ಸಚಿವ ಸ್ಥಾನ ಕೈತಪ್ಪಿದಕ್ಕೆ ಆಕಾಂಕ್ಷಿಗಳಲ್ಲಿ ತೀವ್ರ ಅಸಮಾಧಾನ: ಹತ್ತಕ್ಕೂ ಹೆಚ್ಚು ಶಾಸಕರಿಂದ ಸಿಎಂ ವಿರುದ್ಧ ಆಕ್ರೋಶ

Update: 2021-01-13 14:11 GMT

ಬೆಂಗಳೂರು, ಜ. 13: ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೆ ಮಂತ್ರಿ ಸ್ಥಾನ ಕೈತಪ್ಪಿದ ಹತ್ತಕ್ಕೂ ಹೆಚ್ಚು ಮಂದಿ ಆಕಾಂಕ್ಷಿಗಳು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತವರ ಪುತ್ರ ಬಿ.ವೈ.ವಿಜಯೇಂದ್ರ ಸಹಿತ ಪಕ್ಷದ ವರಿಷ್ಠರ ವಿರುದ್ಧ ಬಹಿರಂಗ ಅಸಮಾಧಾನ ವ್ಯಕ್ತಪಡಿಸಿದ್ದು, ಪಕ್ಷ ನಿಷ್ಠರನ್ನು ಸಂಪೂರ್ಣ ಕಡೆಗಣಿಸಲಾಗಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.

ಹಣ ಕೊಟ್ಟವರಿಗೆ, ಸಿಡಿ ತೋರಿಸಿ ಬ್ಲ್ಯಾಕ್‍ಮೇಲ್ ಮಾಡುವವರಿಗೆ ಸಚಿವ ಸಂಪುಟದಲ್ಲಿ ಸ್ಥಾನ ನೀಡಲಾಗಿದೆ. ಆದರೆ, ಪಕ್ಷದ ನಿಷ್ಠಾವಂತ ಕಾರ್ಯಕರ್ತರು, ಹಿರಿಯ ಶಾಸಕರನ್ನು ಸಂಪೂರ್ಣ ಕಡೆಗಣಿಸಲಾಗಿದೆ. ಜಿಲ್ಲೆ, ಪ್ರಾದೇಶಿಕತೆ, ಸಮುದಾಯಗಳಿಗೆ ಯಾವುದೇ ರೀತಿಯ ಪ್ರಾತಿನಿಧ್ಯ ನೀಡಿಲ್ಲ ಎಂದು ಹಿರಿಯ ಶಾಸಕರು, ಸಿಎಂ ಬಿಎಸ್‍ವೈ ವಿರುದ್ಧ ಬಹಿರಂಗವಾಗಿಯೇ ಕಿಡಿಕಾರಿದ್ದಾರೆ.

ವಿಜಯಪುರದ ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಚಿತ್ರದುರ್ಗ ನಗರ ಕ್ಷೇತ್ರ ಜಿ.ಎಚ್.ತಿಪ್ಪಾರೆಡ್ಡಿ, ಹರಪ್ಪನಹಳ್ಳಿಯ ಕರುಣಾಕರ ರೆಡ್ಡಿ, ಕೃಷ್ಣರಾಜ ಕ್ಷೇತ್ರದ ಎಸ್.ಎ.ರಾಮದಾಸ್, ಸುರಪುರ ರಾಜುಗೌಡ, ಬೊಮ್ಮನಹಳ್ಳಿಯ ಸತೀಶ್ ರೆಡ್ಡಿ, ಹುಬ್ಬಳ್ಳಿ-ಧಾರವಾಡ ಪಶ್ಚಿಮ ಕ್ಷೇತ್ರ ಅರವಿಂದ ಬೆಲ್ಲದ್, ಬೆಳಗಾವಿ ದಕ್ಷಿಣ ಕ್ಷೇತ್ರದ ಅಭಯ್ ಪಾಟೀಲ್, ಹೊನ್ನಾಳಿ ಕ್ಷೇತ್ರದ ಎಂ.ಪಿ.ರೇಣುಕಾಚಾರ್ಯ, ಬಳ್ಳಾರಿ ನಗರದ ಸೋಮಶೇಖರ್ ರೆಡ್ಡಿ, ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಸೇರಿದಂತೆ ಹಲವು ಮಂದಿ ಶಾಸಕರು ಯಡಿಯೂರಪ್ಪ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

