ಅಂಗಾರ, ಉಮೇಶ್ ಕತ್ತಿ ಸೇರಿ 7 ನೂತನ ಸಚಿವರಿಂದ ಪ್ರಮಾಣ ವಚನ ಸ್ವೀಕಾರ

Update: 2021-01-13 14:14 GMT

ಬೆಂಗಳೂರು, ಜ.13: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರದ ಸಚಿವ ಸಂಪುಟ ವಿಸ್ತರಣೆಯಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಕ್ಷೇತ್ರದ ಹಿರಿಯ ಬಿಜೆಪಿ ಶಾಸಕ ಎಸ್.ಅಂಗಾರ, ಮಹದೇವಪುರ ಕ್ಷೇತ್ರದ ಶಾಸಕ ಅರವಿಂದ ಲಿಂಬಾವಳಿ, ಬೀಳಗಿ ಶಾಸಕ ಮುರುಗೇಶ್ ನಿರಾಣಿ ಸೇರಿದಂತೆ ಏಳು ಮಂದಿ ನೂತನ ಸಚಿವರು ಸಂಪುಟ ಸೇರ್ಪಡೆಯಾಗಿದ್ದಾರೆ.

ಬುಧವಾರ ರಾಜಭವನದ ಗಾಜಿನ ಮನೆಯಲ್ಲಿ ರಾಜ್ಯಪಾಲ ವಜುಭಾಯಿ ವಾಲ, ಮಧ್ಯಾಹ್ನ 3.50ಕ್ಕೆ ನೂತನ ಸಚಿವರಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಮೊದಲು ಹುಕ್ಕೇರಿ ಕ್ಷೇತ್ರದ ಶಾಸಕ ಉಮೇಶ್ ಕತ್ತಿ ದೇವರು ಹಾಗೂ ರೈತರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ನಂತರ ಬೀಳಗಿ ಶಾಸಕ ಮುರುಗೇಶ್ ನಿರಾಣಿ ದೇವರು ಹಾಗೂ ರೈತರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.

ಮಹದೇವಪುರ ಕ್ಷೇತ್ರದ ಶಾಸಕ ಅರವಿಂದ ಲಿಂಬಾವಳಿ, ವಿಧಾನಪರಿಷತ್ ಸದಸ್ಯರಾದ ಎಂ.ಟಿ.ಬಿ.ನಾಗರಾಜ್, ಆರ್.ಶಂಕರ್, ಸಿ.ಪಿ.ಯೋಗೇಶ್ವರ್ ಹಾಗೂ ಎಸ್.ಅಂಗಾರ ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.

ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಆರ್.ಶಂಕರ್ ಹಾಗೂ ಸಿ.ಪಿ.ಯೋಗೇಶ್ವರ್ ರಾಜ್ಯಪಾಲರು ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪ ಕಾಲಿಗೆ ನಮಸ್ಕರಿಸಿದರು. ಯೋಗೇಶ್ವರ್, ಮುರುಗೇಶ್ ನಿರಾಣಿ, ಎಸ್.ಅಂಗಾರ, ಅರವಿಂದ ಲಿಂಬಾವಳಿ ಕೇಸರಿ ಶಾಲು ಹಾಕಿಕೊಂಡಿದ್ದರೆ, ಆರ್.ಶಂಕರ್ ಹಸಿರು ಶಾಲು ಹಾಕಿಕೊಂಡು ಗಮನ ಸೆಳೆದರು.

ಉಮೇಶ್ ಕತ್ತಿ ಹಾಗೂ ಅರವಿಂದ ಲಿಂಬಾವಳಿ ಮೂರನೆ ಬಾರಿಗೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರೆ, ಎಂ.ಟಿ.ಬಿ.ನಾಗರಾಜ್, ಮುರುಗೇಶ್ ನಿರಾಣಿ, ಸಿ.ಪಿ.ಯೋಗೇಶ್ವರ್ ಹಾಗೂ ಆರ್.ಶಂಕರ್ ಎರಡನೆ ಬಾರಿಗೆ ಸಚಿವ ಸಂಪುಟ ಸೇರ್ಪಡೆಯಾದರು. ಆರು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಹಿರಿಯ ಶಾಸಕ ಎಸ್.ಅಂಗಾರ ಇದೇ ಮೊದಲ ಬಾರಿಗೆ ಸಚಿವರಾಗಿ ಪದಗ್ರಹಣ ಮಾಡಿದರು.

ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಉಪ ಮುಖ್ಯಮಂತ್ರಿಗಳಾದ ಲಕ್ಷ್ಮಣ ಸವದಿ, ಡಾ.ಸಿ.ಎನ್.ಅಶ್ವತ್ಥ ನಾರಾಯಣ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ವಸತಿ ಸಚಿವ ವಿ.ಸೋಮಣ್ಣ, ಕಂದಾಯ ಸಚಿವ ಆರ್.ಅಶೋಕ್ ಸೇರಿದಂತೆ ಸಚಿವರು, ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಸಂಚಾರ ದಟ್ಟಣೆ: ರಾಜಭವನದಲ್ಲಿ ನೂತನ ಸಚಿವರ ಪದಗ್ರಹಣ ಕಾರ್ಯಕ್ರಮ ಇದ್ದ ಹಿನ್ನೆಲೆಯಲ್ಲಿ ರಾಜಭವನದ ಸುತ್ತಲೂ ಭದ್ರತೆಗೆ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿತ್ತು. ಸಚಿವರ ಬೆಂಬಲಿಗರು ರಾಜಭವನದ ಬಳಿ ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರಿಂದ ರಾಜಭವನ, ಇಂಡಿಯನ್ ಎಕ್ಸ್ ಪ್ರೆಸ್ ರಸ್ತೆ, ಚಾಲುಕ್ಯ ವೃತ್ತ, ಇನ್ಫೆಂಟ್ರಿ ರಸ್ತೆ ಸೇರಿದಂತೆ ಸುತ್ತಮುತ್ತಲು ಸಂಚಾರ ದಟ್ಟಣೆ ಉಂಟಾಗಿತ್ತು.

ಕೋವಿಡ್ ಹಿನ್ನೆಲೆಯಲ್ಲಿ ಸುರಕ್ಷಿತ ಅಂತರ ಕಾಯ್ದುಕೊಳ್ಳಬೇಕೆಂಬ ಸರಕಾರದ ಮಾರ್ಗಸೂಚಿಗಳನ್ನು ರಾಜಭವನದ ಹೊರ ಭಾಗದಲ್ಲಿ ಗಾಳಿಗೆ ತೂರಲಾಗಿತ್ತು. ನೂತನ ಸಚಿವರಾಗಿ ಎಂ.ಟಿ.ಬಿ.ನಾಗರಾಜ್ ಪ್ರಮಾಣ ವಚನ ಸ್ವೀಕರಿಸಿ ಸರಕಾರಿ ಕಾರಿನಲ್ಲಿ ರಾಜಭವನದ ಹೊರಗೆ ಬರುತ್ತಿದ್ದಂತೆ ಅವರ ಬೆಂಬಲಿಗರು ಅವರನ್ನು ಕಾರಿನಿಂದ ಕೆಳಗೆ ಇಳಿಸಿ, ಹೆಗಲ ಮೇಲೆ ಹೊತ್ತುಕೊಂಡು ಜೈಕಾರಗಳನ್ನು ಕೂಗಿದರು. ಅದೇ ರೀತಿ ಅರವಿಂದ ಲಿಂಬಾವಳಿ ಸೇರಿದಂತೆ ಇತರ ಸಚಿವರ ಬೆಂಬಲಿಗರು ತಮ್ಮ ನಾಯಕರ ಪರವಾಗಿ ಜೈಕಾರ, ಘೋಷಣೆಗಳನ್ನು ಕೂಗುತ್ತಿದ್ದದ್ದು ಕಂಡು ಬಂತು.

ಸಚಿವರಿಗೆ ಕೊಠಡಿ ಹಂಚಿಕೆ

ಸಚಿವ ಸಂಪುಟಕ್ಕೆ ನೂತನವಾಗಿ ಸೇರ್ಪಡೆಯಾಗಿರುವ ಸಚಿವರಿಗೆ ವಿಧಾನಸೌಧದಲ್ಲಿ ಕೊಠಡಿಗಳನ್ನು ಹಂಚಿಕೆ ಮಾಡಿ ಆದೇಶ ಹೊರಡಿಸಲಾಗಿದೆ.

ಉಮೇಶ್ ಕತ್ತಿ(ವಿಧಾನಸೌಧ ಕೊಠಡಿ ಸಂಖ್ಯೆ 329-329ಎ), ಅರವಿಂದ ಲಿಂಬಾವಳಿ(344-344ಎ), ಎಂ.ಟಿ.ಬಿ.ನಾಗರಾಜ್(330-330ಎ), ಮುರುಗೇಶ್ ನಿರಾಣಿ(307-307ಎ), ಸಿ.ಪಿ.ಯೋಗೇಶ್ವರ್(336-336ಎ), ಎಸ್.ಅಂಗಾರ(252-253ಎ), ಆರ್.ಶಂಕರ್(305-305ಎ)ಗೆ ಕೊಠಡಿಗಳನ್ನು ಹಂಚಿಕೆ ಮಾಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News