ಬೀಗಮುದ್ರೆ ಘೋಷಣೆಯನ್ನು ಒಪ್ಪಿಕೊಂಡ ಟೊಯೋಟ ಕಿರ್ಲೋಸ್ಕರ್: ಪ್ರಸನ್ನಕುಮಾರ್ ಚಕ್ಕೆರೆ

Update: 2021-01-12 17:55 GMT

ಬೆಂಗಳೂರು, ಜ.12: ಟೊಯೋಟ ಕಿರ್ಲೋಸ್ಕರ್ ಮೋಟಾರ್ ಆಡಳಿತ ಮಂಡಳಿಯು ತನ್ನ ಬೀಗಮುದ್ರೆಯನ್ನು ತೆರವುಗೊಳಿಸಿರುವುದಾಗಿ, ಕೆಲಸಕ್ಕೆ ಬರಲು ಇಚ್ಛಿಸುವ ಕಾರ್ಮಿಕರು ಮುಚ್ಚಳಿಕೆ ನೀಡಿ ಬರಬಹುದು ಎಂದು ಹೇಳಿ ಜ.11ರಂದು ನೋಟಿಸಿನ ಮೂಲಕ ಹಾಗೂ ಪತ್ರಿಕಾ ಹೇಳಿಕೆಯನ್ನು ನೀಡಿದೆ. ಇದರ ಮೂಲಕ ಅವರೇ ಇಷ್ಟು ದಿನ ಕಾರ್ಮಿಕರು ಮುಷ್ಕರ ಮಾಡುತ್ತಿರಲಿಲ್ಲ ನಾವೇ ಬೀಗಮುದ್ರೆಯನ್ನು ಘೋಷಿಸಿದ್ದೇವೆಂದು ಒಪ್ಪಿಕೊಂಡಿದ್ದಾರೆ ಎಂದು ಟೊಯೋಟ ಕಿರ್ಲೋಸ್ಕರ್ ಮೋಟಾರ್ ಕಾರ್ಮಿಕ ಸಂಘದ ಅಧ್ಯಕ್ಷ ಪ್ರಸನ್ನ ಕುಮಾರ್ ಚಕ್ಕೆರೆ ತಿಳಿಸಿದ್ದಾರೆ.

ಆಡಳಿತ ಮಂಡಳಿಯು ತನ್ನ ಅಗತ್ಯತೆಗಳನ್ನು ಕಾರ್ಮಿಕ ಸಂಘದ ಸಹಕಾರವಿಲ್ಲದೆ ಪೂರೈಸಿಕೊಳ್ಳಬಹುದು ಎಂದು ಭಾವಿಸಿರಬಹುದು. ಅವರಿಗೆ ಬೀಗಮುದ್ರೆಯು ಸಮಸ್ಯೆಗಳಿಗೆ ಪರಿಹಾರವಲ್ಲ ಎಂದು ಈಗ ಅರ್ಥವಾಗುತ್ತಿದೆ. ಇಷ್ಟಾದರೂ ಬೀಗಮುದ್ರೆ ತೆರವಿನ ನಂತರ ಮುಚ್ಚಳಿಕೆ ಕೇಳುತ್ತಿರುವುದು, ಕಾನೂನಿನ ಪ್ರಕಾರ ಕಾನೂನು ಬಾಹಿರ ಬೀಗಮುದ್ರೆಯನ್ನು ಮುಂದುವರಿಸಿದಂತೆ ಆಗುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಅವರು ಎರಡನೇ ಬಾರಿಗೆ ಅಂದರೆ ಕಳೆದ ನ.23 ರಿಂದ ಘೋಷಿಸಿದ್ದ ಬೀಗಮುದ್ರೆಯು ಕಾನೂನು ಬಾಹಿರವಾಗಿತ್ತು. ಈ ನಿರ್ಧಾರವು ನಿರರ್ಥಕ ಹಾಗೂ ಸಂಸ್ಥೆಯ ಬೆಳವಣಿಗೆಗೆ ಹಾನಿಕಾರಕ ಎಂದು ಆಡಳಿತ ಮಂಡಳಿ ಅರಿಯುವವರೆಗೂ ಇದು ಹಾಗೆ ಮುಂದುವರಿಯುತ್ತದೆ. ಕೆಲಸದ ಒತ್ತಡದ ನಿಗದಿಯ ವಿಚಾರವಾಗಿ ಆಡಳಿತ ಮಂಡಳಿಯ ಏಕಪಕ್ಷೀಯ ನಿರ್ಧಾರಗಳೆ ಕಾರ್ಮಿಕರ ಪ್ರತಿಭಟನೆಗೆ ಕಾರಣವಾಗಿತ್ತೆ ವಿನಾ ಕಾರ್ಮಿಕರು ಯಾವುದೇ ಮುಷ್ಕರ ಮಾಡುತ್ತಿರಲಿಲ್ಲ ಎಂದು ಅವರು ಹೇಳಿದ್ದಾರೆ.

