಾರು ಸಂಖ್ಯೆಯಲ್ಲಿ ಟ್ರ್ಯಾಕ್ಟರ್‌ಗಳೊಂದಿಗೆ ರಾಜಧಾನಿಗೆ ಲಗ್ಗೆ ಹಾಕಿದರೆ ಜಗತ್ತಿನ ಎದುರು ಭಾರತ ಅಪಹಾಸ್ಯಕ್ಕೆ ಈಡಾಗಬೇಕಾಗುತ್ತದೆ. ಸರಕಾರ ರೈತರ ಬಗ್ಗೆ ನಕಾರಾತ್ಮಕ ಧೋರಣೆಯನ್ನು ಕೈ ಬಿಡಬೇಕು. ಚಳವಳಿ ನಿರತ ರೈತರನ್ನು ಶತ್ರುಗಳಂತೆ ಕಾಣಬಾರದು.ಈ ರೈತರನ್ನು ಖಾಲಿಸ್ತಾನಿ, ಮಾವೋವಾದಿ, ಉಗ್ರಗಾಮಿಗಳು ಎಂದು ಕರೆದು ಅಪಮಾನ ಮಾಡುತ್ತಿರುವುದು ಸರಿಯಲ್ಲ. ಸರಕಾರದ ಅದರಲ್ಲೂ ಅಧಿಕಾರದಲ್ಲಿರುವ ಬಿಜೆಪಿಯ ನಿಂದನೆಯ ಅಪಪ್ರಚಾರದಿಂದ ರೈತರು ರೋಸಿ ಹೋಗಿದ್ದಾರೆ. ‘‘ಪಂಜಾಬಿನ ರೈತರನ್ನು ಉಗ್ರಗಾಮಿಗಳೆಂದು ಕರೆದರೆ ಪರಿಸ್ಥಿತಿ ಗಂಭೀರವಾಗಲಿದೆ’’ ಎಂದು ರೈತ ನಾಯಕರೊಬ್ಬರು ಎಚ್ಚರಿಕೆ ನೀಡಿದ್ದಾರೆ.

ಇದು ಪಂಜಾಬ್ ಮತ್ತು ಹರ್ಯಾಣ ರೈತರ ಹೋರಾಟ ಮಾತ್ರವೆಂದು ಸರಕಾರ ಹೇಳುತ್ತಿರುವುದು ಸರಿಯಾದುದಲ್ಲ. ಇದು ಭಾರತದ ಕನ್ಯಾಕುಮಾರಿಯಿಂದ ಹಿಡಿದು ಕಾಶ್ಮೀರವರೆಗಿನ ಕೋಟ್ಯಂತರ ರೈತರನ್ನು ಬಾಧಿಸುತ್ತಿರುವ ಸಮಸ್ಯೆಗಳ ಕುರಿತಾದ ಹೋರಾಟವಾಗಿದೆ. ಪಂಜಾಬ್ ಮತ್ತು ಹರ್ಯಾಣಗಳು ದಿಲ್ಲಿಗೆ ಸಮೀಪದಲ್ಲಿ ಇರುವುದರಿಂದ ಸಹಜವಾಗಿ ಅಲ್ಲಿನ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿರಬಹುದು. ಹಾಗಾಗಿ ಪರಿಸ್ಥಿತಿ ಉಲ್ಬಣಗೊಳ್ಳದಂತೆ ಸರಕಾರ ಸಹಾನುಭೂತಿಯಿಂದ ಈ ಸಮಸ್ಯೆಯನ್ನು ನಿರ್ವಹಿಸಬೇಕಾಗಿದೆ. ರೈತರಲ್ಲಿ ಒಡಕು ಹುಟ್ಟಿಸುವ, ಇಲ್ಲವೇ ಅವರ ಹಿಂದೆ ನಕ್ಸಲೀಯರು ಇದ್ದಾರೆಂದು ಸುಳ್ಳು ಹೇಳುವ ಹಗೆತನದ ನೀತಿಯನ್ನು ಕೈ ಬಿಡಲಿ. ಇದನ್ನು ಪ್ರತಿಷ್ಠೆಯನ್ನಾಗಿ ಮಾಡದೆ ರೈತರು ವಿರೋಧಿಸುತ್ತಿರುವ ಕರಾಳ ಕಾಯ್ದೆಗಳನ್ನು ಕೈಬಿಟ್ಟು ನೇಗಿಲ ಯೋಗಿಗಳ ನೋವಿಗೆ ಸ್ಪಂದಿಸಲಿ.

