ಲವ್ ಜಿಹಾದ್ ಮಾಡುವವರ ಕಾಲು ಮುರಿಯಬೇಕು ಎಂದ ಸಚಿವ ಕೆ.ಎಸ್.ಈಶ್ವರಪ್ಪ

Update: 2021-01-13 17:04 GMT

ಚಿಕ್ಕಮಗಳೂರು, ಜ.13: ಲವ್ ಜಿಹಾದ್ ವಿರುದ್ಧದ ಕಾನೂನನ್ನು ರಾಜ್ಯದಲ್ಲಿ ಜಾರಿ ಮಾಡುವುದು ನಿಶ್ಚಿತ. ಇಂತಹ ಕೃತ್ಯ ಎಸಗುವರನ್ನು ಜೈಲಿಗೆ ಕಳಿಸುವುದೂ ನಿಶ್ಚಿತ. ಲವ್ ಜಿಹಾದ್ ಕೃತ್ಯ ಎಸಗುವವರಿಗೆ ಭಯ ಇರಬೇಕು. ಅಂಥವರ ಕಾಲು ಮುರಿಯಬೇಕು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವ ಕೆ.ಎಸ್.ಈಶ್ವರಪ್ಪ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಜಿಲ್ಲಾ ಬಿಜೆಪಿ ಘಟಕ ನಗರದ ನಗರದ ಒಕ್ಕಲಿಗರ ಸಮುದಾಯ ಭವನದಲ್ಲಿ ಬುಧವಾರ ಆಯೋಜಿಸಿದ್ದ ಗ್ರಾ.ಪಂ. ಚುನಾವಣೆಯಲ್ಲಿ ಗೆದ್ದ ಬಿಜೆಪಿ ಪಕ್ಷ ಬೆಂಬಲಿತ ಸದಸ್ಯರಿಗಾಗಿ ಏರ್ಪಡಿಸಿದ್ದ ಜನಸೇವಕ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಲವ್ ಜಿಹಾದ್ ಹೆಸರಿನಲ್ಲಿ ಹಿಂದೂ ಹೆಣ್ಣುಮಕ್ಕಳನ್ನು ಮರಳು ಮಾಡಿ ಅವರನ್ನು ಮಧ್ಯದಲ್ಲಿ ಕೈಬಿಡುವ ಕೆಲಸ ನಿರಂತರವಾಗಿ ನಡೆಯುತ್ತಿದೆ. ನಮ್ಮ ಹಿಂದೂ ಹೆಣ್ಣು ಮಕ್ಕಳೇನು ಬಿಕಾರಿಗಳಲ್ಲ. ಇಂತಹ ಕೃತ್ಯ ನಡೆಸುವರ ಕಾಲು ಮುರಿಯಬೇಕು. ಲವ್ ಜಿಹಾದ್ ನಡೆಸುವರಿಗೆ ಭಯ ಇರಬೇಕು. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಲವ್ ಜಿಹಾದ್ ವಿರುದ್ಧ ಕಾನೂನು ತಂದೇ ತರುತ್ತೇವೆಂದು ತಿಳಿಸಿದರು.

ಮುಸ್ಲಿಂ, ಕ್ರಿಶ್ಚಿಯನ್ ಅವರನ್ನು ಬಿಜೆಪಿ ದೂರ ಇಟ್ಟಿದೆ ಎಂದು ಹೇಳಿ ಕಾಂಗ್ರೆಸ್ ಹಾಳಾಗಿ ಹೋಗಿದೆ. ಮುಸ್ಲಿಂ, ಕ್ರಿಶ್ಚಿಯನ್‍ರಲ್ಲಿ ಎಲ್ಲರೂ ಕೆಟ್ಟವರಿಲ್ಲ. ಇಂತಹ ನೀಚ ಕೃತ್ಯ ಎಸಗುವ ಕೆಲವರಿಂದ ಇಡೀ ಸಮುದಾಯಕ್ಕೆ ಕೆಟ್ಟ ಹೆಸರು ಬರುತ್ತಿದೆ. ನಾವೆಲ್ಲರೂ ಅಣ್ಣ ತಮ್ಮಂದಿರು ಎಂಬ ಭಾವನೆಯಿಂದ ಬಾಳಬೇಕು. ಈ ದೃಷ್ಟಿಯಿಂದ ತ್ರಿಬಲ್ ತಲಾಖ್‍ಅನ್ನು ಸರಕಾರ ನಿಷೇಧಿಸಿದ್ದು, ಕೆಲ ರಾಷ್ಟ್ರಘಾತುಕರು ಅಲ್ಪಸಂಖ್ಯಾತ ಸಮುದಾಯಗಳಿಗೆ ಕೆಟ್ಟ ಹೆಸರು ತರುತ್ತಿದ್ದಾರೆ ಎಂದರು.

