'ಬ್ಲ್ಯಾಕ್‍ಮೇಲ್ ಮಾಡಿದವರಿಗೆ ಸಚಿವ ಸ್ಥಾನ': ವರಿಷ್ಠರಿಗೆ ದೂರು ನೀಡಲು ದಿಲ್ಲಿಗೆ ತೆರಳಿದ ಶಾಸಕ ರೇಣುಕಾಚಾರ್ಯ

Update: 2021-01-14 13:23 GMT

ಬೆಂಗಳೂರು, ಜ. 14: ಸಚಿವ ಸಂಪುಟದಲ್ಲಿ ಸ್ಥಾನ ಕೈತಪ್ಪಿದ ಆಕಾಂಕ್ಷಿ ಶಾಸಕರೆಲ್ಲರೂ ‘ಬ್ಲ್ಯಾಕ್‍ಮೇಲ್ ಸಿಡಿ' ಸೇರಿದಂತೆ ದಾಖಲೆಗಳನ್ನು ಬಿಜೆಪಿ ವರಿಷ್ಠರಿಗೆ ದೂರು ನೀಡಲು ನಿರ್ಧರಿಸಿರುವುದು ರಾಜಕೀಯ ವಲಯದಲ್ಲಿ ಭಾರೀ ಬಿರುಗಾಳಿಯನ್ನೇ ಸೃಷ್ಟಿಸಿದೆ.

‘ಕರ್ನಾಟಕ ಸರಕಾರ ಕೇವಲ ಎರಡು ಜಿಲ್ಲೆಗೆ (ಬೆಂಗಳೂರು-ಬೆಳಗಾವಿ) ಮಾತ್ರ ಸೀಮಿತವಾಗಬಾರದು. ನಾಯಕತ್ವ ಮತ್ತು ಸಂಘಟನೆ ನನಗೆ ಎಲ್ಲ ಸ್ಥಾನ-ಮಾನ ನೀಡಿದೆ. ಸೋತವರಿಗೆ, ಬ್ಲ್ಯಾಕ್‍ಮೇಲ್ ಮಾಡಿದವರಿಗೆ ಸಚಿವ ಸ್ಥಾನ ನೀಡಿರುವುದರಿಂದ ಪಕ್ಷದ ವರಿಷ್ಠರ ಜೊತೆ ಮತ್ತೆ ಕೂಲಂಕಷವಾಗಿ ಚರ್ಚಿಸುತ್ತೇನೆ' ಎಂದು ಸಿಎಂ ರಾಜಕೀಯ ಕಾರ್ಯದರ್ಶಿಯೂ ಆಗಿರುವ ಹೊನ್ನಾಳಿ ಕ್ಷೇತ್ರದ ಶಾಸಕ ಎಂ.ಪಿ. ರೇಣುಕಾಚಾರ್ಯ ಆಕ್ರೋಶ ಹೊರಹಾಕಿದ್ದಾರೆ.

ಸಚಿವ ಸಂಪುಟಕ್ಕೆ ನೂತನವಾಗಿ ಸೇರ್ಪಡೆಯಾದ ಸಚಿವರೊಬ್ಬರ ಹಗರಣ ಕುರಿತ ದಾಖಲೆಗಳನ್ನು ಪಕ್ಷದ ವರಿಷ್ಠರಿಗೆ ತಲುಪಿಸಲು ನಿರ್ಧರಿಸಿರುವ ಶಾಸಕ ರೇಣುಕಾಚಾರ್ಯ, ಹೊಸದಿಲ್ಲಿಗೆ ತೆರಳಿದ್ದು ಮುಖಂಡರೊಬ್ಬರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿದ್ದಾರೆ ಎಂದು ಗೊತ್ತಾಗಿದೆ.

‘ಭ್ರಷ್ಟಾಚಾರ ರಹಿತ ಆಡಳಿತ ನೀಡುವ ವಾಗ್ದಾನ ಮಾಡಿರುವ ಬಿಜೆಪಿ ಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿರುವಾಗಲೇ ಭ್ರಷ್ಟಾಚಾರದ ಆರೋಪ ಎದುರಿಸುತ್ತಿರುವವರನ್ನು ಸಂಪುಟಕ್ಕೆ ತೆಗೆದುಕೊಂಡಿರುವುದು ಎಷ್ಟರ ಮಟ್ಟಿಗೆ ಸರಿ' ಎಂದು ರೇಣುಕಾಚಾರ್ಯ, ಸಿ.ಪಿ.ಯೋಗೇಶ್ವರ್ ಅವರ ಹೆಸರು ಉಲ್ಲೇಖಿಸದೆಯೇ ಪ್ರಶ್ನಿಸಿದ್ದಾರೆಂದು ಹೇಳಲಾಗಿದೆ.