'ಸಿಡಿ' ಬಾಂಬ್ ಸಿಡಿಸಿದ ಯತ್ನಾಳ್: ಸಿಎಂ ಯಡಿಯೂರಪ್ಪ ಹಣ ಕೊಟ್ಟವರಿಗೆ, ಸಿಡಿ ಇಟ್ಟುಕೊಂಡು ಬ್ಲ್ಯಾಕ್‍ಮೇಲ್ ಮಾಡುವವರಿಗೆ ಮಂತ್ರಿ ಸ್ಥಾನ ನೀಡಿದ್ದಾರೆ. ಇವರಿಗೆ ಕನಿಷ್ಠ ನೈತಿಕತೆ ಇದ್ದರೆ ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಬಸನಗೌಡ ಪಾಟೀಲ್ ಯತ್ನಾಳ್ ಇಂದಿಲ್ಲಿ ಆಗ್ರಹಿಸಿದ್ದಾರೆ.

ಮೊದಲೆಲ್ಲಾ ಪಕ್ಷಕ್ಕೆ ದುಡಿದವರು, ಜಾತಿವಾರು, ಜಿಲ್ಲಾವಾರು ಕೋಟಾ ಇರುತ್ತಿತ್ತು. ಆದರೆ, ಇಂದು ಸಿಎಂ ಪುತ್ರ ವಿಜಯೇಂದ್ರಗೆ ಹಣ ಕೊಟ್ಟವರು ಮತ್ತು ಸಿಡಿ ಇಟ್ಟುಕೊಂಡು ಬ್ಲ್ಯಾಕ್‍ಮೇಲ್ ಮಾಡುವವರಿಗೆ ಮಂತ್ರಿ ಸ್ಥಾನ ನೀಡಲಾಗಿದೆ ಎಂದು ಯತ್ನಾಳ್, ಸಂಪುಟ ವಿಸ್ತರಣೆ ಬೆನ್ನಲ್ಲೆ ನೂತನ ಸಚಿವರಾದ ಮುರುಗೇಶ್ ನಿರಾಣಿ, ಸಿ.ಪಿ.ಯೋಗೇಶ್ವರ್ ಅವರ ಹೆಸರು ಉಲ್ಲೇಖಿಸದೆ ತೀವ್ರ ವಾಗ್ದಾಳಿ ನಡೆಸಿದರು.

ಯಡಿಯೂರಪ್ಪರ ರಕ್ತ ಸಂಬಂಧಿಯೊಬ್ಬರ ಮುಖಾಂತರ ಬಿಎಸ್‍ವೈ ಅವರ ಸಿಡಿ ವಿಚಾರ ಇಟ್ಟುಕೊಂಡು ಬ್ಲ್ಯಾಕ್‍ಮೇಲ್ ಮಾಡಿ ಮಂತ್ರಿಗಿರಿ ಗಿಟ್ಟಿಸಿಕೊಂಡಿದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪ ಸಮಸ್ತ ಲಿಂಗಾಯತ ವೀರಶೈವ ಸಮುದಾಯದ ಮರ್ಯಾದೆ ತೆಗೆಯುತ್ತಿದ್ದಾರೆ ಎಂದರು.

