ನಿಮ್ಮ ಸರ್ಕಾರದಲ್ಲಿ ಸಮಾನತೆ, ಸಾಮಾಜಿಕ ನ್ಯಾಯವಿಲ್ಲ: ಸಿಎಂ ವಿರುದ್ಧ ಎಚ್.ವಿಶ್ವನಾಥ್ ವಾಗ್ದಾಳಿ

Update: 2021-01-13 17:10 GMT

ಮೈಸೂರು,ಜ.13: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕೊಟ್ಟ ಮಾತಿಗೆ ತಪ್ಪಿದ್ದಾರೆ. ಯಡಿಯೂರಪ್ಪನವರೇ, ನಿಮಗೆ ಸಿದ್ದಲಿಂಗೇಶ್ವರ ಒಳ್ಳೆಯದು ಮಾಡುವುದಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ವಾಗ್ದಾಳಿ ನಡೆಸಿದರು.

ನಗರದಲ್ಲಿ ಮಾಧ್ಯಮದವರೊಂದಿಗೆ ಬುಧವಾರ ಮಾತನಾಡಿದ ಅವರು, ರಾಜ್ಯದಲ್ಲಿ ಯಾವ ನಾಯಕನಿಗೂ ಕೃತಜ್ಞತೆ ಇಲ್ಲ. ಆ ಸಿದ್ದರಾಮಯ್ಯನನ್ನು ಕರೆದುಕೊಂಡು ಬಂದೆ. ಅವರು ನನ್ನ ಹೆಸರು ಹೇಳಲಿಲ್ಲ. ಯಡಿಯೂರಪ್ಪಗೆ ತ್ಯಾಗ ಮಾಡಿದೆ. ಅವರೂ ಹೆಸರು ಹೇಳಲಿಲ್ಲ. ಯಡಿಯೂರಪ್ಪ ತಮ್ಮ ನಾಲಗೆ ತಪ್ಪಿದ್ದಾರೆ. ತಾವು ಕೊಟ್ಟಿದ್ದ ಮಾತು ಕಳೆದುಕೊಂಡಿದ್ದಾರೆ. ಯಾರಿಂದ ಸರ್ಕಾರ ಬಂತು ಎಂದು ಯಡಿಯೂರಪ್ಪ ನೆನಪು ಮಾಡಿಕೊಳ್ಳಬೇಕು. 17 ಜನರ ಭಿಕ್ಷೆಯಲ್ಲಿ ಸರ್ಕಾರ ಇದೆ. ಅವರ ತ್ಯಾಗದಿಂದ ಸರ್ಕಾರ ಬಂದಿದೆ. ಅದನ್ನು ನೆನಪು ಮಾಡಿಕೊಳ್ಳಿ ಎಂದು ಹೇಳಿದರು.

ನಿಮ್ಮ ಸರ್ಕಾರದಲ್ಲಿ ಸಮಾನತೆ ಎಂಬುದಿಲ್ಲ. ಸಾಮಾಜಿಕ ನ್ಯಾಯವಿಲ್ಲ. 33 ಮಂದಿ ಸಚಿವರಲ್ಲಿ 13 ವೀರಶೈವರು, 11 ಮಂದಿ ಒಕ್ಕಲಿಗರು, 4 ಜನ ಕುರುಬರಿಗೆ ಮಂತ್ರಿ ಸ್ಥಾನ ಕೊಟ್ಟಿದ್ದೀರ. ಪರಿಶಿಷ್ಟ ಸಮುದಾಯದ ನಾಗೇಶ್ ರನ್ನು ಯಾಕೆ ಸಚಿವ ಸ್ಥಾನದಿಂದ ತೆಗೆಯುತ್ತಿದ್ದೀರಿ? ಮುನಿರತ್ನ ಬದಲು  ಸಿ.ಪಿ.ಯೋಗೇಶ್ವರ್ ಗೆ ಯಾಕೆ ಸಚಿವ ಸ್ಥಾನ ನೀಡುತ್ತಿದ್ದೀರಿ ಎಂದು ಪ್ರಶ್ನಿಸಿದರು.

