×
Ad

ರಾಜ್ಯಕ್ಕೆ ಮೊದಲ ಹಂತದಲ್ಲಿ 7.95 ಲಕ್ಷ ಕೋವಿಶೀಲ್ಡ್ ಲಸಿಕೆ: ಸಚಿವ ಡಾ.ಸುಧಾಕರ್

Update: 2021-01-12 13:19 IST

ಬೆಂಗಳೂರು, ಜ.12: ರಾಜ್ಯಕ್ಕೆ ಮೊದಲ ಹಂತದಲ್ಲಿ 7.95 ಲಕ್ಷ ಕೋವಿಶೀಲ್ಡ್ ಲಸಿಕೆಯ ವೈಲ್ ಪೂರೈಕೆಯಾಗಲಿದೆ ಎಂದು ರಾಜ್ಯ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಂಗಳವಾರ ಪುಣೆಯಿಂದ ರಾಜ್ಯಕ್ಕೆ ಬಂದಿರುವ 7.95 ಲಕ್ಷ 'ಕೋವಿಶೀಲ್ಡ್' ಲಸಿಕೆಯ ಬಾಟಲಿಗಳನ್ನು ನಗರದ ಆನಂದ ರಾವ್ ವೃತ್ತದಲ್ಲಿರುವ ರಾಜ್ಯಮಟ್ಟದ ದಾಸ್ತಾನು ಕೇಂದ್ರದಲ್ಲಿ ಇರಿಸಲಾಗಿದೆ. ಇದನ್ನು ಚಿತ್ರದುರ್ಗ, ಕಲಬುರಗಿ ಸೇರಿದಂತೆ 5 ಪ್ರಾದೇಶಿಕ ಕೇಂದ್ರಗಳಿಗೆ ರವಾನಿಸಿ, ಅಲ್ಲಿಂದ ಜಿಲ್ಲೆಗಳಲ್ಲಿನ ದಾಸ್ತಾನು ಕೇಂದ್ರಗಳಿಗೆ ರವಾನಿಸಲಾಗುತ್ತದೆ. ರಾಜ್ಯದಲ್ಲಿ 2,767 ಕೋಲ್ಡ್ ಚೈನ್ ಕೇಂದ್ರಗಳನ್ನು ಗುರುತಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಒಂದು ವೈಲ್ ನಲ್ಲಿ 10 ಮಂದಿಗೆ ಲಸಿಕೆ ನೀಡಬಹುದು. ಮೊದಲ ಡೋಸ್ ಪಡೆದ 28 ದಿನಗಳ ಬಳಿಕ ಎರಡನೇ ಡೋಸ್ ಪಡೆಯಬೇಕು. ಲಸಿಕೆಯಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಉತ್ಪತ್ತಿಯಾಗುತ್ತದೆ. ಇದು ಸಂಪೂರ್ಣ ಸುರಕ್ಷಿತ ಎಂದರು.

ಪ್ರತಿ ಬಾಟಲಿಯಲ್ಲಿ 5 ಎಂ. ಎಲ್ ಡೋಸ್ ಇರಲಿದೆ. ಡ್ರಗ್ಸ್ ಕಂಟ್ರೋಲ್ ಜನರಲ್ ಆಫ್ ಇಂಡಿಯಾ ಕೋವಿಶೀಲ್ಡ್ ಲಸಿಕೆಗೆ ಈಗಾಗಲೇ ಪರವಾನಿಗೆ ನೀಡಿದೆ. ಕೇಂದ್ರ ಸರ್ಕಾರ 1.1 ಕೋಟಿ ಡೋಸ್ ಲಸಿಕೆ ಖರೀದಿ ಮಾಡಿದೆ. ಒಂದು ಡೋಸ್ ಗೆ 210 ರೂ. ನಿಗದಿ ಮಾಡಿದ್ದು, ಬೇರೆ ಯಾವ ದೇಶವೂ ಇಷ್ಟು ಕಡಿಮೆ ದರ ನಿಗದಿ ಮಾಡಿಲ್ಲ. ಸೀರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದಿಂದ ಲಸಿಕೆ ಖರೀದಿಸಲಾಗಿದೆ. ಲಸಿಕೆ ಖರೀದಿಗೆ ಒಟ್ಟು 231 ಕೋಟಿ ರೂ. ಖರ್ಚು ಮಾಡಲಾಗಿದೆ ಎಂದು ಸಚಿವರು ತಿಳಿಸಿದರು.

  ಆರೋಗ್ಯ ಕ್ಷೇತ್ರದ ಸಿಬ್ಬಂದಿ, ಕೊರೋನ ನಿಯಂತ್ರಣ ಮಾಡುವ ಅಧಿಕಾರಿ, ಸಿಬ್ಬಂದಿಗೆ ಲಸಿಕೆ ನೀಡಲಾಗುತ್ತದೆ. ಈ ಎಲ್ಲ ಪ್ರಕ್ರಿಯೆ ಮಾರ್ಗಸೂಚಿ ಪ್ರಕಾರ ನಡೆಯಲಿದೆ. ಲಸಿಕೆ ಪಡೆದ ಬಳಿಕ ಅವರ ಮೇಲೆ ಕೆಲ ಸಮಯದವರೆಗೆ ಸೂಕ್ಷ್ಮವಾಗಿ ನಿಗಾ ಇರಿಸಲಾಗುತ್ತದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News