ಕೆಲಸದಿಂದ ತೆಗೆದುಹಾಕಿದ ಆರೋಪ: ರೀಡ್ ಅಂಡ್ ಟೇಲರ್ ಕಂಪೆನಿ ವಿರುದ್ಧ ಕಾರ್ಮಿಕರ ಪ್ರತಿಭಟನೆ

Update: 2021-01-11 18:26 GMT

ಮೈಸೂರು,ಜ.11: ರೀಡ್ ಅಂಡ್ ಟೇಲರ್ ಆಡಳಿತ ವರ್ಗ 260 ಕುಟುಂಬದವರನ್ನು ಬೀದಿ ಪಾಲು ಮಾಡಿದೆ ಎಂದು ಆರೋಪಿಸಿ, ನ್ಯಾಯಕ್ಕಾಗಿ ಒತ್ತಾಯಿಸಿ ರೀಡ್ ಅಂಡ್ ಟೇಲರ್ ಎಂಪ್ಲಾಯೀಸ್ ಯೂನಿಯನ್ ವತಿಯಿಂದ ಧರಣಿ ನಡೆಯಿತು.

ನಗರದ  ಜಿಲ್ಲಾಧಿಕಾರಿಗಳ ಕಚೇರಿ ಎದುರು ಸೋಮವಾರ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡವರು ಮಾತನಾಡಿ, ಸುಮಾರು 820 ಮಂದಿ ಕಾರ್ಮಿಕರು 22 ವರ್ಷಗಳಿಂದ ರೀಡ್ ಅಂಡ್ ಟೇಲರ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದು ಆಡಳಿತ ವರ್ಗದವರು ಮಾರ್ಚ್ 17 ರಂದು ಕೋವಿಡ್ ನೆಪದಲ್ಲಿ ವೇತನ ಸಹಿತ ರಜೆ ಘೋಷಣೆ ಮಾಡಿರುತ್ತಾರೆ. ನಂತರ ಎನ್ ಸಿಎಲ್ ಟಿ ನ್ಯಾಯಾಲಯದಲ್ಲಿ ಪ್ರಕರಣ ನಡೆಯುವಾಗ ಮತ್ತೆ ಕಂಪನಿಯನ್ನು ನಡೆಸುವುದಾಗಿ ಅಫಿಡವಿಟ್ ಸಲ್ಲಿಸಿಯೂ ನ್ಯಾಯಾಲಯವು ನೇಮಕ ಮಾಡಿದ್ದ ಲಿಕ್ವಿಡೇಟರ್ ಮೂಲಕ ಎಲ್ಲಾ ಕಾರ್ಮಿಕರು ಮತ್ತು ಸಿಬ್ಬಂದಿಯವರನ್ನು ಮೇ 14 ರಂದು ಕಾನೂನು ಬಾಹಿರವಾಗಿ ವಿಸರ್ಜನೆ ಮಾಡಿರುತ್ತಾರೆ ಎಂದು ಆರೋಪಿಸಿದರು.

ಬಳಿಕ ಈ ಹಿಂದೆ ಮಾಲಕರೆ ಹೊಸ ಹೆಸರಿನಲ್ಲಿ ಕಂಪನಿಯನ್ನು ಖರೀದಿಸಿ ಕೆಲವು ಕಾರ್ಮಿಕರಿಂದ ಕಾನೂನು ಬಾಹಿರವಾಗಿ ಒಪ್ಪಂದ ಮಾಡಿಕೊಂಡು 565 ಜನರನ್ನು ಮಾತ್ರ ಜೇಷ್ಠತೆ ಮತ್ತಿತರ ಯಾವುದೇ ಮಾನದಂಡ ಅನುಸರಿಸದೇ ನೇಮಕ ಮಾಡಿಕೊಂಡು ಉಳಿದಂತೆ ಸುಮಾರು 250ಕ್ಕೂ ಹೆಚ್ಚು ಜನರಿಗೆ ಕಾನೂನು ಬಾಹಿರವಾಗಿ ಕೆಲಸ ನಿರಾಕರಣೆ ಮಾಡಿ ಬೀದಿ ಪಾಲು ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅಷ್ಟೇ ಅಲ್ಲದೆ ಕೆಲಸಕ್ಕೆ ನೇಮಕಗೊಂಡು ಈಗಾಗಲೇ ಕೆಲಸ ಮಾಡುತ್ತಿರುವ ಕಾರ್ಮಿಕರ ವೇತನದಲ್ಲಿ ಕಡಿತ ಮಾಡಿ ಬೀದಿ ಪಾಲಾಗಿರುವ ಕಾರ್ಮಿಕರಿಗೆ ಪರಿಹಾರ ಕೊಡುತ್ತೇವೆಂದು ಹೇಳಿರುತ್ತಾರೆ. ಸಾವಿರಾರು ಕೋಟಿ ಬೆಲೆಬಾಳುವ ದೇಶದಾದ್ಯಂತ ಪ್ರಖ್ಯಾತಿ ಹೊಂದಿರುವ ಈ ಕಂಪನಿಯನ್ನು ಕೇವಲ 16.5 ಕೋಟಿಗೆ ತೆಗೆದುಕೊಂಡು 22 ವರ್ಷ ಕೆಲಸ ಮಾಡಿರುವ 250ಕ್ಕೂ ಹೆಚ್ಚು ಕಾರ್ಮಿಕರಿಗೆ ಕೆಲಸವು ಇಲ್ಲ ಮತ್ತು ಪರಿಹಾರವೂ ಇಲ್ಲದಂತಾಗಿದೆ. ಕೆಲಸ ಕಳೆದುಕೊಂಡು ಕೆಲಸಕ್ಕಾಗಿ ಬೀದಿಯಲ್ಲಿ ಹೋರಾಟ ಮಾಡುತ್ತಿರುವ ನಮಗೆ ಕೆಲಸ ನೀಡದೆ ಹೊರರಾಜ್ಯದಿಂದ ಗುತ್ತಿಗೆ ಕಾರ್ಮಿಕರನ್ನು ಕರೆತಂದು ಕೆಲಸ ನೀಡಲಾಗಿದೆ. ಕೆಲಸವೂ ಇಲ್ಲದೆ, ವೇತನವೂ ಇಲ್ಲದೆ ಬೀದಿಪಾಲಾಗಿರುವ ಕುಟುಂಬಗಳಿಗೆ ತಾವು ಮಧ್ಯಪ್ರವೇಶಿಸುವ ಮೂಲಕ ನ್ಯಾಯ ದೊರಕಿಸಿಕೊಡಬೇಕೆಂದು ಒತ್ತಾಯಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News