ರಾಜೀನಾಮೆ ನೀಡಬೇಕು: ಕುರ್ಚಿಗೆ ಕುತ್ತು ಬಂದಾಗ ಕಾಪಾಡಿಕೊಳ್ಳುವ ದೃಷ್ಟಿಯಿಂದಲೇ ಮಠಗಳಿಗೆ ಹಣ ನೀಡುತ್ತಿದ್ದಾರೆ. ಮಠಗಳಿಗೆ 83 ಕೋಟಿ ರೂ.ಹಣ ಕೊಟ್ಟಿದ್ದು ಇದೇ ಕಾರಣಕ್ಕೆ ಎಂದು ಈಗ ಗೊತ್ತಾಗುತ್ತಿದೆ. ಇವರಿಗೆ ಕನಿಷ್ಠ ನೈತಿಕತೆ ಇದ್ದರೆ ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಯತ್ನಾಳ್ ಆಗ್ರಹಿಸಿದರು.

ರಾಜ್ಯದಲ್ಲಿ ವಿಪಕ್ಷ ಇಲ್ಲ. ಬಿಎಸ್‍ವೈ ಮತ್ತವರ ಪುತ್ರ ವಿಜಯೇಂದ್ರ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಸೇರಿದಂತೆ ಎಲ್ಲರನ್ನು ಖರೀದಿ ಮಾಡಿದ್ದು, ಹೊಂದಾಣಿಕೆ ಮಾಡಿಕೊಳ್ಳಲಾಗಿದೆ. ಸಂಕ್ರಮಣ ಉತ್ತರಾಯಣದಿಂದಲೇ ಸಿಎಂ ಯಡಿಯೂರಪ್ಪ ಅಧಃಪತನ ಆರಂಭವಾಗಲಿದೆ ಎಂದು ಯತ್ನಾಳ್ ತಮ್ಮದೇ ದಾಟಿಯಲ್ಲೆ ಆಕ್ರೋಶ ಹೊರಹಾಕಿದರು.

ನಮ್ಮ ಬ್ಯಾಗ್ ಹಿಡಿದು ತಿರುಗಾಡುತ್ತಿದ್ದ: ಯಾರು ಈ ಸೈನಿಕ. ಆತನ ಸಾಧನೆ ಏನ್ರಿ? ಆತನೊಬ್ಬ 420. ನಿಮ್ಮ ಮಾಜಿ ಪಿ.ಎ. ಸಂತೋಷ್ ಮತ್ತು ಸಿ.ಪಿ. ಯೋಗೇಶ್ವರ್ ನಿಮ್ಮನ್ನು ಏನಾದರೂ ಬ್ಲ್ಯಾಕ್‍ಮೇಲ್ ಮಾಡುತ್ತಿದ್ದಾರಾ? ಎಂದು ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಮೈಸೂರಿನಲ್ಲಿ ಸಿಎಂ ಬಿಎಸ್‍ವೈ ಅವರನ್ನು ಖಾರವಾಗಿ ಪ್ರಶ್ನಿಸಿದರು.

ನಾವೆಲ್ಲ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮುಂಬೈಗೆ ತೆರಳಿದ್ದ ವೇಳೆ ಸಿ.ಪಿ. ಯೋಗೇಶ್ವರ್ ನಮ್ಮ ಬ್ಯಾಗ್ ಹಿಡಿದುಕೊಂಡು ತಿರುಗಾಡುತ್ತಿದ್ದ. ಬಿಎಸ್‍ವೈ ಅವರು ನಮಗೆ ಕೊಟ್ಟ ಮಾತು ಉಳಿಸಿಕೊಳ್ಳುವಲ್ಲಿ ವಿಫಲರಾಗಿದ್ದು, ಅವರು ತಮ್ಮ ನಾಲಿಗೆ ಮೇಲೆ ನೀತಿಲ್ಲ. ನಿವೇಶನ ಕೊಡಿಸುವ ನೆಪದಲ್ಲಿ ಸಾವಿರಾರು ಜನರಿಗೆ ಮೋಸ ಮಾಡಿದ ‘ವಂಚಕ' ಯೋಗೇಶ್ವರ್ ಗೆ ಸಂಪುಟದಲ್ಲಿ ಸ್ಥಾನ ನೀಡಿದ್ದಾರೆಂದು ಲೇವಡಿ ಮಾಡಿದರು.