‘ಬ್ಲ್ಯಾಕ್‍ಮೇಲ್ ಮಾಡಿದವರಿಗೆ, ನಾಯಕತ್ವ ಬದಲಾವಣೆ ಮಾಡಲು ಹೊರಟವರಿಗೆ ಸಚಿವ ಸ್ಥಾನ ನೀಡಲಾಗಿದೆ. ದಿಲ್ಲಿಗೆ ತೆರಳುತ್ತಿದ್ದು, ಯಾವುದೇ ಹಿರಿಯ ನಾಯಕರ ಭೇಟಿಗೆ ಸಮಯ ಕೇಳಿಲ್ಲ. ಸಿಕ್ಕ ನಾಯಕರನ್ನು ಭೇಟಿಯಾಗಿ ಮಾತನಾಡಿಕೊಂಡು ಬರುವೆ. ನಾನು ಎಂದಿಗೂ ಪಕ್ಷ ಸಂಘಟನೆ ವಿರುದ್ಧವಾಗಲೀ, ನಾಯಕತ್ವದ ಬಗ್ಗೆಯಾಗಲೀ ಮಾತನಾಡಿಲ್ಲ. ಆರಕ್ಕೂ ಹೆಚ್ಚು ಬಾರಿ ಆಯ್ಕೆಯಾದವರನ್ನು ಬಿಟ್ಟು ನಾಯಕತ್ವ ಬದಲಾವಣೆಗಾಗಿ ಓಡಾಡುತ್ತಿದ್ದವರಿಗೆ, ಶಾಸಕರಲ್ಲಿ ವಿಷಬೀಜ ಬಿತ್ತಿ ಹುಳಿಹಿಂಡಲು ಯತ್ನಿಸಿದವರಿಗೆ ಸಂಪುಟದಲ್ಲಿ ಮಣೆ ಹಾಕಿದ್ದಾರೆ' ಎಂದು ರೇಣುಕಾಚಾರ್ಯ ಬೇಸರ ವ್ಯಕ್ತಪಡಿಸಿದರು.

‘ಯಡಿಯೂರಪ್ಪ ಮತ್ತು ಮೋದಿಯವರ ಮುಖ ನೋಡಿ ವಿವಿಧ ಪಕ್ಷಗಳ ಶಾಸಕರು ಬಿಜೆಪಿಗೆ ಬಂದರು. ಸಿ.ಪಿ.ಯೋಗೇಶ್ವರ್ ಮುಖ ನೋಡಿ ಎಂಟಿಬಿ ನಾಗರಾಜ್ ಮತ್ತು ಆರ್.ಶಂಕರ್ ಬರಲಿಲ್ಲ. ಪಕ್ಷಕ್ಕೆ, ಸರಕಾರಕ್ಕೆ ಯೋಗೇಶ್ವರ್ ಕೊಡುಗೆ ಏನು ಎಂದು ರೇಣುಕಾಚಾರ್ಯ ಅವರು ಪ್ರಶ್ನಿಸಿದರು.

ತಮ್ಮ ಕ್ಷೇತ್ರದಲ್ಲಿಯೇ ಅವರಿಗೆ ಗೆಲ್ಲಲು ಆಗಲಿಲ್ಲ. ಲೋಕಸಭೆ ಚುನಾವಣೆ, ರಾಮನಗರ ಉಪಚುನಾವಣೆಯಲ್ಲಿ ತಾವು ಸ್ಪರ್ಧಿಸದೇ ಬೇರೆಯವರನ್ನು ನಿಲ್ಲಿಸಿ ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡರು. ಮೆಗಾಸಿಟಿ ಯೋಜನೆಯಲ್ಲಿ ದೊಡ್ಡ ಹಗರಣ ಆಗಿದೆ. ನಮ್ಮ ನಾಯಕರಿಗೆ ಈ ಬಗ್ಗೆ ದೂರು ಹೇಳುವೆ. ಸಮಯ ಬಂದಾಗ ದಾಖಲೆಗಳನ್ನು ಬಿಡುಗಡೆ ಮಾಡುತ್ತೇನೆ ಎಂದು ರೇಣುಕಾಚಾರ್ಯ ವಾಗ್ದಾಳಿ ನಡೆಸಿದರು.

