ಐಎಂಎ ವಂಚನೆ ಪ್ರಕರಣ: ಹೇಮಂತ್ ನಿಂಬಾಳ್ಕರ್, ಅಜಯ್ ಹಿಲೋರಿ ಸೇರಿ ಹಲವರಿಗೆ ಸಂಕಷ್ಟ

Update: 2021-01-12 16:38 GMT

ಬೆಂಗಳೂರು, ಜ.12: ಐಎಂಎ ಬಹುಕೋಟಿ ವಂಚನೆ ಪ್ರಕರಣ ಸಂಬಂಧ ಕಂದಾಯ ಇಲಾಖೆಗೆ ಪತ್ರ ಬರೆದಿರುವ ಸಕ್ಷಮ ಪ್ರಾಧಿಕಾರದ ವಿಶೇಷಾಧಿಕಾರಿ ಹರ್ಷಗುಪ್ತಾ, ಆರೋಪಿಗಳ ಆಸ್ತಿ ಜಪ್ತಿ ಮಾಡುವ ಕುರಿತು ಉಲ್ಲೇಖಿಸಿದ್ದಾರೆ.

ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಗಳ ಠೇವಣಿದಾರರ ಹಿತರಕ್ಷಣಾ ಕಾಯ್ದೆ (ಕೆಪಿಐಡಿ)-2004 ಪ್ರಕಾರ 1 ರಿಂದ 23 ಆರೋಪಿಗಳ ಆಸ್ತಿ ಮಧ್ಯಂತರ ಜಪ್ತಿ ಮಾಡಲಾಗಿದೆ. ಆರೋಪಿಗಳ ಸಂಖ್ಯೆ 24ರಿಂದ 28ರ ಆಸ್ತಿ ಜಪ್ತಿಗೆ ಕ್ರಮ ಕೈಗೊಂಡಿಲ್ಲ. ಹೀಗಾಗಿ, ಸರಕಾರ ಸಿಬಿಐನಿಂದ ಅಗತ್ಯ ವರದಿ ಪಡೆಯಬೇಕು. ಜಪ್ತಿ ಮಾಡಿಕೊಳ್ಳಬೇಕಾದ ಆಸ್ತಿಗಳ ಬಗ್ಗೆ ವರದಿ ನೀಡುವಂತೆ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.

ಈಗಾಗಲೇ ಹಗರಣದ ಪ್ರಮುಖ ರೂವಾರಿ ಮುಹಮ್ಮದ್ ಮನ್ಸೂರ್ ಖಾನ್ ಸೇರಿದಂತೆ ಬಹುತೇಕರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಆದರೆ, ಆರೋಪಿತ ಸ್ಥಾನದಲ್ಲಿರುವ ಪೊಲೀಸ್ ಅಧಿಕಾರಿಗಳಾದ ಸಿಐಡಿ ಡಿವೈಎಸ್ಪಿ ಶ್ರೀಧರ್, ಐಪಿಎಸ್ ಅಧಿಕಾರಿಗಳಾದ ಹೇಮಂತ್ ನಿಂಬಾಳ್ಕರ್, ಅಜಯ್ ಹಿಲೋರಿ, ಇನ್‍ಸ್ಪೆಕ್ಟರ್ ರಮೇಶ್, ಸಬ್‍ಇನ್‍ಸ್ಪೆಕ್ಟರ್ ಗೌರಿಶಂಕರ್‍ ಆಸ್ತಿಗಳ ಮಾಹಿತಿ ಪಡೆಯುವಂತೆ ಕೋರಿ ಪತ್ರ ಬರೆಯಲಾಗಿದೆ ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News