ಆಕ್ರೋಶ: ಸಚಿವ ಸಂಪುಟ ವಿಸ್ತರಣೆಗೆ ನನ್ನ ಸಂಪೂರ್ಣ ಅಸಮಾಧಾನವಿದ್ದು, ನಮ್ಮನ್ನು ಕಡೆಗಣಿಸಿದ ಕುರಿತು ಹೈಕಮಾಂಡ್ ನಾಯಕರನ್ನು ಭೇಟಿಯಾಗಿ ಚರ್ಚೆ ನಡೆಸುತ್ತೇನೆ ಎಂದು ಸಚಿವ ಸ್ಥಾನದ ಆಕಾಂಕ್ಷಿ ಹಾಗೂ ಶಾಸಕ ಅರವಿಂದ ಬೆಲ್ಲದ್ ರಾಜಭವನದಲ್ಲಿ ಕಿಡಿಕಾರಿದರು.

2008ರಲ್ಲಿಯೂ ಸಿಎಂ ಮೇಲೆ ಒತ್ತಡ ತಂತ್ರ ಅನುಸರಿಸುವವರಿಗೆ ಅವಕಾಶ ಕಲ್ಪಿಸಿದ್ದರು. ಇಂದೂ ಅದೇ ರೀತಿಯಲ್ಲಿ ಮಂತ್ರಿಮಂಡಲ ವಿಸ್ತರಣೆ ಮಾಡಿದ್ದಾರೆ. ಕೆಲಸ ನಿರ್ವಹಿಸುವ ಉತ್ಸಾಹಿ ಯುವಕರಿಗೆ, ಪಕ್ಷ ನಿಷ್ಠರಿಗೆ ಸಂಪುಟದಲ್ಲಿ ಸ್ಥಾನ ನೀಡದೆ ಅನ್ಯಾಯ ಮಾಡಲಾಗಿದೆ ಎಂದು ಬೆಲ್ಲದ್ ಅಳಲು ತೋಡಿಕೊಂಡರು.

ನಾನು ಪಕ್ಷದ ಶಾಸಕನಾಗಿ, ಪಕ್ಷ ನನ್ನ ತಾಯಿ, ಅದರ ಘನತೆ ನನ್ನ ಕರ್ತವ್ಯ ಎಂದು ಅರಿತವನು. ನಾನೊಬ್ಬ ನಿಜವಾದ ಸ್ವಯಂಸೇವಕ, ಅನ್ಯ ಮಾರ್ಗದಲ್ಲಿ ಸಚಿವನಾಗುವುದು ನನ್ನ ಆತ್ಮಸಾಕ್ಷಿಗೆ ವಿರುದ್ಧವಾದುದು. ಹಳೆಯ ಮೈಸೂರು ಪ್ರಾಂತ್ಯಕ್ಕೆ ಆದ ಅನ್ಯಾಯ. ಜಿಲ್ಲೆಯ ಬೇರೆ ಯಾರನ್ನಾದರೂ ಮಂತ್ರಿ ಮಾಡಬಹುದಿತ್ತು

-ಎಸ್.ಎ.ರಾಮದಾಸ್, ಕೃಷ್ಣರಾಜ ಕ್ಷೇತ್ರದ ಶಾಸಕ ಮೈಸೂರು

‘ಯಡಿಯೂರಪ್ಪನವರೇ ಮಂತ್ರಿಮಂಡಲ ವಿಸ್ತರಣೆಯಲ್ಲಿ ಸಚಿವರ ಆಯ್ಕೆ ಪ್ರಕ್ರಿಯೆಯ ಮಾನದಂಡಗಳೇನು? ನಿಮಗೆ, ನಮ್ಮ ರಾಜ್ಯ ಮತ್ತು ರಾಷ್ಟ್ರದ ನಾಯಕರುಗಳಿಗೆ ನಿಷ್ಠಾವಂತ ಯುವ ಕಾರ್ಯಕರ್ತರು ಕಾಣುತ್ತಿಲ್ಲವೆ? ನಮ್ಮ ಕಷ್ಟ ನಷ್ಟಗಳನ್ನು ಆಲಿಸುತ್ತಿದ್ದ ಅನಂತಕುಮಾರ್ ಜಿರವರ ಇಲ್ಲದಿರುವಿಕೆ ಎದ್ದು ಕಾಣುತ್ತಿದೆ'

