ಆಫ್‍ಲೈನ್ ಪರೀಕ್ಷೆ ಪ್ರಶ್ನಿಸಿ ವಿದ್ಯಾರ್ಥಿಗಳಿಂದ ಅರ್ಜಿ: ವಿಟಿಯು, ರಾಜ್ಯ ಸರಕಾರಕ್ಕೆ ಹೈಕೋರ್ಟ್ ನೋಟಿಸ್

Update: 2021-01-13 14:41 GMT

ಬೆಂಗಳೂರು, ಜ.13: ಸೆಮಿಸ್ಟರ್ ಪರೀಕ್ಷೆಗಳನ್ನು ಆಫ್‍ಲೈನ್ ಮೂಲಕ ನಡೆಸುವ ಬದಲು ಆನ್‍ಲೈನ್ ಮೂಲಕ ನಡೆಸಲು ಕೋರಿ ವಿದ್ಯಾರ್ಥಿಗಳು ಸಲ್ಲಿಸಿದ್ದ ಅರ್ಜಿ ಸಂಬಂಧ ಹೈಕೋರ್ಟ್ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಹಾಗೂ ರಾಜ್ಯ ಸರಕಾರಕ್ಕೆ ನೋಟಿಸ್ ಜಾರಿಗೊಳಿಸಿದೆ.

ಈ ಕುರಿತು 120 ವಿದ್ಯಾರ್ಥಿಗಳು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆರ್.ದೇವದಾಸ್ ಅವರಿದ್ದ ಏಕಸದಸ್ಯ ನ್ಯಾಯಪೀಠ, ಈ ನೋಟಿಸ್ ಜಾರಿಗೊಳಿಸಿದೆ.

ಅರ್ಜಿದಾರರ ಪರ ವಾದಿಸಿದ ವಕೀಲೆ ತನ್ವಿ ದುಬೆ ಅವರು, ತಾವು ಪರೀಕ್ಷೆಯನ್ನು ರದ್ದುಗೊಳಿಸಲು ಕೋರುತ್ತಿಲ್ಲ. ಬದಲಿಗೆ ಪರೀಕ್ಷೆ ನಡೆಸುವ ವಿಧಾನವನ್ನಷ್ಟೇ ಮಾರ್ಪಡಿಸಲು ಕೇಳುತ್ತಿದ್ದೇವೆ. ಒಂದು ವೇಳೆ ನಿಗದಿಯಾಗಿರುವಂತೆ ಆಫ್‍ಲೈನ್ ಪರೀಕ್ಷೆ ನಡೆಸಿದರೆ ಸಾವಿರಾರು ವಿದ್ಯಾರ್ಥಿಗಳು ಬೇರೆ ಬೇರೆ ಜಿಲ್ಲೆ, ರಾಜ್ಯಗಳಿಂದ ಬೆಂಗಳೂರಿಗೆ ಬರಬೇಕಾಗುತ್ತದೆ ಎಂದು ಪೀಠಕ್ಕೆ ತಿಳಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಹೈಕೋರ್ಟ್ ಕೂಡ ಆಫ್‍ಲೈನ್ ಮೂಲಕವೇ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ನ್ಯಾಯಾಧೀಶ ಹುದ್ದೆಗಳಿಗೆ ಪರೀಕ್ಷೆ ನಡೆಸುತ್ತಿದೆ. ಹೀಗಾಗಿ ನಿಮ್ಮ ಮನವಿ ಪರಿಗಣಿಸುವುದು ಕಷ್ಟ ಎಂದು ಅಭಿಪ್ರಾಯ ವ್ಯಕ್ತಪಡಿಸಿ, ನೋಟಿಸ್ ಜಾರಿಗೆ ಆದೇಶಿಸಿತು.

ಅರ್ಜಿಯಲ್ಲಿ ಏನಿದೆ: ವಿವಿಯ ನಿರ್ಧಾರ ಯುಜಿಸಿ ಮಾರ್ಗಸೂಚಿಗಳಿಗೂ ವಿರುದ್ಧವಾಗಿದೆ. ಧನಸಹಾಯ ಆಯೋಗ ಕೊರೋನ ಹಿನ್ನೆಲೆಯಲ್ಲಿ ಆನ್‍ಲೈನ್ ಅಥವಾ ಆಫ್‍ಲೈನ್ ಪರೀಕ್ಷೆ ನಡೆಸಬಹುದು ಎಂದು ಸ್ಪಷ್ಟವಾಗಿ ತಿಳಿಸಿದೆ. ಆದರೆ, ವಿಟಿಯು ಆನ್‍ಲೈನ್ ಅವಕಾಶ ನೀಡದೆ, ಕೇವಲ ಆಫ್‍ಲೈನ್‍ನಲ್ಲಿಯೇ ಪರೀಕ್ಷೆಗಳನ್ನು ನಡೆಸಲು ನಿರ್ಧರಿಸಿರುವುದು ನಿಯಮಬಾಹಿರ ಎಂದು ಅರ್ಜಿಯಲ್ಲಿ ನಮೂದಿಸಲಾಗಿದೆ.

ಅಲ್ಲದೇ, ಸೆಮಿಸ್ಟರ್ ಪರೀಕ್ಷೆಯಲ್ಲಿ 12 ವಿಷಯಗಳಿದ್ದು, ಅವುಗಳಿಗೆ ಕನಿಷ್ಠ 2 ರಿಂದ 3 ವಾರ ಪರೀಕ್ಷೆ ನಡೆಸಬೇಕಾಗುತ್ತದೆ. ಪ್ರಸಕ್ತ ಆರ್ಥಿಕ ಬಿಕ್ಕಟ್ಟಿಗೆ ಒಳಗಾಗಿರುವ ವಿದ್ಯಾರ್ಥಿಗಳಿಗೆ ಈ ಸಂದರ್ಭದಲ್ಲಿ ಆಹಾರ, ಸುರಕ್ಷತೆಗೆ ಹೆಚ್ಚಿನ ಹಣ ವ್ಯಯ ಮಾಡುವುದು ಕಷ್ಟ. ಹೀಗಾಗಿ,  ಜ.14ರಿಂದ ನಿಗದಿಯಾಗಿರುವ ಸೆಮಿಸ್ಟರ್ ಪರೀಕ್ಷೆಗಳಿಗೆ ತಡೆ ನೀಡಬೇಕು. ಹಾಗೆಯೇ ವಿವಿಗೆ ಆನ್‍ಲೈನ್ ಮೂಲಕ ಪರೀಕ್ಷೆಗಳನ್ನು ನಡೆಸಲು ನಿರ್ದೇಶಿಸಬೇಕು ಎಂದು ವಿದ್ಯಾರ್ಥಿಗಳು ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News