ಮೈಸೂರು ಡಿಸಿ ರೋಹಿಣಿ ಸಿಂಧೂರಿ ವರ್ತನೆ ಅಕ್ಷಮ್ಯ: ಸಾ.ರಾ.ಮಹೇಶ್

Update: 2021-01-13 14:43 GMT

ಬೆಂಗಳೂರು, ಜ.13: ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರ ವರ್ತನೆ ಅಕ್ಷಮ್ಯ ಮತ್ತು ಖಂಡನೀಯ. ತಾವೊಬ್ಬ ಅತ್ಯಂತ ಪ್ರಾಮಾಣಿಕ ಅಧಿಕಾರಿ ಎಂದು ಬಿಂಬಿಸಿಕೊಳ್ಳುತ್ತಿರುವ ಇವರು ಜನಪ್ರತಿನಿಧಿಗಳ ಮೇಲೆ ಸವಾರಿ ಮಾಡಲು ಹೊರಟಿದ್ದಾರೆ ಎಂದು ಜೆಡಿಎಸ್ ಶಾಸಕ ಸಾ.ರಾ.ಮಹೇಶ್ ಕಿಡಿಗಾರಿದ್ದಾರೆ.

ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಹಾಸನದಲ್ಲಿ ಜಿಲ್ಲಾಧಿಕಾರಿಯಾಗಿದ್ದಾಗ ತಮ್ಮ ದಿಢೀರ್ ವರ್ಗಾವಣೆಗೆ ನ್ಯಾಯ ಕೇಳಲು ಕೆಎಟಿಗೆ ಹೋಗಿದ್ದ ಇದೇ ಅಧಿಕಾರಿ ಮೈಸೂರಿನಲ್ಲಿ ಉಲ್ಟಾ ಹೊಡೆದ ಕಥೆ ಇಡೀ ನಾಡಿಗೆ ಗೊತ್ತಿದೆ. ಇಂಥವರಿಂದ ನಾನು ಪಾಠ ಕಲಿಯಬೇಕಿಲ್ಲ ಎಂದು ಹೇಳಿದ್ದಾರೆ.

‘ತನಗೊಂದು ನ್ಯಾಯ, ಪರರಿಗೊಂದು ನ್ಯಾಯ' ಎನ್ನುವ ಇಂತಹ ಅಧಿಕಾರಿ, ಸಾಂವಿಧಾನಿಕ ಸಂಸ್ಥೆಗಳು, ಸಮಿತಿಗಳಿಗೆ ಯಾವ ರೀತಿ ಅಧಿಕಾರಿಗಳು ಶಿಷ್ಟಾಚಾರ ಪಾಲಿಸಬೇಕೆಂದು ಸರಕಾರ ಹೊರಡಿಸಿರುವ ಸುತ್ತೋಲೆಗಳನ್ನು ಓದಿ ಮೊದಲು ಅರ್ಥಮಾಡಿಕೊಳ್ಳಲಿ ಎಂದು ಅವರು ಹೇಳಿದ್ದಾರೆ.

ಮಾತಿನಲ್ಲಿ ಬ್ರಹ್ಮ ನೀತಿಯಲ್ಲಿ ಕ್ರೋಧಿ, ಈ ಲೋಕದ ಭುಂಜಕರು ನಾ ಹೆಚ್ಚು ತಾ ಹೆಚ್ಚು ಎಂದು ನಡೆದಾಡುವರಯ್ಯ, ನಾನು ನೀನೆಂಬ ಉಭಯವಳಿದು, ತಾನು ತಾನಾದುದ ನಾನಾರನೂ ಕಾಣೆನಯ್ಯ ಝೇಂಕಾರ ನಿಜಲಿಂಗಪ್ರಭುವೆ- ಜಕ್ಕಣಯ್ಯ ಎಂದು ಸಾ.ರಾ.ಮಹೇಶ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News