-ಸತೀಶ್ ರೆಡ್ಡಿ, ಬೊಮ್ಮನಹಳ್ಳಿ ಕ್ಷೇತ್ರದ ಶಾಸಕ

‘ನನಗೆ ಸಚಿವ ಸ್ಥಾನ ನೀಡದೇ ಇರುವುದರಿಂದ ಹೊನ್ನಾಳಿ ಕ್ಷೇತ್ರದ ಜನರಿಗೆ ನೋವಾಗಿದೆ. ಸಾಮಾಜಿಕವಾಗಿ ನ್ಯಾಯ ಕೊಡಬೇಕು, ಗೆದ್ದವರಿಗೆ ಅವಕಾಶ ನೀಡಬೇಕು. ಎಂಟಿಬಿ ನಾಗರಾಜ್ ಹಾಗೂ ಆರ್.ಶಂಕರ್ ಗೆ ಕೊಟ್ಟಿದ್ದಕ್ಕೆ ಬೇಸರ ಇಲ್ಲ, ಆದರೆ, ಸೋತವರಿಗೆ ಕೊಟ್ಟಿದ್ದಕ್ಕಾಗಿ ಬೇಸರವಾಗಿದೆ. ಉಸ್ತುವಾರಿ ಅರುಣ್ ಸಿಂಗ್‍ರನ್ನು ಭೇಟಿ ಮಾಡಿ ಚರ್ಚಿಸಿದ್ದು, ಮುಂದಿನ ದಿನಗಳಲ್ಲಿ ಸರಿಪಡಿಸುವ ಭರವಸೆ ನೀಡಿದ್ದಾರೆ. ಆದರೆ, ನಾನು ಸಚಿವ ಸ್ಥಾನಕ್ಕಾಗಿ ಲಾಬಿ ಮಾಡಿಲ್ಲ'

-ಎಂ.ಪಿ.ರೇಣುಕಾಚಾರ್ಯ. ಸಿಎಂ ರಾಜಕೀಯ ಕಾರ್ಯದರ್ಶಿ, ಹೊನ್ನಾಳಿ ಶಾಸಕ

‘ಸರಕಾರದಲ್ಲಿ ಪದೇ ಪದೆ ಸಚಿವರಾದವರನ್ನು ಬದಲಾಯಿಸುವ ಮೂಲಕ ಹೊಸಬರಿಗೆ, ಪ್ರದೇಶವಾರು, ಹಿರಿತನದ ಆಧಾರದಲ್ಲಿ ಸ್ಥಾನ ನೀಡುವಂತಾಗಬೇಕು. 20 ತಿಂಗಳ ಅವಧಿ ಬಳಿಕ ಹಾಲಿ ಇರುವ ಎಲ್ಲ ಸಚಿವರನ್ನ ತೆಗೆದು ಹೊಸಬರಿಗೆ ಅವಕಾಶ ಕೊಡಬೇಕು. ಮುಂದಿನ ದಿನಗಳಲ್ಲಿ ನನಗೂ ಸಚಿವ ಸ್ಥಾನ ಸಿಗುವ ವಿಶ್ವಾಸವಿದೆ'

