ಬೆಂಗಳೂರು-ಮಂಗಳೂರು ಪ್ರಮುಖ ರಸ್ತೆ ಸಂಪರ್ಕವಾಗಿರುವ ರಾ.ಹೆದ್ದಾರಿ 75ರ ಕಾಮಗಾರಿ 2022ಕ್ಕೆ ಪೂರ್ಣ: ಸಚಿವ ಗೋಪಾಲಯ್ಯ

Update: 2021-01-12 07:15 GMT
ಸಚಿವ ಕೆ.ಗೋಪಾಲಯ್ಯ 

ಹಾಸನ, ಜ.12: ಬೆಂಗಳೂರು- ಮಂಗಳೂರಿಗೆ ಪ್ರಮುಖ ರಸ್ತೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 75ರ ಕಾಮಗಾರಿ 2022ರ ವೇಳೆಗೆ ಪೂರ್ಣ ಗೊಳಿಸಲು ಸೂಚನೆ ನೀಡಿರುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ತಿಳಿಸಿದ್ದಾರೆ.

ಆಲೂರಿನ ಬೈರಾಪುರ ತಿರುವಿನಲ್ಲಿ ಕಾಮಗಾರಿ ವೀಕ್ಷಣೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂದಿನ‌‌ ಕೆಲ ತಿಂಗಳಲ್ಲಿ ಮಳೆಗಾಲ ಪ್ರಾರಂಭವಾಗುವ ಹಿನ್ನೆಲೆಯಲ್ಲಿ ಕಾಮಗಾರಿ ತ್ವರಿತ ಗೊಳಿಸಲು ಸೂಚನೆ ನೀಡಿದ್ದೇನೆ ಹಾಗೂ ಪ್ರತಿ ತಿಂಗಳು ಕಾಮಗಾರಿ ಬಗ್ಗೆ ಪ್ರಗತಿ ಪರಿಶೀಲನೆ ಸಭೆ ನಡೆಸಲಾಗುವುದು ಎಂದರು.

ಮಂಗಳೂರಿಗೆ ಪ್ರಮುಖ ಸಂಪರ್ಕ ರಸ್ತೆಯಾಗಿರುವ ಕಾರಣ ಅಲ್ಲಿನ ಸಂಸದರಾದ ನಳೀನ್ ಕುಮಾರ್ ಕಟೀಲು ಅವರು ಕೇಂದ್ರ ಸಚಿವ ನಿತಿನ್ ಗಡ್ಕರಿಯೊಂದಿಗೆ ಈ ಬಗ್ಗೆ ಮಾತುಕತೆ ನಡೆಸಿದ್ದು, ಹಿಂದೆ ಇದ್ದಂತಹ ಗುತ್ತಿಗೆದಾರ ಬ್ಯಾಕ್ ಲೀಸ್ಟ್ ಗೆ ಹಾಕಲಾಗಿದ್ದು ಈ ಹಿನ್ನೆಲೆಯಲ್ಲಿ ಹೊಸ ಟೆಂಡರ್ ಕರೆದು ಇದೀಗ ಕಾಮಗಾರಿ ನಡೆಸುತ್ತಿರುವವರೊಂದಿಗೆ ಎರಡು ಖಾತೆ ತೆರೆಯಲಾಗಿದೆ. ಕಾಮಗಾರಿ ನಡೆಯುವ ಹಂತ ಹಂತದ ಕೆಲಸಕ್ಕೆ ಹಣ ಬಿಡುಗಡೆ ಮಾಡಲಾಗುತ್ತಿದೆ ಎಂದರು.

ಮಳೆಗಾಲಕ್ಕೆ ಮೊದಲು ಹದಗೆಟ್ಟ ರಸ್ತೆಯ ಗುಂಡಿ ಮುಚ್ಚಲು ಸೂಚನೆ ನಿಡಲಾಗಿದೆ. 2020ರ ಎಪ್ರಿಲ್ ವೇಳೆಗೆ ಹೆದ್ದಾರಿ ಕಾಮಗಾರಿ ಬಹುತೇಕ ಪೂರ್ಣವಾಗಲಿದೆ. ಇದಕ್ಕೆ ಬೇಕಾಗುವ ಸಾಮಗ್ರಿ ಹಾಗೂ ಅನುದಾನಕ್ಕೆ ಯಾವುದೇ ಕೊರತೆ ಇಲ್ಲಾ ಎಂದರು.

ಈ ವೇಳೆ ಮಾತನಾಡಿದ ಸಂಸದ ನಳಿನ್ ಕುಮಾರ್ ಕಟೀಲು, ಕಾಮಗಾರಿ ಪೂರ್ಣವಾದರೆ ಮಂಗಳೂರಿಗೆ ಸಂಪರ್ಕಕ್ಕೆ ಹೆಚ್ಚು ಅನುಕೂಲವಾಗಲಿದೆ. ಈ‌ ಮಾರ್ಗದ ರಸ್ತೆ ಕಾಮಗಾರಿ ಕುಂಟುತ್ತಾ ಸಾಗಿರುವ ಬಗ್ಗೆ ಗಡ್ಕರಿ ಗಮನಕ್ಕೆ ತರಲಾಗಿ ಅವರ ನಿರ್ದೇಶನ ದ ಹಿನ್ನೆಲೆಯಲ್ಲಿ ಇಂದು ಕಾಮಗಾರಿ ಪ್ರಗತಿ ಕಂಡಿದೆ. ಈ ಹಿಂದೆ ಏಕೆ ಕಾಮಗಾರಿ ನಿಂತಿತ್ತು‌ ಎಂದು ನಾವು ಹೇಳಬೇಕಿಲ್ಲಾ ಎಲ್ಲಾ ರಾಜಕೀಯ ಕಾರಣ ಎಂದು ಪರೋಕ್ಷವಾಗಿ ಜಿಲ್ಲೆಯ ಜೆಡಿಎಸ್ ನಾಯಕರನ್ನು ದೂರಿದರು.

ಈ ವೇಳೆ ಮೈಸೂರು ಸಂಸದ ಪ್ರತಾಪ್ ಸಿಂಹ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News