ಕೋರ್ಟ್ ತೀರ್ಪಿಗೂ ನನಗೆ ಮಂತ್ರಿ ಸ್ಥಾನ ಕೊಡೋದಕ್ಕೂ ಸಂಬಂಧ ಇಲ್ಲ. ಆ ಸೈನಿಕನ ಮೇಲೆ 420 ಕೇಸುಗಳಿವೆ. ಅವನಿಗೆ ಸಚಿವ ಸ್ಥಾನ ನೋಡೋಕೆ ದುಂಬಾಲು ಬಿದ್ದಿದ್ದೀರಾ. ಯಾಕೆ ಅವನಿಗೆ ಸಚಿವಸ್ಥಾನ ನೀಡಬೇಕು. ನೀವೆನಾದರೂ ಅವನ ಬ್ಲ್ಯಾಕ್ ಮೇಲ್ ಗೆ ಸಿಲುಕಿಕೊಂಡಿದ್ದೀರಾ. ಅವನಿಗೆ ಸಚಿವ ಸ್ಥಾನ ಕೊಡಲು ಮುಂದಾಗಿದ್ದೀರಿಲ್ಲ. ಅವನು ರಾಜೀನಾಮೆ ಕೊಟ್ಟು ನಿಮ್ಮ ಸರ್ಕಾರ ರಚನೆಗೆ ಕಾರಣನಾಗಿದ್ದನಾ? ಅಥವಾ ನೀವೇ ಅವನ ಕೈಗೊಂಬೆ ಆಗಿದ್ದೀರಾ ಎಂದು ಹರಿಹಾಯ್ದರು.

ಯಡಿಯೂರಪ್ಪ ಮನೆಯಲ್ಲಿ ಕುಟುಂಬ ರಾಜಕಾರಣ ನಡೆಯುತ್ತಿದೆ. ಸಿ.ಪಿಯೋಗೇಶ್ವರ್ ಮಂತ್ರಿ ಆಗೋಕೆ ವಿಜಯೇಂದ್ರ ಕಾರಣ. ಅದೇ ರೀತಿ ಯಡಿಯೂರಪ್ಪ ನಿರ್ಣಾಮ ಆಗೋಕೂ ವಿಜಯೇಂದ್ರನೇ ಕಾರಣನಾಗಲಿದ್ದಾನೆ ಎಂದು ಕಿಡಿಕಾರಿದರು.

ಇಡೀ ವಿಧಾನಸೌಧದಲ್ಲಿ ಅಣ್ಣ ತಮ್ಮಂದಿರೇ ಕುಳಿತ್ತಿದ್ದಾರೆ. ಯಡಿಯೂರಪ್ಪ ಸಂಪಾದಿಸಿದ್ದ ಹೆಸರನ್ನು ಹಾಳು ಮಾಡುತ್ತಿದ್ದಾರೆ. ನಾವು ಏನಾದರೂ ಕೇಳಿದರೆ ಎಲ್ಲದಕ್ಕೂ ಸುಮ್ಮನೆ ಹೈಕಮಾಂಡ್ ಹೆಸರು ಬಳಸುತ್ತಾರೆ. ಯಾವ ಹೈಕಮಾಂಡು ಇಲ್ಲ, ಕರ್ನಾಟಕಕ್ಕೆ ಯಡಿಯೂರಪ್ಪನೇ ಹೈಕಮಾಂಡ್ ಎಂದು ಹೇಳಿದರು.

ಯಡಿಯೂರಪ್ಪನವರೇ ನಿಮ್ಮಿಂದ ಏನಾದರೂ ನಿರೀಕ್ಷೆ ಮಾಡಿದ್ದೇನಾ ನಾನು. ಸ್ನೇಹದಲ್ಲಿ ಇದ್ದುದ್ದಕ್ಕೆ ನಿಮಗೆ ಸಹಾಯ ಮಾಡಿದ್ದೇವೆ. ಆದರೆ ನೀವು ಏನು ಮಾತು ಕೊಟ್ಟಿದ್ದೀರಿ ಅಂತ ಹೇಳಿ. ನಾವು ಯಡಿಯೂರಪ್ಪರಿಂದ ಇದನ್ನು ನಿರೀಕ್ಷೆ ಮಾಡಿರಲಿಲ್ಲ. ನಿಮ್ಮ ಸಂಪುಟದಲ್ಲಿ ಎಲ್ಲರೂ ಇರಬೇಕು. ಮುಸ್ಲಿಂ ಕೂಡ ಇರಬೇಕು. ಎಲ್ಲಾ ಜಾತಿ ಜನಾಂಗ ಇರಬೇಕು. ಆದರೆ ಇಲ್ಲೇನಾಗಿದೆ. ನಾಡಿನಲ್ಲಿ ನಾಲಗೆಗೆ ತಪ್ಪದ ನಾಯಕ ಅಂತ ಬಿರುದು ಕೊಟ್ಟಿದ್ದು ನಾವೇ. ಆದರೆ ಅದೆಲ್ಲಾ ಏನಾಯಿತು ಎಂದು ಲೇವಡಿ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News