-ಶಿವನಗೌಡ ನಾಯಕ್, ಶಾಸಕ

ರಾಜ್ಯ ಸಚಿವ ಸಂಪುಟದಲ್ಲಿ ಅರ್ಧಕ್ಕಿಂತ ಹೆಚ್ಚು ಸಚಿವರು ಬೆಂಗಳೂರು, ಬೆಳಗಾವಿ ಜಿಲ್ಲೆಗೆ ಸೇರಿದ್ದಾರೆ. ಎರಡೇ ಜಾತಿಯ ಸಚಿವರು ಸಂಪುಟದಲ್ಲಿ ತುಂಬಿಕೊಂಡಿದ್ದಾರೆ. ಸಂಪುಟದಲ್ಲಿ ಸಮಾನತೆ ಕಾಣದೆ ನಗೆಪಾಟಲಿಗೆ ಈಡಾಗಿದ್ದೇವೆ. ಚುನಾವಣೆಯಲ್ಲಿ ಸೋಲು ಕಂಡಿದ್ದ ಸಿ.ಪಿ.ಯೋಗೇಶ್ವರ್ ಅವರನ್ನು ಸಂಪುಟಕ್ಕೆ ಸೇರಿಸಿಕೊಂಡದ್ದು ಅಚ್ಚರಿ ಮೂಡಿಸಿದೆ. ಪಕ್ಷ ಅಧಿಕಾರಕ್ಕೆ ಬರಲು ಅವರು ಮಾಡಿದ ಸಹಾಯವೇನು ತಿಳಿಯದು. ಚುನಾವಣೆ ಸಂದರ್ಭದಲ್ಲಿ ಪಕ್ಷ ವಿರೋಧಿ ಚಟುವಟಿಕೆ ಮಾಡಿದವರಿಗೂ ಮಣೆ ಹಾಕಲಾಗಿದೆ. 51 ವರ್ಷದಿಂದ ರಾಜಕೀಯದಲ್ಲಿದ್ದೇನೆ. ಐದು ಬಾರಿ ಶಾಸಕನಾಗಿ ಕೆಲಸ ಮಾಡಿದ್ದೇನೆ. ನನ್ನ ಇಡೀ ತಲೆಮಾರನ್ನು ರಾಜಕೀಯಕ್ಕೆ ಸವೆಸಿದ್ದೇನೆ. ರಾಜ್ಯದಲ್ಲಿ ಬಿಜೆಪಿ ಮೂರು ಬಾರಿ ಅಧಿಕಾರಕ್ಕೆ ಬಂದರೂ ಸಚಿವ ಸ್ಥಾನ ಸಿಗದಿರುವುದಕ್ಕೆ ಬೇಸರವಾಗಿದೆ. ಚಿತ್ರದುರ್ಗ ಜಿಲ್ಲೆಗೆ ಹಾಗೂ ಮಧ್ಯ ಕರ್ನಾಟಕಕ್ಕೆ ಅನ್ಯಾಯವಾಗಿದೆ.

-ಜಿ.ಎಚ್.ತಿಪ್ಪಾರೆಡ್ಡಿ, ಚಿತ್ರದುರ್ಗ ಶಾಸಕ

‘ಸ್ಥಾನಮಾನ ಪಡೆಯಲು ಅನ್ಯಮಾರ್ಗಗಳನ್ನು ಅನುಸರಿಸದೆ ಪಕ್ಷಕ್ಕೆ ನಿಷ್ಠೆ ಮತ್ತು ವಿಚಾರಕ್ಕೆ ಬದ್ಧತೆ ಇರುವ ಕಾರ್ಯಕರ್ತರಿಗೆ ಇಂದಿನ ದಿನಮಾನಗಳಲ್ಲಿ ಸ್ಥಾನವಿಲ್ಲ ಅನ್ನುವ ತಾತ್ಕಾಲಿಕ ಇಂದಿನ ಈ ನಡೆ ವಿಷಾದಕರ ಸಂಗತಿ. ವಿಚಾರಕ್ಕೆ ಬದ್ಧತೆ ಮತ್ತು ಪಕ್ಷಕ್ಕೆ ನಿಷ್ಠೆ ಇದು ದೌರ್ಬಲ್ಯ ಅಲ್ಲ'

-ಅಭಯ ಪಾಟೀಲ್, ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News