ಆಧಾರ ರಹಿತ ಆರೋಪ ಮಾಡಿದವರ ವಿರುದ್ಧ ಕಾನೂನು ಹೋರಾಟ: ಶಾಫಿ ಸಅದಿ
ಬೆಂಗಳೂರು, ಜ.12: ವಕ್ಫ್ ಬೋರ್ಡ್ ನಿಂದ ಅಕ್ರಮವಾಗಿ ಹಣ ಮಂಜೂರು ಮಾಡಿಕೊಂಡಿದ್ದಾರೆಂದು ಆಧಾರ ರಹಿತ ಆರೋಪ ಮಾಡುತ್ತಿರುವ ವ್ಯಕ್ತಿಗಳ ವಿರುದ್ಧ ಕಾನೂನು ಹೋರಾಟ ಮಾಡಲಾಗುವುದು ಎಂದು ಬೆಂಗಳೂರು ಸಅದಿಯಾ ಎಜುಕೇಶನಲ್ ಫೌಂಡೇಶನ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಶಾಫಿ ಸಅದಿ ತಿಳಿಸಿದರು.
ಮಂಗಳವಾರ ಆರ್‌ಟಿ ನಗರದ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, 2011ನೇ ಸಾಲಿನಿಂದಲೂ ಸತತವಾಗಿ ರಾಜ್ಯ ವಕ್ಫ್ ಬೋರ್ಡ್ ನಲ್ಲಿ ಸದಸ್ಯನಾಗಿ ಕಾರ್ಯನಿರ್ವಹಿಸಿದ್ದೇನೆ. ಆದರೆ, ಕೆಲವರು ನನ್ನನ್ನು ಗುರಿಯಾಗಿಸಿಕೊಂಡು ಈ ರೀತಿಯ ಸುಳ್ಳು ಆರೋಪ ಮಾಡುತ್ತಿರುವುದು ಬೇಸರ ತಂದಿದೆ ಎಂದರು.
ಸಅದಿಯಾ ಎಜುಕೇಶನಲ್ ಫೌಂಡೇಶನ್ ಸಂಸ್ಥೆ ಅಡಿಯಲ್ಲಿ ಬಡ ಮುಸ್ಲಿಮ್ ಮಕ್ಕಳ ಶೈಕ್ಷಣಿಕ ಪ್ರಗತಿಗಾಗಿಯೇ ಬೆಂಗಳೂರಿನ ಬನಶಂಕರಿ ಹಾಗೂ ಬನ್ನೇರುಘಟ್ಟಗಳಲ್ಲಿ ವಿವಿಧ ವಿದ್ಯಾಲಯಗಳನ್ನು ನಡೆಸುತ್ತಿದ್ದು, ಸುಮಾರು 4.5 ಕೋಟಿ ರೂ. ಮೌಲ್ಯದ ಆಸ್ತಿಯನ್ನು ವಕ್ಫ್ ವ್ಯಾಪ್ತಿಗೆ ಸೇರಿಸಲಾಗಿದೆ. ಹೀಗಿರುವಾಗ ನಾನೇಕೆ ಅಕ್ರಮಗಳಲ್ಲಿ ತೊಡಗಲಿ ಎಂದು ಪ್ರಶ್ನಿಸಿದರು.
ತಡೆಗೋಡೆ ವಿಚಾರವಾಗಿ ಉದ್ದೇಶ ಪೂರ್ವಕವಾಗಿ ನನ್ನ ಮೇಲೆ ಆರೋಪ ಮಾಡಲಾಗಿದ್ದು, ಈ ತಡೆಗೋಡೆ ಒಂದು ದಿಕ್ಕಿನಲ್ಲಿ ಮಾತ್ರವಿದೆ. ನಾಲ್ಕು ಕಡೆಯೂ ತಡೆಗೋಡೆ ನಿರ್ಮಿಸಲು ಸುಮಾರು 25 ಲಕ್ಷ ರೂ. ವೆಚ್ಚ ಆಗಲಿದೆ. ಆದರೆ, ವಕ್ಫ್ ಮಂಡಳಿ ನಮಗೆ 19 ಲಕ್ಷ ರೂ. ಮಂಜೂರು ಮಾಡಿದ್ದು, ಈ ಪೈಕಿ ಸದ್ಯಕ್ಕೆ 5 ಲಕ್ಷ ರೂ. ಮಾತ್ರ ನಮ್ಮ ಕೈ ಸೇರಿದೆ ಎಂದ ಅವರು, ಇದರಲ್ಲಿ ನಾನು ಯಾವುದೇ ರೀತಿಯಲ್ಲಿ ಅಧಿಕಾರ ದುರುಪಯೋಗ, ಹಸ್ತಕ್ಷೇಪ ಮಾಡಿಲ್ಲ. ವಕ್ಫ್ ಬೋರ್ಡ್ ಸಿಇಒ ಅವರು ಒಮ್ಮೆ ಇಲ್ಲಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಇನ್ನುಳಿದ ಹಣ ಬಿಡುಗಡೆ ಮಾಡಲಿ ಎಂದು ಶಾಫಿ ಸಅದಿ ತಿಳಿಸಿದರು.
ಈಗಾಗಲೇ ಕಾಂಪೌಂಡ್ ಇರುವ ಬನ್ನೇರುಘಟ್ಟ ಮಸೀದಿಗೆ ಮತ್ತೊಮ್ಮೆ ಕಾಂಪೌಂಡ್ ನಿರ್ಮಾಣಕ್ಕೆಂದು ಅನುದಾನ ಸಲ್ಲಿಸಲಾಗಿದೆ ಎಂಬ ದೂರುದಾರರ ಆರೋಪ ಸತ್ಯಕ್ಕೆ ದೂರವಾದುದು. ಈ ರೀತಿಯ ಅಪಪ್ರಚಾರ ಸರಿಯಲ್ಲ. ಈ ಸಂಬಂಧ ಆಧಾರ ರಹಿತ ಆರೋಪಗಳನ್ನು ಮಾಡಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದರು.