ಪತಿಯ ಕೊಲೆಗೈದ ಪ್ರಕರಣ: 7 ತಿಂಗಳ ಬಳಿಕ ಪೊಲೀಸರಿಗೆ ಸಿಕ್ಕಿಬಿದ್ದ ಪತ್ನಿ

Update: 2021-01-12 13:06 GMT

ಬೆಂಗಳೂರು, ಜ.12: ಪತಿಯನ್ನು ಕೊಲೆಗೈದ ಆರೋಪ ಸಂಬಂಧ ಪ್ರಕರಣವೊಂದನ್ನು ಭೇದಿಸಿರುವ ಇಲ್ಲಿನ ಮಾದನಾಯ್ಕನಹಳ್ಳಿ ಠಾಣಾ ಪೊಲೀಸರು ಮಹಿಳೆಯೊಬ್ಬಾಕೆಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮಾದನಾಯ್ಕನಹಳ್ಳಿಯ ತೋಟದಗುಡ್ಡದ ಶಿವಲಿಂಗು ಕೊಲೆಯಾದ ವ್ಯಕ್ತಿಯಾಗಿದ್ದು, ಈತನ ಪತ್ನಿ ಶೋಭಾ ಹಾಗೂ ರಾಮು ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಏನಿದು ಪ್ರಕರಣ?: ಕುಣಿಗಲ್ ತಾಲೂಕು ಬಿ.ಹೊಸಹಳ್ಳಿ ಮೂಲದ ಶಿವಲಿಂಗು, ತೋಟದಗುಡ್ಡದ ಹಳ್ಳಿಯಲ್ಲಿ ವಾಸವಿದ್ದು, ಅಂಗಡಿಯೊಂದನ್ನು ನಡೆಸುತ್ತಿದ್ದ. ಈ ವೇಳೆ ರಾಮು ಎಂಬ ಅನಾಥನ ಪರಿಚಯವಾಗಿದೆ. ಆತನಿಗೂ ಬದುಕು ನೀಡಿದಂತೆ ಆಗುತ್ತದೆ, ತನಗೂ ಸಹಾಯವಾಗುತ್ತದೆ ಎಂದು ಶಿವಲಿಂಗು ಆತನಿಗೆ ಆಶ್ರಯ ನೀಡಿದ್ದಾನೆ ಎಂದು ತಿಳಿದುಬಂದಿದೆ.

ಬಳಿಕ ರಾಮುನೊಂದಿಗೆ ಶಿವಲಿಂಗು ಪತ್ನಿ ಶೋಭಾ ಅಕ್ರಮ ಸಂಬಂಧ ಹೊಂದಿದ್ದು, ಇದೇ ವಿಚಾರವಾಗಿ ಶಿವಲಿಂಗುವನ್ನು ಈ ಇಬ್ಬರು ಕೊಲೆಗೈದಿದ್ದಾರೆ. ಬಳಿಕ ಮೃತದೇಹವನ್ನು ಗೋಣಿಚೀಲದಲ್ಲಿ ಕಟ್ಟಿ ಯಾರಿಗೂ ಅನುಮಾನ ಬರಬಾರದು ಎಂದು ರಾತ್ರೋ ರಾತ್ರಿ ಕೋಳಿ ತ್ಯಾಜ್ಯ ಸೇರಿದಂತೆ ಗೃಹಪಯೋಗಿ ತ್ಯಾಜ್ಯ ಎಸೆಯುವ ಕಸದ ಗುಂಡಿಗೆ ಮೃತದೇಹ ಎಸೆದಿದ್ದಾರೆ ಎನ್ನುವ ಮಾಹಿತಿ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ.

ಘಟನೆ ನಡೆದ 7 ದಿನದ ನಂತರ ಅಂದರೆ ಹಿಂದಿನ ಜೂ.7 ರಂದು ಚಿಂದಿ ಆಯುವವರಿಗೆ ಶವ ಪತ್ತೆಯಾಗಿದೆ. ಆದರೆ, ಮೃತದೇಹದ ಗುರುತು ಪತ್ತೆಯಾಗದ ರೀತಿ ಕೊಳೆತು ನಾರುತ್ತಿದ್ದರಿಂದ ಅಪರಿಚಿತ ಶವವೆಂದು ದೂರು ದಾಖಲಿಸಿಕೊಂಡ ಪೊಲೀಸರು ಅಲ್ಲಿಯೇ ಶವಸಂಸ್ಕಾರ ಮಾಡಿ ಮುಗಿಸಿದ್ದರು.

ಇನ್ನು, ಈ ಸಂಬಂಧ ಶಿವಲಿಂಗು ಮನೆಗೆ ಬಂದ ಸಹೋದರ ಪುಟ್ಟರಾಜು ನಾಪತ್ತೆಯಾಗಿರುವ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡಬೇಕೆಂದರೂ ಒಪ್ಪದ ಆರೋಪಿ ಶೋಭಾ ದೂರು ಕೊಡುವುದು ಬೇಡ ಇಂದಲ್ಲ ನಾಳೆ ಬರಲಿದ್ದಾರೆ ಬಿಡಿ ಎಂದಿದ್ದಾಳೆ. ಅತ್ತಿಗೆಯ ನಡೆ ಕಂಡು ಅನುಮಾನಗೊಂಡ ಪುಟ್ಟರಾಜು ಅಣ್ಣ ಕಾಣೆಯಾಗಿರುವ ಬಗ್ಗೆ ಮಾದನಾಯಕನಹಳ್ಳಿ ಪೊಲೀಸರಿಗೆ ಕಳೆದ ನವೆಂಬರ್ ನಲ್ಲಿ ದೂರು ನೀಡಿದ್ದಲ್ಲದೆ, ಅತ್ತಿಗೆಯ ಅಕ್ರಮ ಸಂಬಂಧದ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಪೊಲೀಸರು ಇಬ್ಬರನ್ನು ಠಾಣೆಗೆ ಕರೆದು ವಿಚಾರಿಸಿದಾಗ ಕೊಲೆ ಮಾಡಿರುವ ಬಗ್ಗೆ ಆರೋಪಿಗಳು ಬಾಯ್ಬಿಟ್ಟಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News