ಪಠ್ಯ ಕಡಿತ ಕ್ರಮ ಗ್ರಾಮೀಣ ಮಕ್ಕಳಿಗೆ ಮಾರಕ: ಶಿಕ್ಷಣ ತಜ್ಞ ನಿರಂಜನಾರಾಧ್ಯ

Update: 2021-01-12 16:44 GMT

ಬೆಂಗಳೂರು, ಜ.12: ಕೋವಿಡ್ ನೆಪವೊಡ್ಡಿ ರಾಜ್ಯ ಸರಕಾರ ಪಠ್ಯ ಕಡಿತ ಮಾಡಲು ಮುಂದಾಗಿರುವುದು ಸರಿಯಲ್ಲ. ಇದು ಗ್ರಾಮೀಣ ಮಕ್ಕಳಿಗೆ ಮಾರಕವಾಗಲಿದೆ ಎಂದು ಶಿಕ್ಷಣ ತಜ್ಞ ನಿರಂಜನಾರಾಧ್ಯ ಕಳವಳ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಈಗಾಗಲೇ ಸಿಬಿಎಸ್ಸಿ, ಐಸಿಎಸ್ಸಿ ಪಠ್ಯಗಳನ್ನು ಹೋಲಿಸಿದರೆ ರಾಜ್ಯಮಟ್ಟದ ಪಠ್ಯಪುಸ್ತಕದಲ್ಲಿ ಸಾಕಷ್ಟು ಅಂತರವಿದೆ. ಈಗ ಅದರ ಜತೆಗೆ ರಾಜ್ಯ ಪಠ್ಯ ಕ್ರಮದ ಮಕ್ಕಳು ವಯಸ್ಸಿಗೆ ತರಗತಿಗನುಗುಣವಾದ ಕಲಿಕಾ ಸಾಮರ್ಥ್ಯಗಳನ್ನು ಪಡೆದುಕೊಳ್ಳದಿದ್ದರೆ ಅವರ ಒಟ್ಟು ಶಿಕ್ಷಣದ ಮೇಲೆ ದೀರ್ಘಕಾಲಿಕ ಪರಿಣಾಮ ಬೀರುತ್ತದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಜ.15ರಿಂದ ಎಲ್ಲ ತರಗತಿಗಳು ಪ್ರಾರಂಭವಾಗಿ ಜೂ.30 ರವರೆಗೆ ಶಾಲೆಗಳು ನಡೆದರೆ ಈಗಿರುವ ಪಠ್ಯವನ್ನು ಮುಗಿಸಲು ಕಷ್ಟಸಾಧ್ಯವೇನಲ್ಲ. ಪಠ್ಯ ವಿಷಯದ ವಿಚಾರವನ್ನು ಶಾಲಾ ಹಂತದಲ್ಲಿ ಶಿಕ್ಷರಿಗೆ ಬಿಡುವುದು ಒಳ್ಳೆಯದೆಂದು ಅವರು ಅಭಿಪ್ರಾಯಿಸಿದ್ದಾರೆ.

ಶಿಕ್ಷಕರಿಗೆ ಬೆಂಬಲವಾಗಿ ಶೈಕ್ಷಣಿಕ ವಾಹಿಯಲ್ಲಿನ ಸಿಆರ್ಸಿ, ಬಿಆರ್ಸಿ ಮತ್ತು ಡಯಟ್ ಸಿಬ್ಬಂದಿ ಮುಂದಿನ ಮೂರ್ನಾಲ್ಕು ತಿಂಗಳು ಶಾಲಾ ಹಂತದ ಕಲಿಕೆಯಲ್ಲಿ ತೊಡಗಿದರೆ, ಜೂನ್ ಅಂತ್ಯಕ್ಕೆ ಎಲ್ಲವನ್ನು ಮುಗಿಸಬಹುದು. ಹಾಗೂ ಮಕ್ಕಳನ್ನು ಮುಂದಿನ ತರಗತಿಗಳಿಗೆ ತೇರ್ಗಡೆ ಮಾಡಿ ಶೈಕ್ಷಣಿಕ ವರ್ಷ 2021-22ನ್ನು ಜುಲೈ ತಿಂಗಳಿನಲ್ಲಿ ಪ್ರಾರಂಭಿಸಬಹುದು. ಇವೆಲ್ಲ ಕ್ರಮಗಳನ್ನು ವಹಿಸುವ ಮೂಲಕ ರಾಜ್ಯ ಸರಕಾರ ಪಠ್ಯವನ್ನು ಕಡಿತಗೊಳಿಸದೆ ಮುಂದುವರೆಸಬೇಕೆಂದು ಅವರು ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News