ಕುವೈತ್ ನಲ್ಲಿ ಅನುಮಾನಾಸ್ಪದ ಸಾವು ಪ್ರಕರಣ: ಸೂಕ್ತ ತನಿಖೆಗೆ ಮೃತ ವ್ಯಕ್ತಿಯ ತಂದೆ ಆಗ್ರಹ

Update: 2021-01-12 18:14 GMT

ಶಿವಮೊಗ್ಗ, ಜ.12: ಕುವೈತ್ ನಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಹಾಸಂ ಫರೀದ್ ಸಾಬ್ ನ ಸಾವಿನ ಬಗ್ಗೆ ಸೂಕ್ತ ತನಿಖೆ ನಡೆಸಬೇಕು ಎಂದು ಅವರ ತಂದೆ ಫರೀದ್ ಸಾಬ್ ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನನ್ನ ಮಗ 20 ತಿಂಗಳಿನಿಂದ ಕುವೈತ್ ನ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಡಿಸೆಂಬರ್ 27ರ ರಾತ್ರಿ ಅವನ ಮೊಬೈಲ್ ಗೆ ಕರೆ ಮಾಡಿದಾಗ ಅಲ್ಲಿಯೇ ವಾಸವಿದ್ದ ಕಂಪೆನಿಯವರು ನಿಮ್ಮ ಮಗ ಸಮುದ್ರಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿಸಿದರು. ಆದರೆ ನಾವು ಕುವೈತ್ ನಲ್ಲಿರುವ ನಮ್ಮ ಸ್ನೇಹಿತರಿಗೆ ವಿಷಯ ತಿಳಿಸಿದೆವು. ಅವರು ಹೋಗಿ ನೋಡಿದರೆ ಅವನು ವಾಸವಿರುವ ರೂಮಿನಲ್ಲಿಯೇ ಸಾವು ಕಂಡಿದ್ದು, ರಕ್ತದ ಮಡುವಿನಲ್ಲಿ ಬಿದ್ದಿದ್ದ. ಇದರಿಂದ ನನ್ನ ಮಗ ಆತ್ಮಹತ್ಯೆ ಮಾಡಿಕೊಂಡಿಲ್ಲ, ಇವನನ್ನು ಕೊಲೆ ಮಾಡಲಾಗಿದೆ ಎಂದು ನಮ್ಮ ಕುಟುಂಬದವರಿಗೆ ಸಂಶಯ ಬಂದಿದೆ ಎಂದರು.

ನಾವು ಸಾಗರ ತಾಲೂಕು ತಾಳಗುಪ್ಪ ಸಮೀಪದ ಚೂರಿಕಟ್ಟೆ ಗ್ರಾಮದವರಾಗಿದ್ದು, ನನ್ನ ಮಗನ ಸಾವಿಗೆ ಸಂಬಂಧಿಸಿದಂತೆ ಸಾಗರ ವಿಭಾಗಾಧಿಕಾರಿಗಳಿಗೆ ಹಾಗೂ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದೇವೆ. ಈ ಸಾವಿನ ತನಿಖೆ ನಡೆಸುವಂತೆ ಕುವೈತ್ ದೇಶದ ರಾಯಭಾರಿ ಕಚೇರಿಗೆ ಭಾರತ ಸರ್ಕಾರದ ಮೂಲಕ ಶಿಫಾರಸು ಮಾಡಬೇಕೆಂದು ಒತ್ತಾಯಿಸಿದ್ದೇವೆ ಎಂದರು.

ಆದರೆ ಇದುವೆರೆಗೂ ಸರ್ಕಾರದ ಅಪರ ಮುಖ್ಯಕಾರ್ಯದರ್ಶಿಗಳು ಭಾರತದ ರಾಯಭಾರಿ ಕಚೇರಿ ಅಥವಾ ಭಾರತ ಸರ್ಕಾರದ ಸೂಕ್ತ ಪ್ರಾಧಿಕಾರಕ್ಕೆ ಯಾವುದೇ ರೀತಿಯ ತನಿಖೆಗೆ ಕಳಿಸಿಲ್ಲ. ಮುಖ್ಯಮಂತ್ರಿಗಳು ನಮ್ಮ ಜಿಲ್ಲೆಯವರೇ ಆಗಿದ್ದಾರೆ. ನನ್ನ ಮಗನ ಸಾವಿನ ಬಗ್ಗೆ ತನಿಖೆ ನಡೆಸುವಂತೆ ಭಾರತ ಸರ್ಕಾರದ ಮೂಲಕ ಕುವೈತ್ ಸರ್ಕಾರಕ್ಕೆ ಮನವಿ ಮಾಡಬೇಕು ಎಂದು ಆಗ್ರಹಿಸಿದರು.

ಮೃತನ ಭಾವ ಸಹೀದ್ ಅಹಮ್ಮದ್ ಮಾತನಾಡಿ, ಹಾಸಂ ಫರೀದ್ ಸಾಬ್ ಅವರ ತಂದೆಗೆ ಒಬ್ಬನೇ ಮಗ. ಮೂರು ಜನ ಸಹೋದರಿಯರಿದ್ದಾರೆ. ಈತನ ಸಂಬಳದಿಂದಲೇ ಎಲ್ಲವೂ ಆಗಬೇಕಿತ್ತು. ಈಗ ಕುಟುಂಬ ಆರ್ಥಿಕ ಸಂಕಷ್ಟದಲ್ಲಿದೆ. ಈತನ ಸಾವು ಗೊಂದಲ ಮತ್ತು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಆದರೆ ಕೇಂದ್ರ ಸರ್ಕಾರವಾಗಲೀ ರಾಜ್ಯ ಸರ್ಕಾರವಾಗಲೀ ಸಾವಿನ ತನಿಕೆಗೆ ಸಂಬಂಧಿಸಿದಂತೆ ಇನ್ನೂ ಕೂಡ ಕುವೈತ್ ರಾಯಭಾರಿ ಕಚೇರಿಗೆ ಪತ್ರ ಬರೆದಿಲ್ಲ. ಆದ್ದರಿಂದ ಕೂಡಲೇ ಪತ್ರ ಬರೆದು ಸಾವಿನ ತನಿಖೆ ನಡೆಸಿ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಶಿವಮೊಗ್ಗದ ಪೀಸ್ ಆರ್ಗನೈಸೇಷನ್ ಮುಖ್ಯಸ್ಥ ರಿಯಾಝ್ ಅಹಮ್ಮದ್, ಮೃತನ ತಾಯಿ ಮೆಹಬೂಬಿ, ಅಕ್ಕ ಫರ್ಜಾನ್, ತಾಳಗುಪ್ಪ ಕರವೇ ಸಂಘಟನೆಯ ಓಂಕಾರ್, ಶಫೀವುಲ್ಲಾ ಮುಜೀಬ್ ಸಾಬ್ ಸೇರಿದಂತೆ ಹಲವರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News