ಈ ವಿಚಾರವಾಗಿ ಕಾರ್ಮಿಕ ಸಂಘದ ಹಲವಾರು ಪ್ರಯತ್ನಗಳಿಗೆ ಆಡಳಿತ ವರ್ಗವು ಸ್ಪಂದಿಸಲಿಲ್ಲ, ಅದಕ್ಕೆ ಪೂರಕ ದಾಖಲೆಗಳು ನಮ್ಮಲ್ಲಿವೆ. ಆಡಳಿತ ಮಂಡಳಿಯ ನೋಟಿಸಿನ ವಿಷಯಗಳು ನಮಗೆ ಅರ್ಥವಾಗಿದೆ. ಆಡಳಿತ ಮಂಡಳಿಯ ಷರತ್ತುಗಳು ಕಾರ್ಮಿಕ ವಿರೋಧಿಯ ಜೊತೆಗೆ ಸಂಸ್ಥೆಯ ವಿರುದ್ಧವಾಗಿದೆ ಎಂದು ಪ್ರಸನ್ನಕುಮಾರ್ ತಿಳಿಸಿದ್ದಾರೆ.

ಆಡಳಿತ ಮಂಡಳಿಯು ಕಾರ್ಮಿಕ ಸಂಘವನ್ನು ನಿರ್ಲಕ್ಷಿಸಿದರೂ ನಾವು ಸ್ಪಷ್ಟಪಡಿಸುವುದೇನೆಂದರೆ. ಆಡಳಿತ ಮಂಡಳಿಯು ತನ್ನ ಕಾನೂನು ಬಾಹಿರ ಬೀಗಮುದ್ರೆಯನ್ನು ಮುಂದುವರಿಸಿದೆ. ಬೀಗಮುದ್ರೆ ತೆರವಿನ ನಂತರ ಮುಚ್ಚಳಿಕೆ ಕೇಳುವುದು, ಬೀಗಮುದ್ರೆಯನ್ನು ಮುಂದುವರಿಸಿದಂತೆ ಆಗುತ್ತದೆ. ಕಾರ್ಮಿಕರು ಈ ಕಾನೂನು ಬಾಹಿರ ಬೀಗಮುದ್ರೆಯ ಸಮಯದ ಸಂಪೂರ್ಣ ಸಂಬಳಕ್ಕೆ ಅರ್ಹರಾಗಿರುತ್ತಾರೆ. ಅಲ್ಲದೆ, ಕಾರ್ಮಿಕರು ಕಾನೂನು ಬಾಹಿರ ಬೀಗಮುದ್ರೆ ಹಾಗೂ ಮುಚ್ಚಳಿಕೆ ಸಮಯದಲ್ಲಿ ಕೆಲಸಕ್ಕೆ ಹಾಜರಾಗುವುದಿಲ್ಲ ಎಂದು ಅವರು ಹೇಳಿದ್ದಾರೆ.

ಹಾಗೆ ಇಂದು ನಡೆದ ಕಾರ್ಮಿಕ ಸಂಘದ ‘ಸರ್ವ ಸದಸ್ಯರ ಸಭೆ’ಯಲ್ಲಿ ಆಡಳಿತ ಮಂಡಳಿಯು ಮುಚ್ಚಳಿಕೆ ಕೇಳುವ ಮೂಲಕ ಮುಂದುವರಿದ ಕಾನೂನು ಬಾಹಿರ ಬೀಗಮುದ್ರೆಯನ್ನು ಖಂಡಿಸುತ್ತೇವೆ, ಕಾನೂನು ಬಾಹಿರ ಬೀಗಮುದ್ರೆಯ ಸಮಯದ ಸಂಪೂರ್ಣ ಸಂಬಳ ನೀಡಬೇಕು, ಆಡಳಿತ ಮಂಡಳಿಯ ಈ ಸಮಯದ ಎಲ್ಲಾ ಅಮಾನತು ಹಾಗೂ ಶಿಕ್ಷೆಯ ಆದೇಶಗಳನ್ನು ಹಿಂಪಡೆಯಬೇಕು ಹಾಗೂ ನಾವು ಕಾನೂನು ಬಾಹಿರ ಬೀಗಮುದ್ರೆಯ ವಿರುದ್ಧ ನಮ್ಮ ನ್ಯಾಯಸಮ್ಮತ ಪ್ರತಿಭಟನೆಯನ್ನು ಮುಂದುವರೆಸಲು ನಿರ್ಣಯಗಳನ್ನು ತೆಗೆದುಕೊಂಡಿದ್ದೇವೆ ಎಂದು ಪ್ರಸನ್ನಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News