ಪೊಲೀಸ್ ಸಿಬ್ಬಂದಿಗೆ ವಸತಿ ಗೃಹ ನಿರ್ಮಾಣಕ್ಕೆ 2,000 ಕೋಟಿ ರೂ. ಒದಗಿಸಲು ಸಚಿವ ಸಂಪುಟ ಒಪ್ಪಿಗೆ

Update: 2021-01-13 14:33 GMT

ಬೆಂಗಳೂರು, ಜ. 13: ರಾಜ್ಯದಲ್ಲಿರುವ ಪೊಲೀಸ್ ಕಾನ್‍ಸ್ಟೇಬಲ್‍ಗಳು ಮತ್ತು ಪೊಲೀಸ್ ಸಬ್‍ಇನ್‍ಸ್ಪೆಕ್ಟರ್(ಪಿಎಸ್ಸೈ)ಗಳು ಸೇರಿದಂತೆ ಪೊಲೀಸ್ ಸಿಬ್ಬಂದಿಗೆ 2 ಸಾವಿರ ಕೋಟಿ ರೂ.ವೆಚ್ಚದಲ್ಲಿ ಒಟ್ಟು 10,034 ವಸತಿ ಗೃಹಗಳನ್ನು ನಿರ್ಮಿಸಲು ಸಚಿವ ಸಂಪುಟ ಸಭೆ ನಿರ್ಧರಿಸಿದೆ.

ಬುಧವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪನವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಮೇಲ್ಕಂಡ ತೀರ್ಮಾನ ಮಾಡಲಾಗಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಜೆ.ಸಿ.ಮಾಧುಸ್ವಾಮಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಪೊಲೀಸ್ ವಸತಿ ಗೃಹ ಯೋಜನೆಯಡಿ ಮುಂದಿನ ಐದು ವರ್ಷದ ಅವಧಿಯಲ್ಲಿ ವಸತಿ ಗೃಹ ಪೂರ್ಣಗೊಳಿಸಲು ಉದ್ದೇಶಿಸಿದ್ದು, 9,524 ಪೊಲೀಸ್ ಕಾನ್‍ಸ್ಟೇಬಲ್ ಮತ್ತು 510 ಸಬ್‍ಇನ್‍ಸ್ಪೆಕ್ಟರ್ ಗಳಿಗೆ 2 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ 10,034 ವಸತಿ ಗೃಹಗಳನ್ನು ನಿರ್ಮಿಸಲಾಗುವುದು ಎಂದು ಅವರು ಹೇಳಿದರು.

ಬಸವಣ್ಣನ ಪುತ್ಥಳಿ ನಿರ್ಮಾಣ: ಚಿತ್ರದುರ್ಗದ ಮುರುಘಾ ಮಠದ ಆವರಣದಲ್ಲಿ ಸಮಾಜ ಸುಧಾರಕ ಬಸವಣ್ಣನವರ 325 ಅಡಿ ಎತ್ತರದ ಕಂಚಿನ ಪ್ರತಿಮೆ ನಿರ್ಮಾಣಕ್ಕೆ 20 ಕೋಟಿ ರೂ.ನೀಡಲು ಸಂಪುಟ ತೀರ್ಮಾನಿಸಿದ್ದು, ಈಗಾಗಲೇ 10 ಕೋಟಿ ರೂ. ಒದಗಿಸಲಾಗಿದೆ. ಇದೀಗ 5 ಕೋಟಿ ರೂ.ನೀಡಲು ಸಂಪುಟ ಅನುಮೋದನೆ ನೀಡಿದೆ ಎಂದು ತಿಳಿಸಿದರು.

ಆದಿಚುಂಚನಗಿರಿ ಮಠದ ಬಾಲಗಂಗಾಧರನಾಥ ಸ್ವಾಮೀಜಿ ಜನ್ಮಸ್ಥಳ ಬಾನಂದೂರಿನಲ್ಲಿ ಸಾಂಸ್ಕೃತಿಕ ಮತ್ತು ಪಾರಂಪರಿಕ ಕೇಂದ್ರ ನಿರ್ಮಾಣಕ್ಕೆ 25 ಕೋಟಿ ರೂ.ನೀಡಲು ಸಂಪುಟ ಒಪ್ಪಿಗೆ ನೀಡಿದೆ. ರಾಜ್ಯದಲ್ಲಿನ 270 ಐಟಿಐಗಳ ಪೈಕಿ 150 ಐಟಿಐಗಳನ್ನು ಟಾಟಾ ಟೆಕ್ನಾಲಜಿ ಸಹಯೋಗದಲ್ಲಿ ಅಧುನಿಕರಣಗೊಳಿಸಲು ಸಮ್ಮತಿಸಲಾಗಿದೆ ಎಂದರು.

4,636 ಕೋಟಿ ರೂ.ವೆಚ್ಚದಲ್ಲಿ ಶಿಕ್ಷಣ ಸಂಸ್ಥೆಗಳನ್ನು ಮೇಲ್ದರ್ಜೆಗೇರಿಸಲಾಗುವುದು. ಇದಕ್ಕೆ ಅಗತ್ಯವಿರುವ ಮೊತ್ತದಲ್ಲಿ ಶೇ.88ರಷ್ಟು ಟಾಟಾ ಟೆಕ್ನಾಲಜಿ ಭರಿಸಲಿದ್ದು, ಇನ್ನುಳಿದ ಮೊತ್ತವನ್ನು ಸರಕಾರವು ನೀಡಲಿದೆ. ಟಾಟಾ ಟೆಕ್ನಾಲಜಿ ಹಣ ಪಡೆದುಕೊಳ್ಳಲು 657 ಕೋಟಿ ರೂ.ರಾಷ್ಟ್ರೀಕೃತ ಬ್ಯಾಂಕ್‍ಗಳಿಗೆ ಸರಕಾರ ಭದ್ರತೆ ನೀಡಲಿದೆ ಎಂದು ಅವರು ಹೇಳಿದರು.

ತಿಪಟೂರು ತಾಲೂಕಿನಲ್ಲಿ ಎತ್ತಿನಹೊಳೆ ಮತ್ತು ಹೇಮಾವತಿ ಯೋಜನೆಯಿಂದ 96 ಕೆರೆಗಳಿಗೆ ನೀರು ತುಂಬಿಸಲು 200ಕೋಟಿ ರೂ.ಅನುಮೋದನೆ ನೀಡಲಾಗಿದೆ. ದಾವಣಗೆರೆ ಜಿಲ್ಲೆ ಆನಗೋಡು ಹೋಬಳಿಯ ಹೆಬ್ಬಾಳ ಗ್ರಾಮದಲ್ಲಿ 12 ಎಕರೆ ಭೂಮಿಯನ್ನು ಜಿಎಂಎಂ ಸಂಸ್ಥೆಯವರಿಗೆ ಎಂ-ಸ್ಯಾಂಡ್ ಉತ್ಪನ್ನ ಮತ್ತು ಕ್ರಷರ್ ಘಟಕ ಆರಂಭಿಸಲು 30 ವರ್ಷದ ಅವಧಿಗೆ ಗುತ್ತಿಗೆ ನೀಡಲು ಸಚಿವ ಸಂಪುಟ ಅನುಮೋದನೆ ನೀಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News