ಶಾಸಕ ಸಾ.ರಾ.ಮಹೇಶ್- ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ನಡುವೆ ಮಾತಿನ ಚಕಮಕಿ

Update: 2021-01-12 15:26 GMT

ಮೈಸೂರು,ಜ.12: ಜಿಲ್ಲಾ ಪಂಚಾಯತ್ ನಲ್ಲಿ ಕಾಗದ ಪತ್ರಗಳ ಸಮಿತಿ ಸಭೆ ವೇಳೆ ಶಾಸಕ ಸಾ.ರಾ.ಮಹೇಶ್ ಹಾಗೂ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ನಡುವೆ ಮಾತಿನ ಚಕಮಕಿ ನಡೆಯಿತು.

ವಿಧಾನಸಭೆಯ ಕಾಗದ ಪತ್ರಗಳ ಸಮಿತಿ ಸಭೆಗೆ ಮಂಗಳವಾರ ಬಂದ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರಿಗೆ ವೇದಿಕೆಯಲ್ಲಿ ಆಸನದ ವ್ಯವಸ್ಥೆ ಮಾಡಿರಲಿಲ್ಲ. ಹೀಗಾಗಿ, ವೇದಿಕೆ ಮುಂಭಾಗದ ಕುರ್ಚಿಯಲ್ಲಿ ಡಿಸಿ ಕುಳಿತರು. ನಂತರ ಸಭೆ ಆರಂಭವಾದಾಗ ಜಿಲ್ಲಾಧಿಕಾರಿ ಮಾಸ್ಕ್ ಧರಿಸಿಯೇ ಮಾತು ಆರಂಭಿಸಿದರು. ಆಗ 'ನಿಮ್ಮ ಮಾತು ಕೇಳುತ್ತಿಲ್ಲ. ಮಾಸ್ಕ್ ತೆಗೆದು ಮಾತನಾಡಿ' ಎಂದು ಸಾ.ರಾ.ಮಹೇಶ್ ಹೇಳಿದರು. 'ನಾನು ಮಾಸ್ಕ್ ತೆಗೆಯವುದಿಲ್ಲ. ಮಾಸ್ಕ್ ತೆಗೆದು ಮಾತನಾಡಬಾರದು. ಅದಕ್ಕಾಗಿ ಮಾಸ್ಕ್ ತೆಗೆಯುವುದಿಲ್ಲ' ಎಂದು ಉತ್ತರಿಸಿದರು.

ನಂತರ ಮಾತು ಮುಂದುವರಿಸಿದ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ಈ ಸಭೆಯಲ್ಲಿ ನನಗೆ ಸಂಬಂಧಿಸಿದ ವಿಷಯಗಳ ಚರ್ಚೆ ಇಲ್ಲ. ಹಾಗಾಗಿ, ನೀವು ಸಮ್ಮತಿಸಿದರೆ ನಾನು ಸಭೆಯಿಂದ ಹೋಗುತ್ತೇನೆ ಎಂದರು. 'ನಿಮ್ಮನ್ನು ನಾವು ಸಭೆಗೆ ಕರೆದಿರಲಿಲ್ಲ. ಆದರೂ, ತಾವು ಸಭೆಗೆ ಬಂದಿದ್ದೀರಿ ಸಂತೋಷ. ಜಿಲ್ಲಾಧಿಕಾರಿಗಳಿಗೆ ಜಿಲ್ಲೆಯ ಯಾವುದೇ ಸಭೆಯ ಮಾಹಿತಿ ಕೊಡುವುದು ಕರ್ತವ್ಯ. ಅದಕ್ಕೆ ಮಾಹಿತಿ ಕೊಟ್ಟಿದ್ದೇವೆ ಅಷ್ಟೆ ಎಂದು ಸಾ.ರಾ.ಮಹೇಶ್‍ ತಿರುಗೇಟು ನೀಡಿದರು.

ಮೈಸೂರಿಗೆ ಬಂದ ಕಾಗದ ಪತ್ರಗಳ ಸಮಿತಿಯನ್ನು ನೀವು ಸ್ವಾಗತಿಸಿಲ್ಲ, ಆದರೂ ಪರವಾಗಿಲ್ಲ. ಸಮಯ ಇದ್ದರೆ ಇರಿ. ಬೇರೆ ಕೆಲಸ ಇದ್ದರೆ ಹೋಗಿ ಎಂದು ಸಾ.ರಾ.ಮಹೇಶ್ ಹೇಳಿದರು. ಆಗ ತಕ್ಷಣವೇ ಜಿಲ್ಲಾಧಿಕಾರಿ ಹೊರನಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News