ಬುಧವಾರ ಮಧ್ಯಾಹ್ನ ನೂತನ ಸಚಿವರ ಪ್ರಮಾಣ ವಚನ ಸ್ವೀಕಾರ: ಸಿಎಂ ಯಡಿಯೂರಪ್ಪ

Update: 2021-01-12 16:10 GMT

ಬೆಂಗಳೂರು, ಜ.12: ರಾಜ್ಯ ಸಚಿವ ಸಂಪುಟ ವಿಸ್ತರಣೆಯು ಬುಧವಾರ(ಜ.13) ಮಧ್ಯಾಹ್ನ 3.50ಕ್ಕೆ ನಡೆಯಲಿದೆ. 7-8 ಮಂದಿ ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದು, ರಾಜ್ಯಪಾಲ ವಜುಭಾಯಿ ವಾಲ ಪ್ರತಿಜ್ಞಾವಿಧಿ ಬೋಧಿಸಲಿದ್ದಾರೆ. ಸಚಿವ ಸಂಪುಟ ವಿಸ್ತರಣೆಯಲ್ಲಿ ಯಾವುದೇ ಗೊಂದಲಗಳಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.

ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರು ಯಾರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೋ ಅವರಿಗೆ ನಾಳೆ ಮಧ್ಯಾಹ್ನ 3.30ಕ್ಕೆ ರಾಜಭವನಕ್ಕೆ ಬರುವಂತೆ ಸೂಚನೆ ನೀಡಿದ್ದೇನೆ. ಒಬ್ಬರನ್ನು ಸಂಪುಟದಿಂದ ಕೈ ಬಿಡಬೇಕಿದ್ದು ಈ ಬಗ್ಗೆ ರಾತ್ರಿ ತೀರ್ಮಾನ ಕೈಗೊಳ್ಳುತ್ತೇನೆ ಎಂದರು.

ಬಹುನಿರೀಕ್ಷಿತ ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಕಾಲ ಕೂಡಿ ಬಂದಿದ್ದು, ಬುಧವಾರ(ಜ.13) ಸಂಜೆ 3.50 ರಿಂದ 4.30ರವರೆಗೆ ನೂತನ ಸಚಿವ ಸಂಪುಟದ ಸದಸ್ಯರಿಗೆ ಪ್ರತಿಜ್ಞಾ ವಿಧಿ ಬೋಧಿಸುವ ಸಮಾರಂಭಕ್ಕೆ ಕಾಲಾವಕಾಶ ನೀಡುವಂತೆ ಕೋರಿ ಮಂಗಳವಾರ ಮುಖ್ಯಮಂತ್ರಿ ಸಚಿವಾಲಯ ಬರೆದಿದ್ದ ಪತ್ರಕ್ಕೆ ಸ್ಪಂದಿಸಿ, 3.50ಕ್ಕೆ ಪ್ರತಿಜ್ಞಾ ವಿಧಿ ಬೋಧಿಸುವ ಕಾರ್ಯಕ್ರಮಕ್ಕೆ ರಾಜ್ಯಪಾಲ ವಜುಭಾಯಿ ವಾಲ ಸಮ್ಮತಿ ನೀಡಿದ್ದಾರೆ ಎಂದರು.

ನೂತನ ಸಚಿವರು?: ವಿಧಾನಪರಿಷತ್ ಸದಸ್ಯರಾದ ಎಂಟಿಬಿ ನಾಗರಾಜ್, ಆರ್.ಶಂಕರ್, ರಾಜರಾಜೇಶ್ವರಿ ನಗರದ ಶಾಸಕ ಮುನಿರತ್ನ, ಮಾಜಿ ಸಚಿವರಾದ ಉಮೇಶ್ ಕತ್ತಿ, ಮುರುಗೇಶ್ ನಿರಾಣಿ, ಸಿ.ಪಿ.ಯೋಗೇಶ್ವರ್ ಹಾಗೂ ಸುಳ್ಯ ಕ್ಷೇತ್ರದ ಹಿರಿಯ ಬಿಜೆಪಿ ಶಾಸಕ ಎಸ್.ಅಂಗಾರ ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆಗಳಿವೆ ಎನ್ನಲಾಗಿದೆ.

ಕೋಲಾರ ಜಿಲ್ಲಾ ಉಸ್ತುವಾರಿ ಹಾಗೂ ಅಬಕಾರಿ ಸಚಿವ ಎಚ್.ನಾಗೇಶ್‍ರನ್ನು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೂಚನೆ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ಮಂಗಳವಾರ ಬೆಳಗ್ಗೆ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿಯನ್ನು ಭೇಟಿ ಮಾಡಿದ ನಾಗೇಶ್, ತನ್ನನ್ನು ಸಚಿವ ಸಂಪುಟದಿಂದ ಕೈ ಬಿಡದಂತೆ ಮನವಿ ಮಾಡಿದ್ದಾರೆ. ಆದರೆ, ನಾಗೇಶ್ ಮನವಿಗೆ ಮುಖ್ಯಮಂತ್ರಿ ಸ್ಪಂದಿಸಲಿಲ್ಲ ಎಂದು ಹೇಳಲಾಗುತ್ತಿದೆ.

ಪೂರ್ಣಿಮಾ ಶ್ರೀನಿವಾಸ್‍ಗೆ ಕೈ ತಪ್ಪಿದ ಅವಕಾಶ ?