ಏನೂ ಇಲ್ಲದ ವೇಳೆ ಪಕ್ಷದ ಟಿಕೆಟ್ ನೀಡಿ ಬಿಎಸ್‍ವೈ ಅವರು ನನ್ನನ್ನು ಬೆಳೆಸಿದರು. ಆದರೆ, ನಿನ್ನೆ ರಚನೆಯಾದ ಸಂಪುಟ ವಿಸ್ತರಣೆಯಲ್ಲಿ ಮಧ್ಯಕರ್ನಾಟಕ ಹಾಗೂ ದಾವಣಗೆರೆ ಜಿಲ್ಲೆಯ ಯಾರಿಗಾದರೂ ಅವಕಾಶ ಕೊಡಬೇಕೆಂದು ಮನವಿ ಮಾಡಿಕೊಳ್ಳಲಾಗಿತ್ತು. ಆದರೆ, ಅನ್ಯಾಯ ಮಾಡಲಾಗಿದೆ ಎಂದು ದೂರಿದರು.

‘ಯಡಿಯೂರಪ್ಪ ಅವರು ನನಗೆ ತಂದೆ ಸಮಾನ, ಪಕ್ಷ ತಾಯಿ ಸಮಾನ. ನನಗೆ ನೋವಾಗಿರುವುದನ್ನು ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದೇನೆ. ಪಕ್ಷ, ಸಂಘಟನೆ ಮತ್ತು ನಾಯಕತ್ವದ ವಿರುದ್ಧ ನಮ್ಮ ಅಸಮಾಧಾನವಿಲ್ಲ. ಸೂಕ್ತ ಕಾಲದಲ್ಲಿ ಎಲ್ಲದಕ್ಕೂ ಉತ್ತರ ಕೊಡುತ್ತೇನೆ' ಎಂದು ಅವರು ದಿಲ್ಲಿಗೆ ಪ್ರಯಾಣ ಬೆಳೆಸಿದರು.

‘ಜಾತಿ ರಾಜಕೀಯ ಮಾಡಿ ನನಗೆ ಅಭ್ಯಾಸವಿಲ್ಲ. ಸೋತವರಿಗೆ ಸಚಿವ ಸ್ಥಾನ ನೀಡಿ ಹೊನ್ನಾಳಿ-ನ್ಯಾಮತಿ ಅವಳಿ ತಾಲೂಕಿನ ಸರ್ವ ಜನಾಂಗದ ಮತದಾರರಿಗೆ ಮಾಡಿದ ಅಪಮಾನ. ಹೊನ್ನಾಳಿ-ನ್ಯಾಮತಿ ಅವಳಿ ತಾಲೂಕಿನ ಅಭಿವೃದ್ಧಿಯೆ ನನ್ನ ಧ್ಯೇಯ' ಎಂದು ಅವರು ತಿಳಿಸಿದರು.

‘ಸಚಿವ ಸ್ಥಾನ ಸಿಗಲಿಲ್ಲವೆಂದು ಸಹಜವಾಗಿ ಆಘಾತವಾಗಿದೆ. ನಾಯಕತ್ವ ಮತ್ತು ಪಕ್ಷದ ಮೇಲೆ ಹೆಚ್ಚು ವಿಶ್ವಾಸವಿಟ್ಟಿದ್ದಿನಿ. ಮಂದೆಯು ಇಡುತ್ತೇನೆ. ನನ್ನ ಹೋರಾಟ ಪಕ್ಷ ಮತ್ತು ನಾಯಕತ್ವದ ವಿರುದ್ಧವಲ್ಲ. ಈಗ ಸರಕಾರದಲ್ಲಾಗಿರುವ ತಪ್ಪು ವ್ಯವಸ್ಥೆ ವಿರುದ್ಧ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಗೆದ್ದ ಶಾಸಕರಿಗೆ ಮತದಾನ ಮಾಡಿದ ಮತದಾರರಿಗೆ ಮಾಡಿದ ಅವಮಾನವಿದು'

-ಎಂ.ಪಿ.ರೇಣುಕಾಚಾರ್ಯ, ಬಿಜೆಪಿ ಶಾಸಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News