ಕೇಂದ್ರದ ಮೂರು ಕೃಷಿ ಕಾಯ್ದೆಗಳು ಜಾರಿಗೆ ಬಂದರೆ ಬೆಂಬಲ ಬೆಲೆ ವ್ಯವಸ್ಥೆ ನಾಶವಾಗುತ್ತದೆ. ಮಂಡಿಗಳು ಮುಚ್ಚಿ ಹೋಗುತ್ತವೆ. ತಮ್ಮ ಕೃಷಿ ಭೂಮಿ ಕಾರ್ಪೊರೇಟ್ ಕಂಪೆನಿಗಳ ಮಡಿಲಿಗೆ ಹೋಗಿ ಬೀಳುತ್ತದೆ ಎಂದು ರೈತರಲ್ಲಿ ಆತಂಕ ಮನೆ ಮಾಡಿರುವುದನ್ನು ತಳ್ಳಿ ಹಾಕಲು ಆಗುವುದಿಲ್ಲ. ಬೆಂಬಲ ಬೆಲೆ ವ್ಯವಸ್ಥೆ ಅಳಿಸಿ ಹೋದರೆ ತಮ್ಮ ಬದುಕು ಬೀದಿಗೆ ಬೀಳುತ್ತದೆ ಎಂಬುದು ಕೂಡ ನಿಜವಾದ ಕಳವಳವಾಗಿದೆ.ಆದ್ದರಿಂದ ಈ ಕಾನೂನುಗಳನ್ನು ಸರಕಾರ ವಾಪಸು ಪಡೆಯುವುದು ಸೂಕ್ತವಾಗಿದೆ.

ಪ್ರಜಾಪ್ರಭುತ್ವದಲ್ಲಿ ಜನರಿಗಾಗಿ ಇಂತಹ ಕಾನೂನು ರಚನೆಯಾಗುವಾಗ ಸಂಸತ್ತಿನ ಉಭಯ ಸದನಗಳಲ್ಲಿ ವ್ಯಾಪಕವಾದ ಚರ್ಚೆ ನಡೆಯಬೇಕಾಗುತ್ತದೆ. ಸಂಸತ್ತಿನಲ್ಲಿ ಮಾತ್ರವಲ್ಲ ಸಂಸತ್ತಿನ ಹೊರಗೆ ರೈತ ಸಂಘಟನೆಗಳ ಪ್ರತಿನಿಧಿಗಳ ಸಭೆಯನ್ನು ಕರೆದು ಅವರ ಅಭಿಪ್ರಾಯವನ್ನೂ ಪಡೆಯಬೇಕಾಗುತ್ತದೆ. ಯಾವುದೇ ಕಾನೂನು ಸರ್ವಾನುಮತದಿಂದ ಅಂಗೀಕಾರವಾಗಬೇಕು. ಆದರೆ ಕೃಷಿ ಕಾಯ್ದೆಗಳ ವಿಷಯದಲ್ಲಿ ಈ ಯಾವ ಪ್ರಕ್ರಿಯೆಯೂ ನಡೆದಿಲ್ಲ ಎಂಬುದು ವಿಷಾದಕರ ಸಂಗತಿಯಾಗಿದೆ.

ಆದ್ದರಿಂದ ಸರಕಾರ ವಿವಾದಾತ್ಮಕ ಕೃಷಿ ಕಾಯ್ದೆಗಳ ಬಗ್ಗೆ ಸಂಸತ್ತಿನಲ್ಲಿ ವಿವರವಾಗಿ ಚರ್ಚಿಸುವುದು ಮಾತ್ರವಲ್ಲ ರೈತಸಂಘಗಳ ಪ್ರತಿನಿಧಿಗಳ ಜೊತೆಗೆ ಸಮಾಲೋಚನೆ ಮಾಡಿ ಅಂತಿಮ ತೀರ್ಮಾನಕ್ಕೆ ಬರಲಿ. ಇದಕ್ಕೂ ಮೊದಲು ಈ ಕಾಯ್ದೆಗಳನ್ನು ತಕ್ಷಣ ವಾಪಸು ಪಡೆಯಲಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News