ಬಿಜೆಪಿಯವರಿಗೆ ಚುನಾವಣೆ ಬಂದಾಗ ರಾಮಮಂದಿರ ನೆನಪಾಗುತ್ತದೆ ಎಂದು ಕೆಲವರು ನಮ್ಮನ್ನು ಟೀಕೆ ಮಾಡುತ್ತಿದ್ದರು. ರಾಮ ಇಲ್ಲೇ ಹುಟ್ಟಿದ್ದಾನೆ ಎನ್ನಲು ಏನು ಸಾಕ್ಷಿ ಎಂದು ಕೇಳುತ್ತಿದ್ದರು. ಕಾಂಗ್ರೆಸ್‍ನವರು ರಾಮಮಂದಿರ ಕಟ್ಟಲು ಬಿಡಲ್ಲ ಎಂದು ಹೇಳುತ್ತಿದ್ದರು. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ರಾಮಮಂದಿರಕ್ಕೆ ಗುದ್ದಲಿ ಪೂಜೆಯನ್ನೇ ನೆರವೇರಿಸಿದರು ಎಂದು ಕುಟುಕಿದರು.

ಸಿದ್ದರಾಮಯ್ಯ ಅವರು ಗೋಮಾಂಸ ತಿನ್ನುತ್ತೇನೆ ಎನ್ನುತ್ತಾರೆ. ಹನುಮ ಜಯಂತಿ ದಿನ ಕೋಳಿ ಮಾಂಸ ತಿನ್ನುತ್ತಾರೆ. ಏನಾದರೂ ತಿಂದು ಸಾಯಲಿ. ನಮಗೆ ಸಂಬಂಧವಿಲ್ಲ. ಗೋವುಗಳನ್ನು ಶೇ.90ರಷ್ಟು ಜನರು ಪೂಜೆ ಮಾಡುತ್ತಾರೆ. ಜನರು ಪೂಜಿಸುವ ಗೋವುಗಳನ್ನು ಹತ್ಯೆ ಮಾಡುವುದನ್ನು ನಿಷೇಧಿಸಲು ಬಿಜೆಪಿ ಸರಕಾರವೇ ಬರಬೇಕಾಗಿತ್ತಾ ? ಕಾಂಗ್ರೆಸ್ ಸರಕಾರವೇ ಇದನ್ನು ಮಾಡಬಹುದಿತ್ತಲ್ಲ ಎಂದು ಪ್ರಶ್ನಿಸಿದ ಅವರು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಗೋಹತ್ಯೆ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಿ ಎಂದರೆ ಅಂದು ಆರೆಸ್ಸೆಸ್ ಮೇಲೆ ಕ್ರಮಕೈಗೊಳ್ಳುತ್ತೇವೆ ಎನ್ನುತ್ತಿದ್ದರು. ಕಾಂಗ್ರೆಸ್ ಸರಕಾರ ಇಂದು ರಾಜ್ಯದಲ್ಲಿ ನಿರ್ಣಾಮವಾಗಲು ಗೋವಿನ ಶಾಪವೇ ಕಾರಣ. ಗ್ರಾಪಂ ಸದಸ್ಯರು ತಮ್ಮ ಊರುಗಳಲ್ಲಿ ಗೋವು ಕಳ್ಳತನ, ಗೋಹತ್ಯೆಗೆ ಅವಕಾಶ ನೀಡಬಾರದು ಎಂದರು.

ಸಮಾವೇಶದಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಮುಜರಾಯಿ ಇಲಾಖೆ ಸಚಿವ ಕೋಟ ಶ್ರೀನಿವಾಸಪೂಜಾರಿ, ಸಂಸದೆ ಶೋಭಾ ಕರಂದ್ಲಾಜೆ, ರೈತ ಮೋರ್ಚಾ ಅಧ್ಯಕ್ಷ ಹಾಗೂ ರಾಜ್ಯಸಭಾ ಸದಸ್ಯ ವೀರಣ್ಣ ಕಡಾಡಿ, ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ, ವಿಧಾನ ಪರಿಷತ್ ಸದಸ್ಯ ರವಿಕುಮಾರ್, ಸಿಎಂ ರಾಜಕೀಯ ಕಾರ್ಯದರ್ಶಿ ಡಿ.ಎನ್.ಜೀವರಾಜ್, ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಬೆಳ್ಳಿ ಪ್ರಕಾಶ್, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಿ.ಎಸ್.ಸುರೇಶ್, ವಿಧಾನ ಪರಿಷತ್ ಸದಸ್ಯ ಎಂ.ಕೆ.ಪ್ರಾಣೇಶ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಎಚ್ಚರಿಕೆ ನೀಡಿದ ಈಶ್ವರಪ್ಪ 
ರಾಜ್ಯ ಸರಕಾರ ಗೋಹತ್ಯೆ ನಿಷೇಧ ಕಾನೂನು ಜಾರಿಗೆ ತಂದಿದೆ. ಗೋರಕ್ಷಕರಿಗೆ ಪೊಲೀಸರು ತೊಂದರೆ ನೀಡಬೇಡಿ. ಗೂಂಡಾಗಿರಿ, ಕಳ್ಳತನಕ್ಕೆ ಬೆಂಬಲ ನೀಡಬೇಡಿ. ಗೋರಕ್ಷರನ್ನು ಬೆನ್ನು ತಟ್ಟುವುದನ್ನು ಬಿಟ್ಟು ಗೋರಕ್ಷಕರನ್ನು ಬಂಧಿಸಲು ಇದು ಕಾಂಗ್ರೆಸ್ ಸರಕಾರವಲ್ಲ ಎಂದು ಪೊಲೀಸ್ ಇಲಾಖೆಗೂ ಎಚ್ಚರಿಕೆ ನೀಡಿದರು.

ಪಾಕಿಸ್ತಾನ್ ಝಿಂದಾಬಾದ್ ಕೂಗುವ ಸೊಕ್ಕು ಬಂದಿದ್ದು ಕಾಂಗ್ರೆಸ್ಸಿಗರಿಂದ
ಮಂಗಳೂರಿನಲ್ಲಿ 2 ಗ್ರಾ.ಪಂ. ಗೆದ್ದ ಒಂದು ಸಂಘಟನೆಯವರು ಪಾಕಿಸ್ತಾನ್ ಝಿಂದಾಬಾದ್ ಎಂದು ಘೋಷಣೆ ಕೂಗಿದರು. ಇಲ್ಲಿಯ ಅನ್ನ ತಿಂದು ಪಾಕಿಸ್ತಾನ್ ಝಿಂದಾಬಾದ್ ಎಂದು ಕೂಗುತ್ತಾರೆ ಎಂದರೆ ಅವರು ಪಾಕಿಸ್ತಾನಕ್ಕೇ ಹೋಗಲಿ. ಇಂತಹ ರಾಷ್ಟ್ರದ್ರೋಹಿಗಳು ನಿಮ್ಮೂರಲ್ಲೂ ಇರಬಹುದು. ಪಾಕಿಸ್ತಾನ್ ಝಿಂದಾಬಾದ್ ಎಂದು ಕೂಗುವ ಸೊಕ್ಕು ಕಾಂಗ್ರೆಸ್ ಬಳುವಳಿಯಾಗಿದೆ. ಕಾಂಗ್ರೆಸ್‍ನವರು ರಾಷ್ಟ್ರದ್ರೋಹಿಗಳನ್ನು ಬೆಳೆಸಿದ್ದರಿಂದ ಇಂತಹ ಕೂಗು ಕೇಳಿಬರುತ್ತಿದೆ.
- ಈಶ್ವರಪ್ಪ, ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News