ಹಿರಿಯೂರು ಕ್ಷೇತ್ರದ ಬಿಜೆಪಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಹೆಸರು ಪದೇ ಪದೇ ಸಚಿವ ಸ್ಥಾನಕ್ಕೆ ಕೇಳಿ ಬರುತ್ತಿತ್ತು. ಆದರೆ, ಇತ್ತೀಚೆಗೆ ನಡೆದ ವಿಧಾನಪರಿಷತ್ ಚುನಾವಣೆಯಲ್ಲಿ ಪೂರ್ಣಿಮಾ ಅವರ ಪತಿ ಡಿ.ಟಿ.ಶ್ರೀನಿವಾಸ್, ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಪಕ್ಷ ವಿರೋಧಿ ಚಟುವಟಿಕೆ ನಡೆಸಿದವರ ಪತ್ನಿಗೆ ಅಧಿಕಾರ ನೀಡುವುದು ಸರಿಯಲ್ಲ ಎಂದು ಹಿರಿಯ ನಾಯಕರು ನೀಡಿದ ಸಲಹೆಯನ್ನು ಆಧರಿಸಿ ಪೂರ್ಣಿಮಾ ಹೆಸರನ್ನು ಪಟ್ಟಿಯಿಂದ ಕೈ ಬಿಡಲಾಗಿದೆ ಎಂದು ತಿಳಿದು ಬಂದಿದೆ.

ಎಚ್.ನಾಗೇಶ್ ಬೆಂಬಲಿಗರ ಆಕ್ರೋಶ

ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬರಲು ಮುಳಬಾಗಿಲು ಕ್ಷೇತ್ರದ ಪಕ್ಷೇತರ ಶಾಸಕ ಎಚ್.ನಾಗೇಶ್ ಪಾತ್ರವು ಪ್ರಮುಖವಾಗಿದೆ. ದಲಿತ ಬಲಗೈ ಸಮುದಾಯದ ಪ್ರಮುಖ ನಾಯಕರಾಗಿದ್ದಾರೆ. ಅವರನ್ನು ಸಚಿವ ಸಂಪುಟದಿಂದ ಯಾವುದೆ ಕಾರಣಕ್ಕೂ ಕೈ ಬಿಡಬಾರದು ಎಂದು ನಾಗೇಶ್ ಬೆಂಬಲಿಗರು ಮುಖ್ಯಮಂತ್ರಿ ಯಡಿಯೂರಪ್ಪರನ್ನು ಒತ್ತಾಯಿಸಿದ್ದಾರೆ.

ಗೃಹ ಕಚೇರಿ ಕೃಷ್ಣಾ ಬಳಿ ಮಾತನಾಡಿದ ಎಚ್.ನಾಗೇಶ್ ಬೆಂಬಲಿಗರು, ಈ ಸರಕಾರ ರಚನೆಯಾಗಲು 17 ಜನ ಶಾಸಕರೊಂದಿಗೆ ಕೈ ಜೋಡಿಸಿ ಮೈತ್ರಿ ಸರಕಾರದಲ್ಲಿ ತಾವು ಹೊಂದಿದ್ದ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದೀಗ ಅವರನ್ನೇ ಸಚಿವ ಸ್ಥಾನದಿಂದ ಕೈ ಬಿಡುವುದು ಎಷ್ಟರಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.

ನಾಗೇಶ್ ನೇತೃತ್ವದಲ್ಲಿ ಕೋಲಾರದಲ್ಲಿ ಈ ಬಾರಿ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅತೀ ಹೆಚ್ಚು ಸದಸ್ಯರು ಆಯ್ಕೆಯಾಗುವಂತಾಯಿತು. ಒಂದು ವೇಳೆ ಅವರನ್ನು ಸಂಪುಟದಿಂದ ಕೈ ಬಿಟ್ಟರೆ ಕೋಲಾರದಲ್ಲಿ ಬಿಜೆಪಿ ವಿರುದ್ಧ ನಾವು ಕೆಲಸ ಮಾಡಬೇಕಾಗುತ್ತದೆ ಎಂದು ಬೆಂಬಲಿಗರು ಎಚ್ಚರಿಕೆ ನೀಡಿದರು.

ಬಿಜೆಪಿ ಸರಕಾರಕ್ಕೆ ಬೆಂಬಲ ನೀಡುವ ಸಂದರ್ಭದಲ್ಲಿ ಮೂರು ವರ್ಷ ನೀವು ಸಚಿವರಾಗಿರುತ್ತೀರಾ ಎಂದು ಯಡಿಯೂರಪ್ಪ, ನಾಗೇಶ್ ಅವರಿಗೆ ಭರವಸೆ ನೀಡಿದ್ದರು. ಈಗ ಅವರನ್ನು ಸಂಪುಟದಿಂದ ಕೈ ಬಿಟ್ಟರೆ ಯಡಿಯೂರಪ್ಪ ಅವರನ್ನು ‘ವಚನಭ್ರಷ್ಟ ಮುಖ್ಯಮಂತ್ರಿ’ ಎಂದು ಪಟ್ಟ ಕಟ್ಟಬೇಕಾಗುತ್ತದೆ ಎಂದು ನಾಗೇಶ್ ಬೆಂಬಲಿಗರು ಕಿಡಿಗಾರಿದರು.

ಯೋಗೇಶ್ವರ್-ರೆಡ್ಡಿ ಭೇಟಿ

ಸಚಿವ ಸಂಪುಟಕ್ಕೆ ಸೇರ್ಪಡೆಯಾಗುವ ನಿರೀಕ್ಷೆಯನ್ನು ಹೊಂದಿರುವ ವಿಧಾನಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್, ಶಾಸಕ ಮುನಿರತ್ನ ನಾಯ್ಡು ಹಾಗೂ ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದ ಶಾಸಕ ಜಿ.ಸೋಮಶೇಖರ ರೆಡ್ಡಿ ಮಂಗಳವಾರ ಸಂಜೆ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರನ್ನು ಭೇಟಿ ಮಾಡಿ ಚರ್ಚೆ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News